ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA ಟೆಸ್ಟ್ ಸರಣಿ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ

Last Updated 26 ಡಿಸೆಂಬರ್ 2021, 7:59 IST
ಅಕ್ಷರ ಗಾತ್ರ

ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯ 'ಬಾಕ್ಸಿಂಗ್‌ ಡೇ' ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ.

ಕನ್ನಡಿಗರಾದ ಕೆ.ಎಲ್‌. ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಜೋಡಿ ಇನಿಂಗ್ಸ್‌ ಆರಂಭಿಸಲಿದ್ದು, ಅನುಭವಿಗಳಾದ ಚೇತೇಶ್ವರ್‌ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ.

ತಂಡದಲ್ಲಿ ಐವರು ಬೌಲರ್‌ಗಳು ಆಡಲಿದ್ದು, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್, ಸ್ಪಿನ್ನರ್‌ ಆರ್‌.ಅಶ್ವಿನ್‌ ಅವರೊಂದಿಗೆ, ಭರವಸೆಯ ವೇಗಿ ಮೊಹಮ್ಮದ್ ಸಿರಾಜ್‌ಗೆ ಸ್ಥಾನ ನೀಡಲಾಗಿದೆ.

ಸೆಂಚುರಿಯನ್‌ನಲ್ಲಿ ಈ ಹಿಂದೆ ಆಡಿರುವ ಎರಡೂ ಪಂದ್ಯಗಳಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪಡೆಯೇ ಗೆಲುವಿನ ನಗೆ ಬೀರಿದೆ.

ಏಕದಿನ ಮತ್ತು ಟಿ20 ತಂಡಗಳ ನಾಯಕತ್ವದಿಂದ ಕೆಳಗಿಳಿದ ಬಳಿಕ ಟೆಸ್ಟ್‌ ತಂಡ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಪಾಲಿಗೆ ಇದು ಸವಾಲಿನ ಸರಣಿಯಾಗಿದೆ.ಹರಿಣಗಳ ನಾಡಿಗೆ 1992ರಲ್ಲಿ ಮೊದಲ ಬಾರಿಗೆ ಪ್ರವಾಸ ಕೈಗೊಂಡಾಗಿನಿಂದ ಇಲ್ಲಿಯವರೆಗೆ ಭಾರತ ಒಮ್ಮೆಯೂ ಟೆಸ್ಟ್ ಸರಣಿ ಗೆದ್ದಿಲ್ಲ. ಕಳೆದೆರಡು ವರ್ಷಗಳಿಂದ ಕೊಹ್ಲಿ ಬ್ಯಾಟ್‌ನಿಂದಲೂ ಒಂದೇಒಂದು ಶತಕ ಸಿಡಿದಿಲ್ಲ. ಹೀಗಾಗಿ, ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಲಯಕ್ಕೆ ಮರುಳುವ ಒತ್ತಡ ಅವರ ಮೇಲಿದೆ.

ಆಡುವ ಹನ್ನೊಂದರ ಬಳಗ
ಭಾರತ:ಕೆ.ಎಲ್‌. ರಾಹುಲ್‌, ಮಯಂಕ್‌ ಅಗರವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌,ಆರ್‌.ಅಶ್ವಿನ್‌,ಶಾರ್ದೂಲ್‌ ಠಾಕೂರ್,ಮೊಹಮ್ಮದ್‌ ಶಮಿ,ಮೊಹಮ್ಮದ್ ಸಿರಾಜ್‌, ಜಸ್‌ಪ್ರೀತ್‌ ಬೂಮ್ರಾ

ದಕ್ಷಿಣ ಆಫ್ರಿಕಾ: ಡೀನ್‌ ಎಲ್ಗರ್‌ (ನಾಯಕ), ಕೀಗನ್‌ ಪೀಟರ್ಸನ್‌, ರಸ್ಸಿ ವ್ಯಾನ್ ಡರ್ ಡಸ್ಸೇನ್,ತೆಂಬಾ ಬವುಮಾ, ಕ್ವಿಂಟನ್ ಡಿಕಾಕ್, ಎಡನ್ ಮಾರ್ಕರಮ್, ವಿಯಾನ್ ಮುಲ್ಡೆರ್, ಮಾರ್ಕೊ ಜಾನ್ಸನ್, ಕೇಶವ್ ಮಹರಾಜ್, ಕಗಿಸೊ ರಬಾಡ, ಲುಂಗಿ ಗಿಡಿ

ಬಾಕ್ಸಿಂಗ್ ಡೇ ಅಂದರೇನು?
ಬಾಕ್ಸಿಂಗ್ ಡೇ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‌ನಲ್ಲಿ. ಕ್ರಿಸ್‌ಮಸ್‌ನ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯುತ್ತಾರೆ. ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಈ ದಿನವನ್ನು ಸೇಂಟ್ ಸ್ಟೀಫನ್ಸ್‌ ದಿನ ಎಂದೂ ಕರೆಯುತ್ತಾರೆ. ರೊಮೇನಿಯಾ, ಹಂಗರಿ, ಜರ್ಮನಿ, ಪೋಲೆಂಡ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಈ ದಿನ ಎರಡನೇ ಕ್ರಿಸ್‌ಮಸ್.

ಯುರೋಪ್‌ ರಾಷ್ಟ್ರಗಳಲ್ಲಿ ವರ್ಷದ ಕೊನೆಯ ವಾರ ಚರ್ಚ್‌ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್‌) ಇರಿಸಿ ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ. ಈ ‘ಬಾಕ್ಸ್‌’ಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿರಬೇಕು ಎನ್ನಲಾಗುತ್ತದೆ. ಈ ದಿನ ಆರಂಭವಾಗುವ ಪಂದ್ಯವನ್ನು ಬಾಕ್ಸಿಂಗ್ ಡೇ ಮ್ಯಾಚ್ ಎಂದು ಕರೆಯುವುದು ಕ್ರೀಡಾಕ್ಷೇತ್ರದಲ್ಲಿ ಮೊದಲಿನಿಂದಲೂ ಇರುವ ರೂಢಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT