ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಲ್ಲಿ ಕನ್ನಡತಿ ಶರಣ್ಯಾ ಕ್ರಿಕೆಟ್ ಕಹಳೆ

Last Updated 20 ಜುಲೈ 2020, 5:42 IST
ಅಕ್ಷರ ಗಾತ್ರ
ADVERTISEMENT
""

ಇಡೀ ಜಗತ್ತು ಕೊರೊನಾ ವಿರುದ್ಧದ ಹೋರಾಟದ ಸುದ್ದಿಗಳಲ್ಲಿಯೇ ಮುಳುಗಿರುವ ಹೊತ್ತಿನಲ್ಲಿ ಜರ್ಮನಿಯಲ್ಲಿ ಕನ್ನಡತಿ ಶರಣ್ಯಾ ಸದಾರಂಗನಿ ಮಾಡಿದ ಅಪರೂಪದ ಸಾಧನೆ ಸದ್ದು ಮಾಡಲಿಲ್ಲ.

ಬೆಂಗಳೂರಿನ ಆಟಗಾರ್ತಿ ಶರಣ್ಯಾ ಯುರೋಪಿಯನ್ ಟಿ10 ಕ್ರಿಕೆಟ್ ಲೀಗ್‌ ಸೀರಿಸ್‌ನಲ್ಲಿ ಆಡಿದ ಮೊಟ್ಟಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿ ಅವರು ಕಮ್ಮರ್‌ಫೀಲ್ಡ್ ಸ್ಪೋರ್ಟ್ಸ್‌ವರ್ಸಿನ್ ಪುರುಷರ ತಂಡವನ್ನು ಪ್ರತಿನಿಧಿಸಿದರು. ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚಿದ್ದ ಅವರು ಈಗ ಅಲ್ಲಿಯ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿ ಗಮನ ಸೆಳೆದಿದ್ದಾರೆ. ಜೊತೆಗೆ ಅಲ್ಲಿಯ ಹ್ಯಾಂಬರ್ಗ್‌ನಲ್ಲಿ ಕ್ರಿಕೆಟ್‌ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು ಜೂನಿಯರ್ ವಿಭಾಗದಲ್ಲಿ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕವಾಡ್ ಅವರೊಂದಿಗೆ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅವರು ಪ್ರಜಾವಾಣಿಗೆ ನೀಡಿದ ಸಂದರ್ಶನ ಇಲ್ಲಿದೆ;

ಬೆಂಗಳೂರಿನಿಂದ ಹ್ಯಾಂಬರ್ಗ್‌ವರೆಗಿನ ನಿಮ್ಮ ಪ್ರಯಾಣದ ಬಗ್ಗೆ ಹೇಳಿ
ನನ್ನ ಸಹೋದರ ಅಭಿನವ್ ಸದಾರಂಗನಿ ಕ್ರಿಕೆಟ್ ಆಡುತ್ತಿದ್ದ. ಆತನೊಂದಿಗೆ ಮನೆಯಂಗಳದಲ್ಲಿ ಆಡುತ್ತ ಆಸಕ್ತಿ ಬೆಳೆಯಿತು. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಕ್ಲಬ್‌ಗೆ ಸೇರಿದೆ. ಅಲ್ಲಿ ಇರ್ಫಾನ್ ಸೇಟ್ ಮತ್ತು ನಾಸೀರ್ ಭಾಯ್ ಅವರ ತರಬೇತಿಯಿಂದ ಉತ್ತಮವಾಗಿ ಆಡುವುದನ್ನು ಕಲಿತೆ. ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ರೂಢಿಸಿಕೊಂಡೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜೂನಿಯರ್ ಬಾಲಕಿಯರ ತಂಡದಲ್ಲಿ ಆಡಿದೆ. ಕೆಎಸ್‌ಸಿಎ ಲೀಗ್‌ನಲ್ಲಿ 2012ರಲ್ಲಿ ಆಡಿದ್ದೆ. ಅಂತರರಾಜ್ಯ ಟೂರ್ನಿಯಲ್ಲಿಯೂ ರಾಜ್ಯ ತಂಡವನ್ನು ಪ್ರತಿನಿಧಿಸಿ ವಿಕೆಟ್‌ಕೀಪಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೆ. ಜೈನ್ ಕಾಲೇಜಿನಲ್ಲಿ ಓದುವಾಗಲೂ ಕ್ರಿಕೆಟ್ ಆಡಿದೆ. ‌ ನಂತರ ಹೆಚ್ಚಿನ ಓದಿಗಾಗಿ ಇಂಗ್ಲೆಂಡ್‌ಗೆ ಹೋದೆ. ಆದರೆ ಬ್ಯಾಟ್‌, ಬಾಲ್ ಸಾಂಗತ್ಯ ಬಿಡಲಿಲ್ಲ. ಅಲ್ಲಿಯ ಎಸ್ಸೆಕ್ಸ್‌ ಕೌಂಟಿ ತಂಡದಲ್ಲಿ ಸ್ಥಾನ ಪಡೆದು ಬಹಳ ಪಂದ್ಯಗಳನ್ನು ಆಡಿದೆ. ಈಗ ಜರ್ಮನಿಗೆ ಬಂದು ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಯಿತು. ಇಲ್ಲಿಗೆ ಬರುವ ಮುನ್ನವೇ ಕ್ರಿಕೆಟ್ ಕ್ಲಬ್ ವಿಳಾಸ ಪತ್ತೆ ಹೆಚ್ಚಿದ್ದೆ. ಅಲ್ಲದೇ ನನ್ನ ಪತಿ ಇಲ್ಲಿಯವರೇ. ಅವರೂ ಯುರೋಪಿಯನ್ ಲೀಗ್‌ ತಂಡದಲ್ಲಿ ಆಡುತ್ತಿದ್ದಾರೆ. ಇಲ್ಲಿ ನಾನು ವೃತ್ತಿಯಿಂದ ಶಿಕ್ಷಕಿಯಾಗಿದ್ದೇನೆ.

ಟಿ10 ಲೀಗ್ ಟೂರ್ನಿಯಲ್ಲಿ ಆಡಿದ ಅನುಭವ ಹೇಗಿತ್ತು?
ಅದೊಂದು ಅವಿಸ್ಮರಣೀಯ ದಿನ. ಮೊದಲ ಬಾರಿಗೆ ಪುರುಷರ ತಂಡದಲ್ಲಿ ಆಡಿದೆ. ವಿಕೆಟ್‌ಕೀಪಿಂಗ್‌ನಲ್ಲಿ ಐದು ವಿಕೆಟ್ ಪಡೆದೆ. ಬ್ಯಾಟಿಂಗ್‌ನಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ ಒಳ್ಳೆಯ ಪಂದ್ಯ ಅದು.

ನೀವು ಈಗ ಪ್ರತಿನಿಧಿಸುತ್ತಿರುವ ಜರ್ಮನಿಯ ತಂಡದ ವಿಶೇಷವೇನು?
ರಾಷ್ಟ್ರೀಯ ತಂಡದಲ್ಲಿ ಇನ್ನೂ ಸ್ಥಾನ ಸಿಗಬೇಕಿದೆ. ಇಲ್ಲಿಗೆ ಬಂದು ಮೂರು ವರ್ಷ ನೆಲೆಸಿರುವ ದಾಖಲೆ ಒದಗಿಸಬೇಕು. ಮುಂದಿನ ವರ್ಷ ತಂಡದಲ್ಲಿ ಸ್ಥಾನ ಪಡೆಯಲು ಅರ್ಹಳಾಗುತ್ತೇನೆ. ಸದ್ಯ ನಾನು ಆಡುವ ಕ್ಲಬ್‌ ತಂಡವು ಬಹಳ ಚೆನ್ನಾಗಿದೆ. ಈ ತಂಡದಲ್ಲಿ ಜನಾಂಗೀಯ ವೈವಿಧ್ಯತೆ ಇದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಯುರೋಪ್‌ ದೇಶಗಳ ಆಟಗಾರ್ತಿಯರು ಇದ್ದಾರೆ. ಅವರೆಲ್ಲರೊಂದಿಗೆ ಸಂಸ್ಕೃತಿ, ಕ್ರೀಡೆಯ ವಿಶೇಷಗಳನ್ನು ಹಂಚಿಕೊಳ್ಳುವುದು ಒಳ್ಳೆಯ ಅನುಭವ. ಅದರಲ್ಲಿ ಕೆಲವರು ಇಲ್ಲಿಗೆ ಓದಲು ಬಂದಿದ್ದಾರೆ. ಕೆಲವರು ಕೆಲಸಕ್ಕಾಗಿ, ಮತ್ತೆ ಒಂದಿಬ್ಬರು ತಮ್ಮ ದೇಶದಲ್ಲಿ ನಿರಾಶ್ರಿತರಾಗಿ ಇಲ್ಲಿಗೆ ಬಂದಿದ್ದಾರೆ. ಆದರೆ ನಾವೆಲ್ಲರೂ ಕ್ರಿಕೆಟ್‌ ಎಂಬ ಛಾವಣಿಯ ಕೆಳಗೆ ಸೇರಿದ್ದೇವೆ.

ಶರಣ್ಯಾ ಸದಾರಂಗನಿ

ಜರ್ಮನಿಯಲ್ಲಿ ಕ್ರಿಕೆಟ್‌ ಬೆಳವಣಿಗೆ ಹೇಗಿದೆ?
ಇಲ್ಲಿ ಇನ್ನೂ ಶೈಶವಾವಸ್ಥೆಯಲ್ಲಿದೆ. ಆದರೆ, ದೊಡ್ಡಮಟ್ಟದಲ್ಲಿ ಬೆಳೆಸಲು ಯೋಜನೆಗಳನ್ನು ರೂಪಿಸಿದ್ದಾರೆ. ಹ್ಯಾಂಬರ್ಗ್‌ನಲ್ಲಿಯೇ ಬಹಳಷ್ಟು ಕ್ಲಬ್‌ಗಳಿವೆ. ಪುರುಷರ ಕ್ರಿಕೆಟ್ ಕೂಡ ಚೆನ್ನಾಗಿದೆ. ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಿತ್ತು. ಮಹಿಳೆಯರ ಕ್ರಿಕೆಟ್ 2009ರಲ್ಲಿ ಶುರುವಾಯಿತು. ಹತ್ತು ವರ್ಷಗಳಲ್ಲಿ ತಂಡವು ವಿಶ್ವಕಪ್ ಅರ್ಹತಾ ಸುತ್ತು ಪ್ರವೇಶಿಸಿತ್ತು. ಮುಂದೆ ಒಂದು ತ್ರಿಕೋನ ಸರಣಿ ಇದೆ. ಅದರಲ್ಲಿ ಆಡಿ ಉತ್ತಮ ಸಾಧನೆ ಮಾಡಿದರೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗುವ ಅವಕಾಶ ಇದೆ. ಕೋವಿಡ್ ಕಾಲದಲ್ಲಿ ಮನೆಯಲ್ಲಿಯೇ ಇರುವ ಸೌಲಭ್ಯದಲ್ಲಿ ತರಬೇತಿ ಮಾಡಿದೆವು. ಆನ್‌ಲೈನ್‌ ಮೂಲಕವೂ ಮಾರ್ಗದರ್ಶನ ಸಿಕ್ಕಿತು.

ನಿಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಹೇಳಿ
ನನ್ನ ತವರುಮನೆಯ ಕುಟುಂಬ ಬೆಂಗಳೂರಿನಲ್ಲಿ ಇದೆ. ನನ್ನ ಅಜ್ಜಿ ಹಾಸನ ಜಿಲ್ಲೆಯ ಹೆರಗೂರಿನ ಕಡೆಯವರು. ನನ್ನ ತಾತ ಹೊಸಕೊಪ್ಪಲಿನವರು. ತಾಯಿ ಸುಧಾ, ಇಂಗ್ಲಿಷ್ ಟೀಚರ್ ಆಗಿದ್ದಾರೆ. ಅಪ್ಪ ಸಂದೀಪ್ ಅವರು ಕಂಪೆನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಅವರೆಲ್ಲರ ಪ್ರೋತ್ಸಾಹದಿಂದಲೇ ಇಲ್ಲಿಯವರೆಗೆ ಬೆಳೆದಿದ್ದೇನೆ.

ಪತಿಯ ಹೆಸರು ಫಿನ್ ಸದಾರಂಗನಿ!
‘ನನ್ನ ಪತಿಯ ಹೆಸರು ಫಿನ್ ಸದಾರಂಗನಿ. ಅವರು ನನ್ನ ಅಡ್ಡಹೆಸರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಅವರು ಜರ್ಮನಿಯವರು. ಬಾಲ್ಯದಿಂದಲೇ ಕ್ರಿಕೆಟ್‌ ಕಲಿಯುತ್ತಿದ್ದಾರೆ. ಈಗ ಯುರೋಪಿಯನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಈಚೆಗೆ ನಾನು ಆಡಿದ ಟಿ10 ಲೀಗ್‌ನಲ್ಲಿ ಅವರೂ ಇದ್ದರು’ ಎಂದು ಶರಣ್ಯಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT