ಗುರುವಾರ , ಮಾರ್ಚ್ 30, 2023
21 °C

ರೋಹಿತ್ ಶರ್ಮಾ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯನ್ನು ಪ್ರಶ್ನಿಸಿದ ಗವಾಸ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನ್ಯೂಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 'ಹಿಟ್‌ಮ್ಯಾನ್' ಖ್ಯಾತಿಯ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿರುವುದು ಹಲವಾರು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಈ ಕುರಿತು ಹೇಳಿಕೆ ನೀಡಿರುವ ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್, 'ಮೂರನೇ ಸ್ಥಾನಕ್ಕೆ ಹಿಂಬಡ್ತಿ ನೀಡುವ ಮೂಲಕ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ ಇನ್‌ಸ್ವಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ರೋಹಿತ್ ಶರ್ಮಾ ಅವರ ಮೇಲೆ ಟೀಮ್ ಇಂಡಿಯಾ ನಂಬಿಕೆಯನ್ನು ಇರಿಸಲಿಲ್ಲ ಎಂಬುದನ್ನು ಸೂಚಿಸುತ್ತದೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯೆಂಬಂತೆ ರೋಹಿತ್ ಶರ್ಮಾ-ಕೆ.ಎಲ್ ರಾಹುಲ್ ಬದಲು ಇಶಾನ್ ಕಿಶನ್ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೂ ಭಾರತದ ಅದೃಷ್ಟ ಬದಲಾಗಲಿಲ್ಲ. ಎಂಟು ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಡಗೈ ವೇಗಿ ಶಾಹೀನ್ ಅಫ್ರಿದಿ ದಾಳಿಯಲ್ಲಿ ರೋಹಿತ್ ಔಟ್ ಆಗಿದ್ದರು. ಇದರಿಂದಾಗಿ ರೋಹಿತ್ ಕ್ರಮಾಂಕದಲ್ಲಿ ಬದಲಾವಣೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

'ಇಶಾನ್ ಅವರಂತಹ ಹೊಡೆಬಡಿಯ ಬ್ಯಾಟರ್‌ಗಳನ್ನು 4ನೇ ಅಥವಾ 5ನೇ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಪರಿಸ್ಥಿತಿಗೆ ತಕ್ಕ ಆಟವಾಡಬಹುದಿತ್ತು. ಈಗ ರೋಹಿತ್ ವಿಚಾರದಲ್ಲಿ ಏನಾಯಿತು ಎಂದರೆ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಬೌಲಿಂಗ್ ಎದುರಿಸಲು ನಾವು ನಿಮ್ಮ ಮೇಲೆ ನಂಬಿಕೆ ಇರಿಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ' ಎಂದು ಗವಾಸ್ಕರ್ ಹೇಳಿದ್ದಾರೆ.

'ಇಷ್ಟು ವರ್ಷಗಳಿಂದ ಒಂದೇ ಕ್ರಮಾಂಕದಲ್ಲಿ ಆಡುತ್ತಿರುವ ಓರ್ವ ಆಟಗಾರನಿಗೆ ಹೀಗೆ ಮಾಡಿದರೆ ಬಹುಶಃ ಆತನೇ ನನಗೆ ಸಾಮರ್ಥ್ಯವಿಲ್ಲ ಎಂದು ಭಾವಿಸುತ್ತಾನೆ. ಕಿಶಾನ್ ಕಿಶನ್ 70 ರನ್ ಗಳಿಸುತ್ತಿದ್ದರೆ ಎಲ್ಲರೂ ಕೈಚಪ್ಪಾಳೆ ತಟ್ಟುತ್ತಿದ್ದರು. ಆದರೆ ಪರಿಣಾಮ ಬೇರೆಯಾದಾಗ ಟೀಕೆ ಎದುರಾಗುತ್ತದೆ' ಎಂದಿದ್ದಾರೆ.

'ಇದು ವೈಫಲ್ಯದ ಭಯವೋ ಎಂಬುದು ನನಗೆ ಗೊತ್ತಿಲ್ಲ. ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದಿರುವ ಯೋಜನೆಯು ಫಲಿಸಲಿಲ್ಲ. ರೋಹಿತ್ ಅವರಂತಹ ಅತ್ಯುತ್ತಮ ಬ್ಯಾಟರ್ ಅನ್ನು ಮೂರನೇ ಕ್ರಮಾಂಕದಲ್ಲಿ ರವಾನಿಸಲಾಯಿತು. ಸ್ವತಃ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದರು. ಇಶಾನ್‌ರಂತಹ ಯುವ ಆಟಗಾರನಿಗೆ ಅಗ್ರ ಕ್ರಮಾಂಕದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲಾಯಿತು' ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು