ಸೋಮವಾರ, ಮಾರ್ಚ್ 30, 2020
19 °C

ಅಂದು ‘ಸಚಿನ್, ಸಚಿನ್’ ಎನ್ನುತ್ತಿದ್ದಾಕೆಯೇ ಇಂದು ಕ್ರಿಕೆಟ್ ದೇವರ ದಾಖಲೆ ಮುರಿದಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಢ: ಸರಿಯಾಗಿ ಆರು ವರ್ಷಗಳ ಹಿಂದೆ ಲಾಹ್ಲಿಯ ಬನ್ಸಿ ಲಾಲ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರು ತಮ್ಮ ಕ್ರಿಕೆಟ್‌ ಬದುಕಿನ ಕೊನೆಯ ರಣಜಿ ಪಂದ್ಯ ಆಡುತ್ತಿದ್ದರು. ಪಂದ್ಯ ವೀಕ್ಷಿಸಲು ಬಂದಿದ್ದ 9 ವರ್ಷದ ಬಾಲಕಿಯೊಬ್ಬಳು ಅಪ್ಪನ ಹೆಗಲೇರಿ ಕುಳಿತು, ‘ಸಚಿನ್‌.. ಸಚಿನ್‌..’ ಎನ್ನುತ್ತಾ ಒಂದೇ ಸಮನೆ ಕೂಗಿಕೊಳ್ಳುತ್ತಿದ್ದಳು. ಸಚಿನ್‌ ತೆಂಡೂಲ್ಕರ್‌ ಮೇಲಿನ ಅಪಾರ ಅಭಿಮಾನದಿಂದ ಚೀರುತ್ತಿದ್ದ ಆ ಹುಡುಗಿ ಮುಂದೊಂದು ದಿನ ಕ್ರಿಕೆಟ್ ದೇವರ ದಾಖಲೆ ಮುರಿಯುತ್ತಾಳೆ ಎಂದು ಯಾರೊಬ್ಬರೂ ಎಣಿಸಿರಲಿಲ್ಲ.

ಆಗ ಅಲ್ಲಿದ್ದಾಕೆಯೇ ಮೊನ್ನೆ ವೆಸ್ಟ್‌ಇಂಡೀಸ್‌ ವಿರುದ್ಧ ಗ್ರಾಸ್‌ ಐಲ್‌ನ ಡ್ಯಾರೆನ್ ಸಮಿ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ, ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡ ಶೆಫಾಲಿ ವರ್ಮಾ.

ಮೂವತ್ತು ವರ್ಷಗಳ ಹಿಂದೆ(1989) ಫೈಸಲಾಬಾದ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಸಚಿನ್‌, 59 ರನ್‌ ಗಳಿಸಿದ್ದರು. ಆಗ ಸಚಿನ್‌ ವಯಸ್ಸು 16 ವರ್ಷ 214 ದಿನಗಳು. ವೆಸ್ಟ್‌ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 73ರನ್‌ ಗಳಿಸಿದಾಗ ವರ್ಮಾ ವಯಸ್ಸು 15 ವರ್ಷ 285 ದಿನಗಳು.

ಅಂದಹಾಗೆ ವಿಶ್ವ ಕ್ರಿಕೆಟ್‌ನಲ್ಲಿ ಕಿರಿಯ ವಯಸ್ಸಿಗೆ ಅರ್ಧಶತಕ ಗಳಿಸಿದ ದಾಖಲೆ ಇರುವುದು ಯುಎಇ ಆಟಗಾರ್ತಿ ಕವಿಷಾ ಎಗೊಡೇಜ್‌ ಹೆಸರಲ್ಲಿ. ಅವರು 15 ವರ್ಷ 267 ದಿನದವರಿದ್ದಾಗ  ಮಲೇಷ್ಯಾ ವಿರುದ್ಧ ಇದೇ ವರ್ಷ ಜನವರಿಯಲ್ಲಿ ಅರ್ಧಶತಕ ಸಿಡಿಸಿದ್ದರು.

ವಿಂಡೀಸ್‌ ವಿರುದ್ಧ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ಭಾರತ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗುತ್ತಿದೆ.

ಮೊದಲ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ ಜೊತೆ ಇನಿಂಗ್ಸ್‌ ಆರಂಭಿಸಿದ ವರ್ಮಾ ಮೊದಲ ವಿಕೆಟ್‌ಗೆ 143ರನ್‌ಗಳ ಜೊತೆಯಾಟವಾಡಿದ್ದರು. ಇದು ಭಾರತ ಪರ ಮಹಿಳಾ ಟಿ–20 ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ ಜೊತೆಯಾಟದಲ್ಲಿ ಕೂಡಿಹಾಕಿದ ಗರಿಷ್ಠ ಮೊತ್ತವಾಗಿದೆ.

ಭಾರತ ನೀಡಿದ್ದ 186ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ವಿಂಡೀಸ್‌ ನಿಗದಿತ ಓವರ್‌ಗಳಲ್ಲಿ ಕೇವಲ 101ರನ್‌ ಗಳಿಸಿ, 84 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿಯೂ ವರ್ಮಾ ಅದೇ ಲಯದಲ್ಲಿ ಬ್ಯಾಟಿಂಗ್‌ ಮುಂದುವರಿಸಿ, ಮತ್ತೊಂದು ಅರ್ಧಶತಕ ಸಿಡಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ್ದ ಆತಿಥೇಯ ವಿಂಡೀಸ್‌ ನಿಗದಿತ ಓವರ್‌ಗಳಲ್ಲಿ 7ವಿಕೆಟ್‌ಗೆ 103ರನ್‌ ಗಳಿಸಿತ್ತು. ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ವರ್ಮಾ–ಮಂದಾನ ಜೋಡಿ 10.3 ಓವರ್‌ಗಳಲ್ಲಿ ಗುರಿ ಮುಟ್ಟಿ, ತಂಡಕ್ಕೆ 10ವಿಕೆಟ್‌ಗಳ ಗೆಲುವು ತಂದುಕೊಟ್ಟಿತು. ವರ್ಮಾ ಕೇವಲ 35 ಎಸೆತಗಳಲ್ಲಿ 69ರನ್‌ ಸಿಡಿಸಿದರೆ, ಮಂದಾನ 28 ಎಸೆತಗಳಲ್ಲಿ 30ರನ್‌ ಗಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು