ಮಂಗಳವಾರ, ಜೂನ್ 2, 2020
27 °C

ಕೋವಿಡ್–19 | ₹42 ಲಕ್ಷ ದೇಣಿಗೆ ನೀಡಿದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌರಾಷ್ಟ್ರ: ಜಾಗತಿಕ ಪಿಡುಗು ಕೋವಿಡ್‌–19 ನಿರ್ಮೂಲನೆ ಸಲುವಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯು (ಎಸ್‌ಸಿಎ) ₹ 42 ಲಕ್ಷ ದೇಣಿಗೆ ನೀಡಲು ನಿರ್ಧರಿಸಿದೆ. ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಗುಜರಾತ್‌ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ₹ 21 ಲಕ್ಷ ನೀಡಲಿದೆ.

ಈ ಸಂಬಂಧ ಎಸ್‌ಸಿಎ ಪ್ರಕಟಣೆ ಹೊರಡಿಸಿದ್ದು ಅದರಲ್ಲಿ, ‘ಎಸ್‌ಸಿಎ ಭಾರತದ ನಾಗರೀಕರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಮನವಿ ಮಾಡಿಕಕೊಳ್ಳುತ್ತೇವೆ’ ಎಂದು ತಿಳಿಸಿದೆ.

ಪಶ್ಚಿಮ ಬಂಗಾಳ ತುರ್ತು ಪರಿಹಾರ ನಿಧಿಗೆ ಬಂಗಾಳ ಕ್ರಿಕೆಟ್ ಸಂಸ್ಥೆ ₹ 25 ಲಕ್ಷ ಮತ್ತು ಆ ಸಂಸ್ಥೆಯ ಮುಖ್ಯಸ್ಥ ಅವಿಶೇಕ್‌ ದಾಲ್ಮಿಯಾ ವೈಯಕ್ತಿಕವಾಗಿ ₹ 5 ಲಕ್ಷ ದೇಣಿಗೆ ನೀಡಿದ್ದಾರೆ. ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಈ ಬಾರಿಯ (2019–20) ರಣಜಿ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದವು. ಸೌರಾಷ್ಟ್ರ ಚಾಂಪಿಯನ್‌ ಆಗಿತ್ತು.

ಮಾತ್ರವಲ್ಲದೆ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 50 ಲಕ್ಷ ದೇಣಿಗೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸಂಕಷ್ಟದಲ್ಲಿರುವವರಿಗಾಗಿ ₹ 50 ಲಕ್ಷ ಮೌಲ್ಯದ ಅಕ್ಕಿ ನೀಡುವುದಾಗಿ ಘೋಷಿಸಿದ್ದಾರೆ. ಅಥ್ಲೀಟ್‌ಗಳಾದ ಭಜರಂಗ್‌ ಪೂನಿಯಾ ಹಾಗೂ ವೇಗದ ಓಟಗಾರ್ತಿ ಹಿಮಾ ದಾಸ್‌ ಅವರು ಮಾಸಿಕ ವೇತನ ನೀಡುವುದಾಗಿ ಹೇಳಿದ್ದಾರೆ.

ಕ್ರಿಕೆಟಿಗರಾದ ಯುಸೂಫ್‌ ಹಾಗೂ ಇರ್ಫಾನ್‌ ಪಠಾಣ್‌ ಅವರು  4 ಸಾವಿರ ಮುಖಗವಸುಗಳನ್ನು ಬರೋಡಾ ಪೊಲೀಸರಿಗೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಪುಣೆ ಮೂಲದ ಎನ್‌ಜಿಒಗೆ ₹ 1 ಲಕ್ಷ ದೇಣಿಗೆ ನೀಡಿದ್ದಾರೆ.

ಕೋವಿಡ್‌–19 ಭೀತಿಯಿಂದಾಗಿ ಘೋಷಿಸಲಾಗಿರುವ ಲಾಕ್‌ಡೌನ್‌ ಆದೇಶವು ಏಪ್ರಿಲ್‌ 14ರ ವರೆಗೆ ಜಾರಿಯಲ್ಲಿರಲಿದೆ. ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪೀಡಿತರ ಸಂಖ್ಯೆ 730ನ್ನು ದಾಟಿದೆ. ಭಾರತದಲ್ಲಿ ಇದುವರೆಗೆ ಒಟ್ಟು 17 ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 5.3 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, 23 ಸಾವಿರ ಮಂದಿ ಮೃತಪಟ್ಟಿದ್ದಾರೆ.

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

    ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

    ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

    ಈ ವಿಭಾಗದಿಂದ ಇನ್ನಷ್ಟು