ಸೋಮವಾರ, ಮಾರ್ಚ್ 1, 2021
31 °C
ರಣಜಿ ಟ್ರೋಫಿ ಕ್ರಿಕೆಟ್‌: ಸೌರಾಷ್ಟ್ರದ ಮಧ್ಯಮವೇಗಿ ಹಾಕಿದ್ದು ಒಂದೇ ಓವರ್!

ಕಳಪೆ ಪಿಚ್‌ನಲ್ಲಿ ಮಣ್ಣುಮುಕ್ಕಿತೇ ಕ್ರಿಕೆಟ್?

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಾನು ಪಿಚ್ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಟಿವಿಯಲ್ಲಿ ಪಂದ್ಯದ ನೇರಪ್ರಸಾರವನ್ನು ಎಲ್ಲರೂ ನೋಡಿರಬಹುದು. ಪಿಚ್ ಯಾವ ರೀತಿ ಇತ್ತು ಎಂಬುದನ್ನು ನೋಡಿರುತ್ತಾರೆ. ನಾವು ಎರಡನೇ ಇನಿಂಗ್ಸ್‌ ನಲ್ಲಿ 91 ರನ್‌ ಗಳಿಸಿದ್ದು ದೊಡ್ಡ ಸಂತಸದ ವಿಷಯ’–

ಕರ್ನಾಟಕ ತಂಡದ ನಾಯಕ ಆರ್. ವಿನಯಕುಮಾರ್ ಶನಿವಾರ ಸೌರಾಷ್ಟ್ರದ ಎದುರಿನ ಪಂದ್ಯದ ನಂತರ ನೀಡಿದ ಹೇಳಿಕೆ ಇದು. ಅದರಲ್ಲಿರುವ ವ್ಯಂಗ್ಯವನ್ನು ಅರ್ಥ ಮಾಡಿಕೊಂಡರೆ ಹಲವು ವಿಷಯಗಳು ಗಮನ ಸೆಳೆ ಯುತ್ತವೆ. ಮೊದಲ ದಿನದಿಂದಲೇ  ಹುಡಿ ಹಾರುತ್ತಿದ್ದ ಪಿಚ್‌ನಲ್ಲಿ ಮಧ್ಯಮ ವೇಗಿಗಳಿಗೆ ಯಾವುದೇ ನೆರವು ದೊರೆ ಯಲಿಲ್ಲ. ಕೇವಲ ಸ್ಪಿನ್ನರ್‌ಗಳಿಗೆ ಮಾತ್ರ ಇಲ್ಲಿ ಆಡಲು ಸಾಧ್ಯವಿತ್ತು.

‘ಸೌರಾಷ್ಟ್ರ ಸಂಸ್ಥೆಯು ಬೇಕೆಂತಲೇ ಇಂತಹ ಪಿಚ್ ಮಾಡಿದೆ. ಅವರ ತಂಡದ ಪಟ್ಟಿಯ ಮೇಲೆ ಕಣ್ಣಾಡಿಸಿ ನೋಡಿ.  ಮೂವರು ಸ್ಪಿನ್ನರ್‌ಗಳಿದ್ದಾರೆ. ಮಧ್ಯಮವೇಗಿಗಳು ಹೆಚ್ಚು ಬೌಲಿಂಗ್ ಮಾಡಿಲ್ಲ. ಅದೇ ಕರ್ನಾಟಕದ ತಂಡದಲ್ಲಿ ಅನುಭವಿ ಮಧ್ಯಮವೇಗಿಗಳು ಇದ್ದಾರೆ. ಅವರು ನಮ್ಮ ತಂಡದ ಶಕ್ತಿ ಎಂಬುದು ಗೊತ್ತಿದ್ದರಿಂದಲೇ ಎಸ್‌ಸಿಎ ಈ ರೀತಿ ಮಾಡಿದೆ. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ನಡೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸುಧಾಕರ ರಾವ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಬಳಗವು ಮೊದಲ ಇನಿಂಗ್ಸ್‌ನಲ್ಲಿ 316 ರನ್‌ಗಳನ್ನು ಪೇರಿಸಿತ್ತು. ಆದರೆ, ಕರ್ನಾಟಕದ ಮಧ್ಯಮವೇಗಿಗಳಾದ ವಿನಯಕುಮಾರ್ ಮತ್ತು ಅಭಿಮನ್ಯು ಮಿಥುನ್ ಕ್ರಮವಾಗಿ ಆರು ಮತ್ತು ಎಂಟು ಓವರ್‌ ಮಾತ್ರ ಬೌಲಿಂಗ್ ಮಾಡಿದ್ದರು. ಉಳಿದ 83 .1 ಓವರ್‌ಗಳನ್ನು ಜೆ. ಸುಚಿತ್, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್ ಮತ್ತು ಸಮರ್ಥ್ ಸೇರಿ ಹಾಕಿದ್ದರು.  ಕರ್ನಾಟಕ ಬ್ಯಾಟಿಂಗ್ ಆರಂಭಿಸಿದಾಗ ಪಿಚ್‌ ಸ್ಥಿತಿ ಇನ್ನಷ್ಟು ತಳಮಟ್ಟಕ್ಕೆ ಹೋಗಿತ್ತು. ಸೌರಾಷ್ಟ್ರದ ಮಧ್ಯಮವೇಗಿ ಚಿರಾಗ್ ಜಾನಿ ಕೇವಲ ಒಂದು ಓವರ್ ಬೌಲ್ ಮಾಡಿದರು. ಅದರ ನಂತರ ಉಳಿದ ಮೂವರು ಸ್ಪಿನ್ನರ್‌ಗಳದ್ದೇ ಆಟ. ಅನಿರೀಕ್ಷಿತ ಬೌನ್ಸ್‌, ಸ್ಕಿಡ್ ಆಗುತ್ತಿದ್ದ ಚೆಂಡಿನ ಲಯವನ್ನು ಗುರುತಿಸಲು ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಅದರಲ್ಲಿಯೇ  ಡಿ. ನಿಶ್ಚಲ್ ಮತ್ತು ಕರುಣ್ ನಾಯರ್ ಅರ್ಧಶತಕಗಳನ್ನು ಮಾಡಿದ್ದರು. ಆದರೆ, ತಂಡವು 100 ರನ್‌ಗಳ ಹಿನ್ನಡೆ ಅನುಭವಿಸಿತ್ತು.

ಮೂರನೇ ದಿನ ಎಲ್ಲರ ಕಣ್ಣುಕುಕ್ಕುವಂತೆ ಪಿಚ್ ವರ್ತಿಸಿತ್ತು. ಸೌರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 79 ರನ್‌ಗಳಿಗೆ ದೂಳೀಪಟವಾಯಿತು. 179 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು ನೂರು ರನ್‌ ಗಳಿಸಲೂ ಸಾಧ್ಯವಾಗಲಿಲ್ಲ. ಈ ಇನಿಂಗ್ಸ್‌ನಲ್ಲಿ ಸೌರಾಷ್ಟ್ರದ ಮೂವರು ಸ್ಪಿನ್ನರ್‌ಗಳಷ್ಟೇ ಬೌಲಿಂಗ್ ಮಾಡಿದ್ದರು.

ಇದೇ ಮೊದಲಲ್ಲ: ಆತಿಥೇಯ ಸಂಸ್ಥೆಗಳು ಪಿಚ್‌ಗಳನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವ ಕಾರಣದಿಂದಲೇ ಎರಡು ವರ್ಷಗಳ ಹಿಂದೆ ಲೀಗ್ ಪಂದ್ಯಗಳನ್ನೂ ತಟಸ್ಥ ತಾಣಗಳಲ್ಲಿ ನಡೆಸುವ ಕ್ರಮಕ್ಕೆ ಬಿಸಿಸಿಐ ಮುಂದಾಗಿತ್ತು. ಆದರೆ ಹೋದ ವರ್ಷ ನಿಯಮ ಬದಲಿಸಿ ಕೇವಲ ನಾಕೌಟ್ ಹಂತದ ಪಂದ್ಯಗಳನ್ನು ಮಾತ್ರ ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತಿದೆ. ಇದೀಗ ಮತ್ತೆ ಸಮಸ್ಯೆ ತಲೆದೋರಿದೆ.

ಇಂತಹ ಪ್ರಕರಣ ಇದೇ ಮೊದ ಲೇನಲ್ಲ. 2011ರಲ್ಲಿಯೂ ಇಂತಹ ಘಟನೆ ನಡೆದಿತ್ತು. ವಡೋದರಾದಲ್ಲಿ ನಡೆದಿದ್ದ ರಣಜಿ ಸೆಮಿಫೈನಲ್‌ನಲ್ಲಿ ಬರೋಡಾ ತಂಡದ ಎದುರು ಕರ್ನಾಟಕ ತಂಡವು ಆಡಿದ್ದಾಗ ಇಂತಹದ್ದೇ ಪಿಚ್ ಇತ್ತು. ಆಗ ಕರ್ನಾಟಕ ಸೋತಿತ್ತು. ತದನಂತರ ಬಿಸಿಸಿಐಗೆ ದೂರು ಸಲ್ಲಿಸಿತ್ತು. ಈ ಬಾರಿ ಬರೋಡಾ ಪಕ್ಕದ ಸೌರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. ಅದೂ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆದ ಕ್ರೀಡಾಂಗಣದಲ್ಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು