ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನಾನು ಜನಾಂಗೀಯ ದ್ವೇಷಿಯಲ್ಲ: ಮಂಡಿಯೂರಲು ಸಿದ್ಧ'–ಕ್ವಿಂಟನ್ ಡಿ ಕಾಕ್

Last Updated 28 ಅಕ್ಟೋಬರ್ 2021, 13:58 IST
ಅಕ್ಷರ ಗಾತ್ರ

ಶಾರ್ಜಾ: ಮಂಗಳವಾರ ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್ ಕಣಕ್ಕಿಳಿಯಲಿಲ್ಲ. ವಿಶ್ವಕಪ್ ಪಂದ್ಯದ ಆರಂಭಕ್ಕೂ ಮುನ್ನ ತಮ್ಮ ತಂಡದ ಆಟಗಾರರು ಮಂಡಿಯೂರಿ ನಿಂತು 'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್' ಅಭಿಯಾನ ಬೆಂಬಲಿಸಬೇಕು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿತ್ತು. ಈ ಮಾತನ್ನು ಧಿಕ್ಕರಿಸಿ ಹೊರಗುಳಿದಿದ್ದ ಡಿ ಕಾಕ್‌ ಈಗ ಕ್ಷಮೆಯಾಚಿಸಿದ್ದು, 'ನಾನು ಜನಾಂಗೀಯ ದ್ವೇಷಿಯಲ್ಲ' ಎಂದಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಡಿ ಕಾಕ್‌ ಘೋಷಿಸಿದ್ದಾರೆ. ನಾನು ಮಂಡಿಯೂರುವುದರಿಂದ ಇತರರಿಗೆ 'ತಿಳಿವಳಿಕೆ ನೀಡುವುದಾದರೆ' ಅದನ್ನು ಮಾಡಲು ಸಿದ್ಧನಿದ್ದೇನೆ. ಮಂಡಿಯೂರಲು ನಿರಾಕರಿಸಿದ ಕಾರಣಕ್ಕಾಗಿ ನನ್ನನ್ನು ಜನಾಂಗೀಯ ದ್ವೇಷಿ ಎಂದು ಕರೆದಿರುವುದು ನೋವುಂಟು ಮಾಡಿದೆ ಎಂದು ಕ್ಷಮಾಪಣಾ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಮಂಗಳವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್‌ಗಳಿಂದ ವಿಂಡೀಸ್ ಬಳಗವನ್ನು ಸೋಲಿಸಿತು. ಏಡನ್ ಮಾರ್ಕರಮ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ನೆರವಾದರು. ಆದರೆ, ಡಿ ಕಾಕ್‌ ನಡೆಯು ಚರ್ಚೆ ಹಾಗೂ ಊಹಾಪೋಹಗಳನ್ನು ಸೃಷ್ಟಿಸಿತ್ತು.

'ನಿಮ್ಮಲ್ಲಿ ಬೇಸರ, ಗೊಂದಲ ಹಾಗೂ ಕೋಪ ಮೂಡುವಂತೆ ಮಾಡಿದ್ದಕ್ಕೆ ನಾನು ಅಂತರಾಳದಿಂದ ಕ್ಷಮೆಯಾಚಿಸುತ್ತೇನೆ. ಈವರೆಗೂ ಈ ಪ್ರಮುಖ ವಿಚಾರದ ಕುರಿತು ನಾನು ಮೌನ ವಹಿಸಿದ್ದೆ. ಆದರೆ, ಒಂದಿಷ್ಟಾದರೂ ನಾನು ನಿಮಗೆ ವಿವರಿಸಬೇಕು ಎಂದೆನಿಸಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ ಕಾಕ್‌ ಪ್ರಕಟಣೆಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಹಂಚಿಕೊಂಡಿದೆ.

'ವಿಶ್ವಕಪ್‌ ಟೂರ್ನಿಗೆ ಬಂದಾಗಲೆಲ್ಲ ಒಂದಿಲ್ಲೊಂದು ನಾಟಕೀಯ ಬೆಳವಣಿಗಳು ನಡೆಯುವಂತೆ ತೋರುತ್ತದೆ. ಅದು ಅಷ್ಟೇನು ಸರಿಯಾದುದಲ್ಲ. ನನಗೆ ಬೆಂಬಲ ನೀಡಿದ ತಂಡದ ಸದಸ್ಯರು ಹಾಗೂ ಮುಖ್ಯವಾಗಿ ನನ್ನ ನಾಯಕನಿಗೆ (ತೆಂಬಾ ಬವುಮಾ) ಧನ್ಯವಾದ ತಿಳಿಸಬೇಕು.'

'ಜನರು ಗುರುತಿಸದಿರಬಹುದು, ಆದರೆ ಆತ ಅತ್ಯುತ್ತಮ ನಾಯಕ. ಅವರು ಮತ್ತು ತಂಡ ಹಾಗೂ ದಕ್ಷಿಣ ಆಫ್ರಿಕಾ ನನ್ನನ್ನು ಪರಿಗಣಿಸುವುದಾದರೆ, ನನ್ನ ದೇಶಕ್ಕಾಗಿ ನಾನು ಮತ್ತೆ ಕ್ರಿಕೆಟ್‌ ಆಡುವುದಕ್ಕಿಂತಲೂ ಹೆಚ್ಚಿನದು ಮತ್ತೊಂದು ಇರದು' ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಕಪ್ಪು ವರ್ಣೀಯ ಆಟಗಾರ ಬವುಮಾ ಅವರು ವೆಸ್ಟ್‌ ಇಂಡೀಸ್‌ ತಂಡದ ಎದುರು ಗೆಲುವು ಸಾಧಿಸಿದ ಬಳಿಕ ಡಿ ಕಾಕ್‌ ಅವರಿಗೆ ಬೆಂಬಲ ಸೂಚಿಸಿದ್ದರು. ಪಂದ್ಯ ಆರಂಭಕ್ಕೆ ಕೆಲವೇ ಸಮಯದ ಮುಂಚೆ ಮಂಡಿಯೂರಬೇಕೆಂಬ ನಿರ್ದೇಶನ ಪಡೆಯುವುದು 'ಸೂಕ್ತವಾದುದಲ್ಲ' ಎಂದಿದ್ದರು.

ಡಿ ಕಾಕ್‌ ತಮ್ಮ ಉದ್ದನೆಯ ಪ್ರಕಟಣೆಯಲ್ಲಿ 'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್' ಬಗ್ಗೆ ಪ್ರಸ್ತಾಪಿಸಿದ್ದು, ಕುಟುಂಬದ ಹಿನ್ನೆಲೆಯ ಕಾರಣದಿಂದಾಗಿ ಬ್ಲ್ಯಾಕ್‌ ಲೈವ್ಸ್‌ ತಮಗೂ ಮುಖ್ಯವಾಗುತ್ತದೆ, ಅಂತರರಾಷ್ಟ್ರೀಯ ಅಭಿಯಾನದಿಂದ ಅಲ್ಲ ಎಂದು ಹೇಳಿದ್ದಾರೆ.

'ನಾನು ಮಂಡಿಯೂರುವುದರಿಂದ ಇತರರಿಗೆ ತಿಳಿವಳಿಕೆ ಮೂಡಲು ಸಹಕಾರಿಯಾಗುತ್ತದೆ ಹಾಗೂ ಇತರರ ಬದುಕು ಉತ್ತಮಗೊಳ್ಳುತ್ತದೆ ಎಂದಾದರೆ; ನಾನು ಅದನ್ನು ಮಾಡಲು ಸಂತುಷ್ಟನಾಗಿರುವೆ' ಎಂದು ಒತ್ತಿ ಹೇಳಿದ್ದಾರೆ.

ಆಟಗಾರರಿಗೆ ಆದೇಶ ತಲುಪಿಸಿದ ರೀತಿಯ ಕಾರಣದಿಂದಾಗಿ ತಾನು ಮಂಗಳವಾರ ಪಂದ್ಯಕ್ಕೂ ಮುನ್ನ ಮಂಡಿಯೂರಲಿಲ್ಲ ಎಂದು ಡಿ ಕಾಕ್‌ ವಿವರಣೆ ನೀಡಿದ್ದಾರೆ.

'ನಾನು ಸುಳ್ಳು ಹೇಳಲಾರೆ. ಅತ್ಯಂತ ಮುಖ್ಯವಾದ ಪಂದ್ಯಕ್ಕೆ ತೆರಳುವಾಗ ನಮಗೆ ಪಾಲಿಸಲೇಬೇಕೆಂಬ ಸೂಚನೆ ನೀಡಿದ್ದು ಕಂಡು ಅಚ್ಚರಿ ಉಂಟಾಯಿತು,... ನನ್ನ ಬಗ್ಗೆ ತಿಳಿಯದವರಿಗಾಗಿ ಹೇಳುತ್ತಿದ್ದೇನೆ, ನಾನು ಮಿಶ್ರ ಜನಾಂಗಗಳ ಕುಟುಂಬದ ಹಿನ್ನೆಲೆ ಇರುವವರು. ನನ್ನ ಸೋದರಿಯರ ಬಣ್ಣ ಬೇರೆ ಹಾಗೂ ನನ್ನ ಮಲತಾಯಿಯದು ಕಪ್ಪು ವರ್ಣ. ನಾನು ಹುಟ್ಟಿದಾಗಿನಿಂದಲೂ ನನಗೆ ಬ್ಲ್ಯಾಕ್‌ ಲೈವ್ಸ್‌ (ಕಪ್ಪು ವರ್ಣದ ಜೀವಗಳು) ಮುಖ್ಯವಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನವೊಂದು ನಡೆಯುತ್ತಿದೆ ಎಂಬ ಕಾರಣದಿಂದಾಗಿ ಅಲ್ಲ' ಎಂದು ಡಿ ಕಾಕ್‌ ವಿವರಿಸಿದ್ದಾರೆ.

ಕ್ರಿಕೆಟ್‌ ದಕ್ಷಿಣ ಆಫ್ರಿಕಾ ನನ್ನ ಸ್ವತಂತ್ರವನ್ನು ಕಿತ್ತೊಕೊಂಡಿತು ಎಂಬ ಭಾವನೆಯನ್ನು ಡಿ ಕಾಕ್‌ ಹೊಂದಿದ್ದರು. ಆದರೆ, ಕ್ರಿಕೆಟ್ ಮಂಡಳಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆಯ ಬಳಿಕ ದೃಷ್ಟಿಕೋನ ಬದಲಾಗಿರುವುದಾಗಿ ಅವರು ಹೇಳಿದ್ದಾರೆ.

'ನಮ್ಮೆಲ್ಲರಿಗೂ ಹಕ್ಕುಗಳಿವೆ ಹಾಗೂ ಅವು ಬಹಳ ಮುಖ್ಯವಾದುವು. ನಾವು ಹೇಳಿದಂತೆ ಮಾಡಬೇಕು ಎಂದು ಸೂಚನೆ ನೀಡಿದ ರೀತಿಯಿಂದ, ನನ್ನ ಹಕ್ಕುಗಳನ್ನೆಲ್ಲ ಕಸಿದುಕೊಂಡಂತೆ ಅನಿಸಿತ್ತು'

'ನಾನು ನನ್ನ ಜೀವನದಲ್ಲಿ ಪ್ರತಿ ದಿನವೂ ಎಲ್ಲ ಮಜಲುಗಳಲ್ಲೂ ಜನರೊಂದಿಗೆ ಬದುಕುತ್ತಿದ್ದೇನೆ, ಕಲಿಯುತ್ತಿದ್ದೇನೆ ಹಾಗೂ ಪ್ರೀತಿಸುತ್ತಿದ್ದೇನೆ. ಹೀಗಿರುವಾಗ, ನಾನೇಕೆ ಮಂಡಿಯೂರುವ ಮೂಲಕ ಅದನ್ನು ಸಾಬೀತು ಪಡಿಸಿಕೊಳ್ಳಬೇಕು ಎಂಬುದು ತಿಳಿಯಲಿಲ್ಲ. ಯಾವುದೇ ಚರ್ಚೆಯೂ ನಡೆಸದೆ, ಏನು ಮಾಡಬೇಕೆಂದು ನಿಮಗೆ ಸೂಚಿಸಿದರೆ...' ಎಂದಿದ್ದಾರೆ.

'ನನ್ನೊಂದಿಗೆ ಬೆಳೆದಿರುವವರು, ಆಡಿರುವವರಿಗೆ ನಾನು ಎಂಥ ವ್ಯಕ್ತಿ ಎಂಬುದು ತಿಳಿದಿದೆ. ಕ್ರಿಕೆಟಿಗನಾಗಿ ನಾನು ಮೂರ್ಖ, ಸ್ವಾರ್ಥಿ, ಅಪ್ರಬುದ್ಧ,... ಎಂದೆಲ್ಲ ಕರೆಸಿಕೊಂಡಿದ್ದೇನೆ. ಆದರೆ, ಅವುಗಳು ನನಗೆ ನೋವುಂಟು ಮಾಡಲಿಲ್ಲ. ಆದರೆ, ತಪ್ಪಾಗಿ ಅರ್ಥೈಸಿಕೊಂಡು ನನ್ನನ್ನು ಜನಾಂಗೀಯ ದ್ವೇಷಿ ಎಂದು ಕರೆದಿರುವುದು ತೀವ್ರ ನೋವುಂಟು ಮಾಡಿದೆ. ಅದು ನನ್ನ ಕುಟುಂಬಕ್ಕೆ, ಗರ್ಭಿಣಿಯಾಗಿರುವ ನನ್ನ ಹೆಂಡತಿಗೆ ನೋವು ತಂದಿದೆ. ನಾನು ಜನಾಂಗೀಯ ದ್ವೇಷಿಯಲ್ಲ. ನನ್ನ ಮನಸ್ಸಿಗೆ ಅದು ತಿಳಿದಿದೆ' ಎಂದು ಸುದೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.

ಶನಿವಾರ ದಕ್ಷಿಣ ಆಫ್ರಿಕಾ ತಂಡವು ಶ್ರೀಲಂಕಾ ಎದುರು ಸೆಣಸಲಿದೆ. ಡಿ ಕಾಕ್‌ ಆ ಪಂದ್ಯಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT