ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ನಲ್ಲಿ ಮೈಸೂರು ಹುಡುಗಿ ಶುಭಾ ಸತೀಶ್ ’ಶುಭಾರಂಭ‘

Published 14 ಡಿಸೆಂಬರ್ 2023, 20:34 IST
Last Updated 14 ಡಿಸೆಂಬರ್ 2023, 20:34 IST
ಅಕ್ಷರ ಗಾತ್ರ

ಮೈಸೂರು: ಅರಮನೆ ನಗರಿಯ ಹುಡುಗಿ ಶುಭಾ ಸತೀಶ್ ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಮೊದಲ ಹೆಜ್ಜೆ ಇಟ್ಟರು. ತಮ್ಮ ಟೆಸ್ಟ್ ಕ್ರಿಕೆಟ್ ಪದಾರ್ಪಣೆಯನ್ನು ಚೆಂದದ ಅರ್ಧಶತಕದ ಮೂಲಕ ಅವಿಸ್ಮರಣೀಯಗೊಳಿಸಿಕೊಂಡರು. 

ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರಿಕೆಟ್‌ ಅಂಗಳದಲ್ಲಿ ಗುರುವಾರ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು ಎಡಗೈ ಬ್ಯಾಟರ್ ಅವರು ಭಾರತದ ಇನಿಂಗ್ಸ್‌ ಬಲಗೊಳಿಸಲು ಮಹತ್ವದ ಕಾಣಿಕೆ ನೀಡಿದರು. ಇಲ್ಲಿಯ ರಾಜರಾಜೇಶ್ವರಿ ನಗರ ನಿವಾಸಿ, ಬೆಮೆಲ್‌ ಉದ್ಯೋಗಿ ಎನ್‌.ಸತೀಶ್‌ ಹಾಗೂ ಕೆ.ತಾರಾ ದಂಪತಿಯ ಪುತ್ರಿ ಶುಭಾ. ಪ್ರಾದೇಶಿಕ ಶಿಕ್ಷಣ ಕೇಂದ್ರದ ಆವರಣದಲ್ಲಿರುವ ಡಿಎಂಎಸ್‌ ಶಾಲೆಯಲ್ಲಿ ಪಿಯುವರೆಗೆ ಶಿಕ್ಷಣ ಪಡೆದ ಶುಭಾ, ಲಕ್ಷ್ಮಿಹಯಗ್ರೀವ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾರೆ. ಆರು ತಿಂಗಳ ಹಿಂದಷ್ಟೇ ನೈರುತ್ಯ ರೈಲ್ವೆ ಉದ್ಯೋಗಿಯಾಗಿದ್ದಾರೆ.

‘ಮನೆ ಮುಂದೆ ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಗಂಟೆಗಟ್ಟಲೆ ಔಟಾಗದೇ ಆಡುತ್ತಿದ್ದನ್ನು ನೋಡಿದ ತಂದೆ, ಕ್ರಿಕಟ್‌ ತರಬೇತಿ ಕ್ಲಬ್‌ಗೆ ಸೇರಿಸಿದರು. 12ನೇ ವರ್ಷದಿಂದಲೇ ಆಕೆಯ ಕ್ರಿಕೆಟ್‌ ಪಯಣ ಆರಂಭವಾಯಿತು. ಇಂದು ದೇಶವನ್ನು ಪ್ರತಿನಿಧಿಸಿದ್ದಾಳೆ. ಅಪ್ಪ– ಅಮ್ಮ ಬೆಳಿಗ್ಗಿನಿಂದಲೂ ಖುಷಿಯಲ್ಲಿದ್ದಾರೆ’ ಎಂದು ಶುಭಾ ಸಹೋದರಿ ಸಂಧ್ಯಾ ಸಂತಸ ವ್ಯಕ್ತಪಡಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಕ್ರಿಕೆಟ್‌ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿ, ನಂತರ ಜಯಲಕ್ಷ್ಮಿಪುರಂನ ಮಹಾಜನ ಕಾಲೇಜಿನಲ್ಲಿರುವ ಜಗದೀಶ್‌ ಪ್ರಸಾದ್‌ ಕ್ರಿಕೆಟ್‌ ಕ್ರೀಡಾಂಗಣದ ರಜತ್‌ ಅವರ ಬೌಲ್‌ಔಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ 8 ವರ್ಷದಿಂದ ತರಬೇತಿ ಪಡೆಯುತ್ತಿರುವ ಶುಭಾ, ಪ್ರತಿನಿಧಿಸಿದ ತಂಡಗಳನ್ನು ಗೆಲ್ಲಿಸಿದ್ದಾರೆ.

‘ಆಕ್ರಮಣಕಾರಿಯಾಗಿ ಆಡುವ, ಗುರಿ ಬೆನ್ನಟ್ಟುವ ಛಾತಿಯ ಆಟಗಾರ್ತಿ. ಇಂಡಿಯಾ ‘ಎ’ ಅಭ್ಯಾಸ ಪಂದ್ಯದಲ್ಲಿ 99 ಹಾಗೂ 49 ರನ್‌ ಬಾರಿಸಿ ನೇರವಾಗಿ ಭಾರತ ತಂಡಕ್ಕೆ ಆಯ್ಕೆಯಾದರು. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದು ದೊಡ್ಡ ಸಾಧನೆ ಮಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವುದು ಹೆಮ್ಮೆ ಎನಿಸುತ್ತದೆ’ ಎಂದು ಬೌಲ್‌ಔಟ್‌ ಅಕಾಡೆಮಿಯ ಕೋಚ್‌ ರಜತ್‌ ಸತೀಶ್‌ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ರಾಜ್ಯದ 16, 19, 23 ವರ್ಷದೊಳಗಿನ ಹಾಗೂ ಹಿರಿಯರ ತಂಡದಲ್ಲೂ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನದೊಂದಿಗೆ ಅಕಾಡೆಮಿಗೂ ಹೆಸರು ತಂದುಕೊಟ್ಟಿದ್ದಾರೆ. ಇಂದು ಬ್ಯಾಟಿಂಗ್‌ ಅಷ್ಟೇ ನೋಡಿದ್ದೀರಿ, ಇನ್ನು ಮೂರು ದಿನ ಫೀಲ್ಡಿಂಗ್ ಹೇಗೆ ಮಾಡುತ್ತಾರೆಂದು ನೀವೇ ನೋಡಿ’ ಎಂದರು.

‘ಎರಡು ವರ್ಷದ ಹಿಂದೆಯೇ ಮಹಿಳೆಯರ ಚಾಲೆಂಜರ್ಸ್‌ ಟ್ರೋಫಿ ಟೂರ್ನಿಗೆ ಆಡಬೇಕಿತ್ತು. ಕೈಬೆರಳಿಗೆ ಗಾಯವಾದ್ದರಿಂದ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಮೂರು ಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿದ್ದಾರೆ’ ಎಂದರು.

ಪೋಷಕರಾದ ಎನ್‌.ಸತೀಶ್‌– ಕೆ.ತಾರಾ ಅವರೊಂದಿಗೆ ಶುಭಾ ಸತೀಶ್
ಪೋಷಕರಾದ ಎನ್‌.ಸತೀಶ್‌– ಕೆ.ತಾರಾ ಅವರೊಂದಿಗೆ ಶುಭಾ ಸತೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT