ಭಾನುವಾರ, ಏಪ್ರಿಲ್ 11, 2021
31 °C

ಮೊಟೇರಾ ಪಿಚ್‌: ಇಂಗ್ಲೆಂಡ್ ಮಾಧ್ಯಮಗಳ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಗುರುವಾರ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ಎದುರು ಸೋತ ಇಂಗ್ಲೆಂಡ್ ತಂಡದ ಆಟವನ್ನು ಕಳಪೆ ಎಂದು ಬ್ರಿಟನ್‌ನ ಕೆಲವು ಮಾಧ್ಯಮಗಳು ಟೀಕಿಸಿವೆ. ಇನ್ನೂ ಕೆಲವು ಮಾಧ್ಯಮಗಳು ಪಿಚ್‌ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

ಎರಡನೇ ದಿನವೇ ಅಂತ್ಯವಾದ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಂದ ಸೋತಿತ್ತು.  ಇದರಿಂದಾಗಿ ಭಾರತ ತಂಡವು ಸರಣಿಯಲ್ಲಿ 2–1 ಮುನ್ನಡೆ ಗಳಿಸಿತು.

’ಇಂಗ್ಲೆಂಡ್ ತಂಡವು ಎರಡನೇ  ದಿನವೇ ಶರಣಾಗಿರುವುದನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಬಹಳಷ್ಟು ತಪ್ಪುಗಳು ತಂಡದಿಂದ ಘಟಿಸಿವೆ. ರೊಟೇಷನ್ ನೀತಿಯೂ ಪೆಟ್ಟುಕೊಟ್ಟಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ಕೊಟ್ಟಿದ್ದು ಸರಿಯಲ್ಲ. ಚೆನ್ನೈನಲ್ಲಿ ಎರಡನೇ ಟೆಸ್ಟ್ ನಲ್ಲಿ ಸೋತ ಆಘಾತದಿಂದಲೂ ತಂಡ ಹೊರಬಂದಿಲ್ಲ‘ ಎಂದು ದ ಗಾರ್ಡಿಯನ್ ಬರೆದಿದೆ.

ದ ಸನ್ ಪತ್ರಿಕೆಯು ಇಂಗ್ಲೆಂಡ್ ತಂಡವನ್ನು ’ಅಸಮರ್ಥ‘ ಎಂದು ಟೀಕಿಸಿದೆ.

’ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಇಂಗ್ಲೆಂಡ್ ತಂಡವು ಇಷ್ಟು ದುರ್ಬಲವಾಗಿ ಕಂಡಿರಲಿಲ್ಲ‘ ಎಂದು ವಿಸ್ಡನ್ ಚಾಟಿ ಬೀಸಿದೆ.

ಆದರೆ, ’ದ ಮಿರರ್‘ ಪತ್ರಿಕೆಯು, ’ಪಿಚ್ ಸಿದ್ಧಪಡಿಸುವ ವಿಷಯದಲ್ಲಿ ಭಾರತವು ಕ್ರೀಡಾ ಸ್ಪೂರ್ತಿಯ ಎಲ್ಲೆಯನ್ನು ಮೀರುವತ್ತ ಹೆಜ್ಜೆ ಇಟ್ಟಿದೆ‘ ಎಂದು ಟೀಕಿಸಿದೆ.

’90 ವರ್ಷಗಳ ನಂತರ ಅತ್ಯಂತ ಚುಟುಕಾದ ಅವಧಿಯಲ್ಲಿ ಮುಗಿದ ಟೆಸ್ಟ್ ಇದು. ತವರಿನಂಗಳದ ಲಾಭ ಪಡೆದುಕೊಳ್ಳುವುದು ತಪ್ಪಲ್ಲ. ಆದರೆ, ಉತ್ಕೃಷ್ಠವಲ್ಲದ ಪಿಚ್ ನಿರ್ಮಿಸುವುದೂ ಸರಿಯಲ್ಲ‘ ಎಂದು ಬರೆದಿದೆ.

’ಟೆಸ್ಟ್‌ಗೆ ಅಯೋಗ್ಯವಾದ ಪಿಚ್ ಇದು. ಇದರಲ್ಲಿ ಗೆಲ್ಲುವ ಮೂಲಕ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್‌ಗಳನ್ನು ಸೂರೆ ಮಾಡಿದೆ‘ ಎಂದು ಕ್ರಿಕೆಟ್ ಲೇಖಕ ಸೈಕಲ್ಡ್ ಬೆರಿ ’ದ ಟೆಲಿಗ್ರಾಫ್‌‘ ನಲ್ಲಿ ಬರೆದಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು