ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 2nd ODI: ಅಯ್ಯರ್ ಶತಕ, ಇಶಾನ್ 93; ಭಾರತಕ್ಕೆ ಗೆಲುವು, ಸರಣಿ ಸಮಬಲ

Last Updated 9 ಅಕ್ಟೋಬರ್ 2022, 19:05 IST
ಅಕ್ಷರ ಗಾತ್ರ

ರಾಂಚಿ (ಪಿಟಿಐ): ಭಾನುವಾರ ರಾತ್ರಿ ಶ್ರೇಯಸ್ ಅಯ್ಯರ್ ಅಜೇಯ ಶತಕ ದಾಖಲಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ ಅಲ್ಪ ಅಂತರದಿಂದ ತಮ್ಮ ಚೊಚ್ಚಲ ಶತಕ ಕೈತಪ್ಪಿಸಿಕೊಂಡರು.

ಆದರೆ ಇವರಿಬ್ಬರ ಜೊತೆಯಾಟದಿಂದಾಗಿ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಒಲಿಯಿತು. ಇದರಿಂದಾಗಿ ಆತಿಥೇಯರಿಗೆ ಸರಣಿ ಜಯದ ಆಸೆ ಜೀವಂತವಾಗುಳಿಯಿತು.

ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಏಡನ್ ಮಾರ್ಕರಮ್ (79) ಮತ್ತು ರೀಜಾ ಹೆನ್ರಿಕ್ಸ್ (74) ಆಕರ್ಷಕ ಅರ್ಧಶತಗಳ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿತು.

ಬಳಿಕ ಗುರಿ ಬೆನ್ನಟ್ಟಿದ ಭಾರತ ತಂಡವು, 45.5 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಮೂರನೇ ವಿಕೆಟ್‌ಗೆ 161 ರನ್‌ಗಳ ಜೊತೆಯಾಟ ಕಟ್ಟಿದ ಅಯ್ಯರ್ ಹಾಗೂ ಕಿಶನ್ ಭಾರತದ ಗೆಲುವಿನ ರೂವಾರಿ ಎನಿಸಿದರು.

ನಾಯಕ ಶಿಖರ್ ಧವನ್ (13) ವಿಕೆಟ್ ಭಾರತಕ್ಕೆ ಆರಂಭದಲ್ಲೇ ನಷ್ಟವಾಗಿತ್ತು. ಶುಭಮನ್ ಗಿಲ್ (28) ಸಹ ಪ್ರಭಾವಿ ಎನಿಸಲಿಲ್ಲ.

ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಪ್ರವಾಸಿ ಬಳಗದ ಹಂಗಾಮಿ ನಾಯಕ ಕೇಶವ್ ಮಹಾರಾಜ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ರೀಜಾ ಹೆನ್ರಿಕ್ಸ್ (74; 76ಎ) ಹಾಗೂ ಏಡನ್ ಮರ್ಕರಂ (79;89ಎ) ಅವರ ಅರ್ಧಶತಕಗಳ ಬಲದಿಂದ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 278 ರನ್ ಗಳಿಸಿತು. ಮೊಹಮ್ಮದ್ ಸಿರಾಜ್ (38ಕ್ಕೆ3) ಪರಿಣಾಮಕಾರಿ ದಾಳಿ ಮಾಡಿದರು.

ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಮೊತ್ತವು 50 ರನ್‌ಗಳನ್ನು ದಾಟುವಷ್ಟರಲ್ಲಿಯೇ ಆರಂಭಿಕರಾದ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಪೆವಿಲಿಯನ್‌ ಸೇರಿದರು.ಈ ಹಂತದಲ್ಲಿ ಜೊತೆಗೂಡಿದ ಎಡಗೈ ಬ್ಯಾಟರ್ ಇಶಾನ್ ಕಿಶನ್ (93; 84ಎ) ಶ್ರೇಯಸ್ (ಅಜೇಯ 113;111ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 161 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು 45.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 282 ರನ್‌ ಗಳಿಸಿ ಗೆದ್ದಿತು.

ಮುಂಬೈಕರ್ ಶ್ರೇಯಸ್‌ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದರು. ತಾಳ್ಮೆಯ ಆಟ ಹಾಗೂ ಕಲಾತ್ಮಕ ಹೊಡೆತಗಳ ಮೂಲಕ ಇನಿಂಗ್ಸ್‌ಗೆ ಸ್ಥಿರತೆ ಒದಗಿಸಿದರು. ಅವರ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್ ಇರಲಿಲ್ಲ. ಆದರೆ ಚೆಂಡನ್ನು 15 ಸಲ ಬೌಂಡರಿಗೆರೆ ದಾಟಿಸಿದರು. 48 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ತಾವೆದುರಿಸಿದ 103ನೇ ಎಸೆತದಲ್ಲಿ ಶತಕದ ಗಡಿ ತಲುಪಿದರು. ಶ್ರೇಯಸ್, ಇನ್ನೊಂದು ಬದಿಯಲ್ಲಿ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮಾಡುತ್ತಿದ್ದ ಇಶಾನ್‌ ಕಿಶನ್ ಅವರಿಗೇ ಹೆಚ್ಚು ಅವಕಾಶ ನೀಡಿದರು.

ಜಾರ್ಖಂಡ್ ಹುಡುಗ ಇಶಾನ್ ಆಟವು ಟಿ20 ಕ್ರಿಕೆಟ್ ಮಾದರಿಯದ್ದಾಗಿತ್ತು. ಏಳನೇ ಹಾಗೂ 33ನೇ ಓವರ್‌ನಲ್ಲಿ ಲಭಿಸಿದ ಜೀವದಾನಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಏಳು ಸಿಕ್ಸರ್‌ ಬಾರಿಸಿದರು. 33ನೇ ಓವರ್‌ನಲ್ಲಿ ರಬಾಡ ಹಾಕಿದ ಎಸೆತವನ್ನು ಪುಲ್ ಮಾಡಲು ಯತ್ನಿಸಿದರು. ಆದರೆ ಚೆಂಡು ಅವರ ಮೊಣಕೈಗೆ ಬಡಿದು ನೋವನುಭವಿಸಿದರು.

ಅದರ ನಂತರದ ಓವರ್‌ನಲ್ಲಿಯೂ ಒಂದು ಸಿಕ್ಸರ್ ಹೊಡೆದರು. ಆದರೆ ಅವರು ಶತಕ ಪೂರೈಸಲು ಫಾರ್ಟೈನ್ ಬಿಡಲಿಲ್ಲ. ಮಿಡ್‌ವಿಕೆಟ್‌ನಲ್ಲಿ ಹೆನ್ರಿಕ್ಸ್‌ ಪಡೆದ ಕ್ಯಾಚ್‌ಗೆ ಇಶಾನ್ ಪೆವಿಲಿಯನ್‌ಗೆ ಮರಳಿದರು.ಈ ಸಂದರ್ಭದಲ್ಲಿ 71 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಶ್ರೇಯಸ್ ಜೊತೆಗೂಡಿದ ಸಂಜು ಸ್ಯಾಮ್ಸನ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT