ಗುರುವಾರ , ಜನವರಿ 28, 2021
23 °C

IND vs AUS: ಆಸೀಸ್ 338; ಗಿಲ್ ಚೊಚ್ಚಲ ಫಿಫ್ಟಿ; ದಿನದಂತ್ಯಕ್ಕೆ ಭಾರತ 96/2

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ 338 ರನ್‌ಗಳಿಗೆ ಉತ್ತರವಾಗಿ ಭಾರತ ಕ್ರಿಕೆಟ್ ತಂಡವು ಉದಯೋನ್ಮುಖ ಆರಂಭಿಕ ಶುಭಮನ್ ಗಿಲ್ ಆಕರ್ಷಕ ಅರ್ಧಶತಕದ (50) ನೆರವಿನಿಂದ ಎರಡನೇ ದಿನದಂತ್ಯಕ್ಕೆ 45 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. 

ಇನ್ನು ಎಂಟು ವಿಕೆಟ್ ಬಾಕಿ ಉಳಿದಿರುವಂತೆಯೇ ಇನ್ನಿಂಗ್ಸ್ ಮುನ್ನಡೆಗಾಗಿ ಭಾರತ 242 ರನ್ ಗಳಿಸಬೇಕಿದೆ. 

ಆಸ್ಟ್ರೇಲಿಯಾದ 338 ರನ್‌ಗಳಿಗೆ ಉತ್ತರವಾಗಿ ಭಾರತೀಯ ಆರಂಭಿಕರು ದಿಟ್ಟ ಹೋರಾಟವನ್ನು ತೋರಿದರು. ಓಪನರ್‌ಗಳಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 70 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿಕೊಟ್ಟರು. 

ಆಸಕ್ತಿದಾಯಕ ವಿಚಾರವೆಂದರೆ ಇದು ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಭಾರತೀಯ ಓಪನರ್‌ಗಳಿಂದ ದಾಖಲಾದ ಮೊದಲ ಅರ್ಧಶತಕ ಜೊತೆಯಾಟವಾಗಿದೆ. 

ಗಾಯದಿಂದಾಗಿ ಮೊದಲೆರಡು ಪಂದ್ಯಗಳಿಗೆ ಅಲಭ್ಯವಾಗಿರುವ ರೋಹಿತ್ ಶರ್ಮಾ, ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲವಾದರು. ಅಲ್ಲದೆ 26 ರನ್ ಗಳಿಸಿದ್ದ ರೋಹಿತ್, ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರು. 

ಇದನ್ನೂ ಓದಿ: 

ಅತ್ತ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲೇ ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಾಧನೆ ಮಾಡಿದರು. ಆದರೆ ರೋಹಿತ್ ಬೆನ್ನಲ್ಲೇ ಗಿಲ್ ಸಹ ವಿಕೆಟ್ ಒಪ್ಪಿಸುವ ಮೂಲಕ ಟೀಮ್ ಇಂಡಿಯಾ ಹಿನ್ನೆಡೆಗೊಳಗಾಯಿತು. 101 ಎಸೆತಗಳನ್ನು ಎದುರಿಸಿದ ಗಿಲ್ ಎಂಟು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು. ಇವರ ವಿಕೆಟನ್ನು ಪ್ಯಾಟ್ ಕಮಿನ್ಸ್ ಪಡೆದರು. 

ಇದೀಗ ಕ್ರೀಸಿನಲ್ಲಿರುವ ಅನುಭವಿ ಚೇತೇಶ್ವರ ಪೂಜಾರ (9*) ಹಾಗೂ ನಾಯಕ ಅಜಿಂಕ್ಯ ರಹಾನೆ (5*) ಹೆಚ್ಚಿನ ಆಘಾತವಾಗದಂತೆ ನೋಡಿಕೊಂಡರು. ಅಲ್ಲದೆ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಸ್ಮಿತ್ ಶತಕ, ಲಾಬುಷೇನ್ 91; ಆಸೀಸ್ 338ಕ್ಕೆ ಆಲೌಟ್...
ಈ ಮೊದಲು ಸ್ಟೀವನ್ ಸ್ಮಿತ್ ಅವರ ಅಮೋಘ ಶತಕದ (131) ಹೊರತಾಗಿಯೂ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಮೊತ್ತವನ್ನು 338 ರನ್ ಗಳಿಗೆ ಸೀಮಿತಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು.

ಸ್ಟೀವನ್ ಸ್ಮಿತ್ ಹಾಗೂ ಮಾರ್ನಸ್ ಲಾಬುಷೇನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಕಾಡಿದರು. ಸ್ಮಿತ್ ಆಕರ್ಷಕ ಶತಕ ಸಾಧನೆ ಮಾಡಿದರೆ ಲಾಬುಷೇನ್ ಕೇವಲ 9 ರನ್ ಅಂತರದಿಂದ ಶತಕ ವಂಚಿತರಾದರು. 

ಇದನ್ನೂ ಓದಿ: 

166ಕ್ಕೆ 2 ಎಂಬ ಸ್ಕೋರ್‌ನಿಂದ ಎರಡನೇ ದಿನದಾಟ ಮುಂದುವರಿಸಿದ ಆಸೀಸ್‌ಗೆ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ನೆರವಾದರು. ಇವರಿಬ್ಬರು ತೃತೀಯ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 

ಈ ನಡುವೆ ಶತಕದ ಅಂಚಿನಲ್ಲಿ ಲಾಬುಷೇನ್ ಎಡವಿ ಬಿದ್ದರು. 196 ಎಸೆತಗಳನ್ನು ಎದುರಿಸಿದ ಲಾಬುಷೇನ್ 11 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿದರು. ಈ ವಿಕೆಟ್ ರವೀಂದ್ರ ಜಡೇಜ ಪಾಲಾಯಿತು. 

ಬಳಿಕ ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ (13) ಅವರನ್ನು ಔಟ್ ಮಾಡಿದ ಜಡೇಜ ಪರಿಣಾಮಕಾರಿ ಎನಿಸಿಕೊಂಡರು. ಇನ್ನೊಂದೆಡೆ ದಿಟ್ಟ ಹೋರಾಟ ಮುಂದುವರಿಸಿರುವ ಸ್ಮಿತ್ ಆಕರ್ಷಕ ಅರ್ಧಶತಕ ಬಾರಿಸಿದರು. 

ಈ ಮಧ್ಯೆ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಕ್ಯಾಮರಾನ್ ಗ್ರೀನ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಜಸ್‌ಪ್ರೀತ್ ಬೂಮ್ರಾ, ಆಸೀಸ್‌ಗೆ ಮಗದೊಂದು ಆಘಾತ ನೀಡಿದರು. ಊಟದ ವಿರಾಮದ ಹೊತ್ತಿಗೆ ಆಸೀಸ್ ಐದು ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು.

ಭೋಜನ ವಿರಾಮದ ಬಳಿಕವೂ ವಿಕೆಟ್‌ನ ಒಂದು ತುದಿಯಿಂದ ನೆಲಕಚ್ಚಿ ನಿಂತ ಸ್ಮಿತ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಅಲ್ಲದೆ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಎಂಟನೇ ಶತಕ ಸಾಧನೆ ಮಾಡಿದರು. 

ಅತ್ತ ರವೀಂದ್ರ ಜಡೇಜ ಕೈಚಳಕದ ನೆರವಿನಿಂದ ಆತಿಥೇಯರಿಗೆ ಕಡಿವಾಣ ಹಾಕುವಲ್ಲಿ ಭಾರತ ಯಶಸ್ವಿಯಾಯಿತು. ನಾಯಕ ಟಿಮ್ ಪೇನ್ (1), ಪ್ಯಾಟ್ ಕಮಿನ್ಸ್ (0), ನಥನ್ ಲಿಯನ್ (0) ಹೆಚ್ಚು ಹೊತ್ತು ನಿಲ್ಲಲಿಲ್ಲ. 

ಅಂತಿಮವಾಗಿ ಸ್ಮಿತ್ ರನೌಟ್ ಆಗುವುದರೊಂದಿಗೆ ಆಸೀಸ್ 105.4 ಓವರ್‌ಗಳಲ್ಲಿ 338 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. 226 ಎಸೆತಗಳನ್ನು ಎದುರಿಸಿದ ಸ್ಮಿತ್ 16 ಬೌಂಡರಿಗಳ ನೆರವಿನಿಂದ 131 ರನ್ ಗಳಿಸಿದರು. ಇನ್ನುಳಿದಂತೆ ಮಿಚೆಲ್ ಸ್ಟಾರ್ಕ್ 24 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರೆ ಜೋಶ್ ಹ್ಯಾಜಲ್‌ವುಡ್ (1*) ಅಜೇಯರಾಗುಳಿದರು. 

ಇದನ್ನೂ ಓದಿ: 

ಮಳೆ ಬಾಧಿತ ಮೊದಲ ದಿನದಾಟದಲ್ಲಿ ಪದಾರ್ಪಣಾ ಆಟಗಾರ ವಿಲ್ ಪುಕೊವಸ್ಕಿ (62) ಆಕರ್ಷಕ ಅರ್ಧಶತಕ ಸಾಧನೆ ಮಾಡಿದ್ದರು.

ಭಾರತದ ಪರ ನಾಲ್ಕು ವಿಕೆಟ್ ಕಬಳಿಸಿದ ರವೀಂದ್ರ ಜಡೇಜ ಮಿಂಚಿದರು. ಜಸ್‌ಪ್ರೀತ್ ಬೂಮ್ರಾ ಹಾಗೂ ಪದಾರ್ಪಣಾ ವೇಗಿ ನವದೀಪ್ ಸೈನಿ ತಲಾ ಎರಡು ವಿಕೆಟ್ ಹಂಚಿಕೊಂಡರು. ಇನ್ನೊಂದು ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು