ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಟೂರ್ನಿಯಲ್ಲಿ ವೇಗದ ಕುದುರೆಗಳ ಭರಾಟೆ

Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಒಲಿಂಪಿಕ್ಸ್‌ ಎಂದಾಕ್ಷಣ ‘ಯಾರು ಈ ಸಲದ ವೇಗದ ರಾಜ ಮತ್ತು ರಾಣಿ?’ ಎಂಬ ಕುತೂಹಲ ಕೆರಳುತ್ತದೆ. ಕೂಟದಲ್ಲಿ ಹಲವಾರು ಕ್ರೀಡೆಗಳು ಇದ್ದರೂ ಬಹಳಷ್ಟು ಜನರ ಗಮನ ಮಾತ್ರ 100 ಮೀಟರ್ಸ್‌ ಓಟದ ಟ್ರ್ಯಾಕ್ ಮೇಲೆಯೇ ನೆಟ್ಟಿರುತ್ತದೆ. ಎಂಟರಿಂದ ಹತ್ತು ಸೆಕೆಂಡುಗಳಲ್ಲಿ ಮುಗಿದು ಹೋಗುವ ಮಿಂಚಿನ ಓಟ ನೋಡುಗರ ಮನದಲ್ಲಿ ನೆಲೆಯಾಗುತ್ತದೆ.

ಅದೇ ರೀತಿ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿ ಅಂದಾಕ್ಷಣ ಎಲ್ಲರ ಚಿತ್ತ ವೇಗದ ಬೌಲರ್‌ಗಳತ್ತ ಹರಿಯುತ್ತದೆ. ಕ್ರಿಕೆಟ್ ಜನಕರ ನಾಡಿನ ಕ್ರೀಡಾಂಗಣಗಳಲ್ಲಿರುವ ಪಿಚ್‌ಗಳು ಕೂಡ ವೇಗಿಗಳ ಆಡುಂಬೋಲ ಎನ್ನುವುದು ಜನಜನಿತ. ಆದ್ದರಿಂದಲೇ ಸ್ಪಿನ್ ಸುಲ್ತಾನರೆನಿಸಿಕೊಂಡ ಭಾರತದಂತಹ ತಂಡಗಳೂ ಈ ಬಾರಿಯ ವಿಶ್ವಕಪ್ ಟೂರ್ನಿಗೆ ಹೋಗುವ ಮುನ್ನ ವೇಗದ ಪಡೆಯನ್ನು ಸಿದ್ಧಪಡಿಸಿಕೊಳ್ಳಲು ಹೆಚ್ಚಿನ ಒತ್ತು ನೀಡಿತ್ತು. ಭಾರತದಲ್ಲಿಯೇ ನಡೆದಂತಹ ಎಷ್ಟೋ ದ್ವಿಪಕ್ಷೀಯ ಟೂರ್ನಿಗಳಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ಗಳನ್ನು ಸಿದ್ಧಪಡಿಸಿ ಆಡಿತ್ತು. 1983ರ ವಿಶ್ವಕಪ್ ಗೆದ್ದಾಗಲೂ ಭಾರತದ ಮಧ್ಯಮವೇಗಿಗಳೇ ತೋಳ್ಬಲ ಮೆರೆದಿದ್ದರು. ಈ ಬಾರಿಯೂ ಭಾರತದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಅವರು ಮಿಂಚುತ್ತಿದ್ದಾರೆ. ಆದರೆ, ಅತಿ ವೇಗದ ಎಸೆತಗಳನ್ನು ಪ್ರಯೋಗಿಸುವಲ್ಲಿ ಇನ್ನೂ ಭಾರತದ ಬೌಲರ್‌ಗಳು ಬೆಳೆಯಬೇಕಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ವೇಗಿಗಳಿಗೆ ಇರುವ ವೇಗದ ಎಸೆತ ಹಾಕುವ ಸಾಮರ್ಥ್ಯ ಭಾರತದ ಬೌಲರ್‌ಗಳಿಗೆ ಇನ್ನೂ ಒಲಿದಿಲ್ಲ. ಆದರೆ ವೈವಿಧ್ಯತೆಯ ಮೂಲಕವೇ ರಾರಾಜಿಸುತ್ತಿರುವುದು ಗಮನಾರ್ಹ.

ಈ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ವೇಗದ ಎಸೆತ ಹಾಕುವ ಪೈಪೋಟಿಯಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಬೌಲರ್‌ಗಳೇ ಮುಂಚೂಣಿಯಲ್ಲಿದ್ದಾರೆ. ಏಷ್ಯಾ ಖಂಡದ ವೇಗದ ಶಕ್ತಿ ಎನಿಸಿಕೊಂಡಿದ್ದ ಪಾಕಿಸ್ತಾನ ತಂಡದ ಬೌಲರ್‌ಗಳು ಗಮನಾರ್ಹ ಸಾಮರ್ಥ್ಯ ತೋರುತ್ತಿದ್ದಾರಾದರೂ ವೇಗದ ಎಸೆತಗಳನ್ನು ಹಾಕುವ ಪೈಪೋಟಿಯಲ್ಲಿ ಯುರೋಪಿಯನ್ನರಿಗೆ ಸರಿಸಮನಾಗಿಲ್ಲ. ಪಾಕ್ ತಂಡದ ಬೌಲರ್‌ ಶೋಯಬ್ ಅಖ್ತರ್ ಅವರು
2003ರ ವಿಶ್ವಕಪ್‌ನಲ್ಲಿ ವೇಗದ ಎಸೆತದ ದಾಖಲೆಯನ್ನು ಮುರಿಯುವವರು ಈ ಸಲವಾದರೂ ಹೊರಹೊಮ್ಮುತ್ತಾರೆಯೇ ಎಂಬ ಕುತೂಹಲ ಗರಿಗೆದರಿದೆ.

ಈ ಹಾದಿಯಲ್ಲಿ ಇಲ್ಲಿಯವರೆಗೆ (ಜೂನ್ 27) ನಡೆದಿರುವ ಟೂರ್ನಿಯಲ್ಲಿ ಅತಿ ವೇಗದ ಎಸೆತಗಳಿಂದ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡುತ್ತಿರುವ ಪ್ರಮುಖ ಐವರು ಬೌಲರ್‌ಗಳು ಮುಂಚೂಣಿಯಲ್ಲಿದ್ದಾರೆ. ಇದರಲ್ಲಿ ಇನ್ನೊಂದು ವಿಶೇಷವೆಂದರೆ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಅವರ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಇವರೆಲ್ಲರ ಸಾಮರ್ಥ್ಯದ ಒಂದು ಕಿರುನೋಟ ಇಲ್ಲಿದೆ...

ಬೌಲರ್: ಜೋಫ್ರಾ ಆರ್ಚರ್ (ಇಂಗ್ಲೆಂಡ್)
ಬಲಗೈ ವೇಗಿ,
ವೇಗದ ಎಸೆತ: 153 ಕಿ.ಮೀ (ಪ್ರತಿಗಂಟೆಗೆ)
ಪಂದ್ಯ: 7
ಎಸೆತ: 383
ರನ್: 325
ವಿಕೆಟ್: 16

ವೆಸ್ಟ್‌ ಇಂಡೀಸ್ ಮೂಲದ ಜೋಫ್ರಾ ಆರ್ಚರ್ ಇಂಗ್ಲೆಂಡ್‌ ತಂಡಕ್ಕೆ ವಲಸಿಗ. ಆದರೆ ಅವರ ಬೌಲಿಂಗ್‌ನಿಂದಾಗಿ ತಂಡಕ್ಕೆ ಹೆಚ್ಚು ಲಾಭವಾಗುತ್ತಿದೆ. ಕಾರ್ಡಿಫ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅವರು ಎಡಗೈ ಬ್ಯಾಟ್ಸ್‌ಮನ್‌ ಸೌಮ್ಯಾ ಸರ್ಕಾರ್ ಅವರನ್ನು ಔಟ್ ಮಾಡಿದ ರೀತಿ ಅಮೋಘವಾಗಿತ್ತು. ಅವರು ಹಾಕಿದ ಎಸೆತವು ಬ್ಯಾಟ್ಸ್‌ಮನ್‌ ಬೀಟ್ ಮಾಡಿ ಒಳನುಗ್ಗಿತ್ತು. ಲೆಫ್ಟ್ ಬೇಲ್ಸ್‌ ನಷ್ಟೇ ಎಗರಿಸಿದ್ದ ಚೆಂಡು ಮೇಲಕ್ಕೇ ಹಾರಿ ವಿಕೆಟ್‌ಕೀಪರ್‌ ತಲೆ ಮೇಲಿಂದ ಸಾಗಿ ಬೌಂಡರಿಗೆರೆಯಾಚೆ ಬಿದ್ದಿತ್ತು. ‘ಟೂರ್ನಿಯ ಅಮೋಘ ಎಸೆತ’ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 153 ಕಿ.ಮೀ ವೇಗದಲ್ಲಿ ಚೆಂಡು ಸಾಗಿತ್ತು. ವೇಗದ ಜೊತೆಗೆ ಹದವಾದ ಬೌನ್ಸ್‌ ಅನ್ನು ಬೆರೆಸುವ ಚಾಣಾಕ್ಷತೆ ಜೋಫ್ರಾ ಅವರದ್ದು. ಇಡೀ ಟೂರ್ನಿಯಲ್ಲಿ ಅವರು ಇದುವರೆಗೆ ಸರಾಸರಿ 146 ಕಿ..ಮೀ ವೇಗದ ಎಸೆತಗಳನ್ನು ಪ್ರಯೋಗಿಸುತ್ತಿದ್ದಾರೆ. ಜೊತೆಗೆ ಸ್ವಿಂಗ್, ಕಟರ್‌ಗಳನ್ನು ಮಿಶ್ರಣ ಮಾಡುತ್ತಿರುವುದು ಪರಿಹಾಮಕಾರಿಯಾಗಿದೆ.

ಬೌಲರ್: ಮಿಷೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
ಎಡಗೈ ವೇಗಿ
ವೇಗದ ಎಸೆತ: 150 ಕಿ.ಮೀ (ಪ್ರತಿಗಂಟೆಗೆ)
ಪಂದ್ಯ: 7
ಎಸೆತ: 389
ರನ್: 347
ವಿಕೆಟ್: 19‌

ಟೆಸ್ಟ್ ಕ್ರಿಕೆಟ್‌ನಲ್ಲಿ ಇವತ್ತು ಆಸ್ಟ್ರೇಲಿಯಾದ ಮಿಷೆಲ್ ಸ್ಟಾರ್ಕ್‌ ಅವರೇ ಅತಿ ವೇಗದ ಬೌಲರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ವರ್ಷಗಳ ಹಿಂದೆ ಪರ್ತ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ರಾಸ್ ಟೇಲರ್ ಅವರಿಗೆ 160 ಕಿ.ಮೀ ವೇಗದ ಎಸೆತವನ್ನು ಹಾಕಿದ್ದರು. ಅದು ಇಂದಿಗೂ ಅಬಾಧಿತ ದಾಖಲೆಯೇ ಹೌದು. ಆದರೆ ನಂತರದ ದಿನಗಳಲ್ಲಿ ಗಾಯಗೊಂಡು ಆಟದಿಂದ ದೂರ ಉಳಿದಿದ್ದ ಸ್ಟಾರ್ಕ್‌ ಈಚೆಗೆ ಮತ್ತೆ ಕಣಕ್ಕೆ ಮರಳಿದ್ದರು. ಶಸ್ತ್ರಚಿಕಿತ್ಸೆಯ ನಂತರವೂ ಅವರ ಆಟ ಕಳೆಗುಂದಿಲ್ಲ. ಗಾಳಿಯಲ್ಲಿಯೇ ಲಾಸ್ಯವಾಡುವ ಅವರ ಯಾರ್ಕರ್‌ಗಳು ಸರ್ಪಾಸ್ತ್ರಗಳಂತೆ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿವೆ. ಈ ಟೂರ್ನಿಯಲ್ಲಿ ಅವರು ಸರಾಸರಿ 150 ಕಿಮೀ ವೇಗದ ಎಸೆತಗಳನ್ನು ಪ್ರಯೋಗಿಸುತ್ತಿರುವುದು ವಿಶೇಷ.

ಬೌಲರ್: ಮಾರ್ಕ್‌ ವುಡ್ (ಇಂಗ್ಲೆಂಡ್)
ಬಲಗೈ ವೇಗಿ
ವೇಗದ ಎಸೆತ: 152 ಕಿ.ಮೀ (ಪ್ರತಿಗಂಟೆಗೆ)
ಪಂದ್ಯ: 6
ಎಸೆತ: 310
ರನ್: 262
ವಿಕೆಟ್: 13

ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಜೋಫ್ರಾ ಜೊತೆ ಮಾರ್ಕ್ ವುಡ್ ಕೂಡ ವರದಾನದಂತೆ ಲಭಿಸಿದ್ದಾರೆ. ನಿರಂತರವಾಗಿ ಉತ್ತಮ ಬೌಲಿಂಗ್ ಮಾಡುತ್ತಿರುವ ವುಡ್ ಸರಾಸರಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು 152 ಕಿ..ಮೀ ವೇಗವನ್ನು ದಾಟಿದ ಎಸೆತವನ್ನೂ ಪ್ರಯೋಗಿಸಿದ್ದರು. ಅವರು ಈಚೆಗಷ್ಟೇ ತೋಳಿನ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದರೂ ಅವರ ವೇಗದಲ್ಲಿ ಒಂಚೂರು ಕಡಿಮೆಯಾಗಿಲ್ಲ. ವೇಗದ ಜೊತೆಗೆ ಲೈನ್ ಮತ್ತು ಲೆಂಗ್ತ್‌ ಶಿಸ್ತನ್ನು ಪಾಲಿಸುವುದು ಅವರ ವೈಶಿಷ್ಟ್ಯವಾಗಿದೆ.

ಬೌಲರ್: ಲಾಕಿ ಫರ್ಗ್ಯುಸನ್ (ನ್ಯೂಜಿಲೆಂಡ್)
ಬಲಗೈ ವೇಗಿ
ವೇಗದ ಎಸೆತ: 150 ಕಿ.ಮೀ
ಪಂದ್ಯ: 6
ಎಸೆತ: 322
ರನ್: 267
ವಿಕೆಟ್: 15

ವಿಶ್ಕಕಪ್ ಟೂರ್ನಿಯ ಅರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಆಡಿದ್ದ ಟೂರ್ನಿಗಳಲ್ಲಿ ವೇಗಿ ಲಾಕಿ ಫರ್ಗ್ಯುಸನ್ 152 ಕಿ.ಮೀ ಆಸುಪಾಸಿನ ವೇಗದಲ್ಲಿ ಎಸೆತಗಳನ್ನು ಹಾಕಿದ್ದರು. ಇದೀಗ ಈ ಟೂರ್ನಿಯಲ್ಲಿಯೂ ಅವರು ನಿರಂತರವಾಗಿ 150 ಕಿ.ಮೀ ವೇಗದ ಎಸೆತಗಳನ್ನು ಪ್ರಯೋಗಿಸುತ್ತಿದ್ದಾರೆ. ಕಿವೀಸ್ ತಂಡದ ಜಯದ ಓಟದಲ್ಲಿ ಅವರ ಪಾಲು ಕೂಡ ಇದೆ.

ಬೌಲರ್:ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)
ಬಲಗೈ ವೇಗಿ
ವೇಗದ ಎಸೆತ: 150 ಕಿ.ಮೀ (ಪ್ರತಿಗಂಟೆಗೆ)
ಪಂದ್ಯ: 7,
ಎಸೆತ: 348
ರನ್: 305
ವಿಕೆಟ್: 7

ದಕ್ಷಿಣ ಆಫ್ರಿಕಾ ತಂಡದ ಸೆಮಿಫೈನಲ್ ಕನಸು ಕಮರಿದೆ. ಸತತ ಸೋಲುಗಳಿಂದ ಜರ್ಜರಿತವಾಗಿದೆ. ಆದರೆ, ತಂಡದ ಯುವ ವೇಗಿ ಕಗಿಸೊ ರಬಾಡ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. 150 ಕಿ.ಮೀ ವೇಗದ ಎಸೆತಗಳನ್ನು ಪ್ರಯೋಗಿಸಿ ಗಮನ ಸೆಳೆದರು. ಆದರೆ, ಹೆಚ್ಚು ವಿಕೆಟ್‌ಗಳು ಮಾತ್ರ ಅವರಿಗೆ ಬೀಳದಿದ್ದರೂ ವೇಗದ ಎಸೆತಗಳ ಪ್ರಯೋಗಕ್ಕೆ ಹೊಸ ಭಾಷ್ಯ ಬರೆದರು. ಐಪಿಎಲ್‌ನಲ್ಲಿ ಅವರು 153 ಕಿ.ಮೀ ವೇಗದ ಎಸೆತಗಳಣ್ನು ಹಾಕಿ ಗಮನ ಸೆಳೆದಿದ್ದರು.

ವಿಶ್ವಕಪ್ ದಾಖಲೆ
ಬೌಲರ್: ಶೋಯಬ್ ಅಖ್ತರ್

ತಂಡ: ಪಾಕಿಸ್ತಾನ
ವೇಗದ ಎಸೆತ: 161.3 ಕಿ.ಮೀ (ಪ್ರತಿ ಗಂಟೆ)
ಟೂರ್ನಿ: 2003
ಎದುರಾಳಿ: ಇಂಗ್ಲೆಂಡ್
ಸ್ಥಳ: ನ್ಯೂಲ್ಯಾಂಡ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT