ಬುಧವಾರ, ಸೆಪ್ಟೆಂಬರ್ 23, 2020
27 °C

ಸ್ಪಿನ್ನರ್–ಡಾನ್ಸರ್ | ಕ್ರಿಕೆಟಿಗ ಚಾಹಲ್‌ಗೆ ನೃತ್ಯಪಟು ಧನಶ್ರೀ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೆಗ್ ಸ್ಪಿನ್ ದಾಳಿ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವ, ಪಂದ್ಯ ಮುಗಿದ ನಂತರ ತಂಡದ ಸಹ ಆಟಗಾರರ ಮುಂದೆ ಮೈಕ್ ಹಿಡಿದುಕೊಂದು ‘ಪತ್ರಕರ್ತ‘ನಾಗುವ ಯಜುವೇಂದ್ರ ಚಾಹಲ್ ಅವರ ಮನಸ್ಸು ಕದ್ದ ಯುವತಿ ಯಾರಾಗಿರಬಹುದು…?

ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಆಗಿದೆ ಎಂಬ ಮಾಹಿತಿಯೊಂದಿಗೆ ಮೂರು ದಿನಗಳ ಹಿಂದೆ ಯಜುವೇಂದ್ರ ಚಾಹಲ್ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ಅಪ್‌ ಲೋಡ್ ಮಾಡಿದ್ದೇ ತಡ, ಚಾಹಲ್ ಅವರನ್ನು ಬೌಲ್ಡ್ ಮಾಡಿದ ಧನಶ್ರೀ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಿದವರ ಸಂಖ್ಯೆ ಸಾವಿರಾರು.

ಧನಶ್ರೀ ಕುರಿತ ಕುತೂಹಲ ತಣಿಸಿಕೊಳ್ಳಲು ಸರ್ಚ್ ಎಂಜಿನ್‌ಗಳಿಗೆ ಲಗ್ಗೆ ಇರಿಸಿದವರಿಗೆ ಸಿಕ್ಕಿದ್ದು ನೃತ್ಯದ ಝಲಕ್‌ಗಳು. ಸಿನಿಮಾ ಹಾಡುಗಳಿಗೆ ಧನಶ್ರೀ ಮಾಡಿದ ನೃತ್ಯದ ಚಿತ್ರಗಳು ಮತ್ತು ವಿಡಿಯೊಗಳೇ ಅವರ ಇನ್‌ಸ್ಟಾಗ್ರಾಮ್ ಮತ್ತು ಯೂ ಟ್ಯೂಬ್‌ ಚಾನಲ್‌ನ ತುಂಬ ತುಂಬಿವೆ. ಹೌದು, ಧನಶ್ರೀ ವರ್ಮಾ ನೃತ್ಯಪಟು. ಅಷ್ಟು ಮಾತ್ರವೇ…? ಅಲ್ಲ; ನೃತ್ಯ ಅವರು ಸಂಯೋಜಕಿಯೂ ಆಗಿದ್ದಾರೆ.

ಮುಂಬೈನಲ್ಲಿ 1992ರ ಸೆಪ್ಟೆಂಬರ್ 27ರಂದು ಜನಿಸಿದ ಧನಶ್ರೀ ನವಿ ಮುಂಬೈನ ಡಾ.ಡಿ.ವಿ.ಪಾಟೀಲ್ ಕಾಲೇಜಿನಲ್ಲಿ 2014ರಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ್ದರು. ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ತಮ್ಮ ಇಷ್ಟದ ಹವ್ಯಾಸವಾದ ನೃತ್ಯಕ್ಕಾಗಿ ಆಸ್ಪತ್ರೆ ಉದ್ಯೋಗ ತೊರೆದರು. ತಾವೇ ಸಂಯೋಜನೆ ಮಾಡಿದ ನೃತ್ಯವನ್ನು ಯೂ ಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡುವ ಅವರು ‘ಧನಶ್ರೀ ವರ್ಮಾ ಕಂಪನಿ’ ಎಂಬ ನೃತ್ಯ ಕಲಿಕಾ ಕೇಂದ್ರವನ್ನೂ ಆರಂಭಿಸಿದ್ದಾರೆ. ಕೆಲವು ಬಾಲಿವುಡ್ ಹಾಡುಗಳಿಗೆ ಸಿನಿಮಾ ನಟಿಯರೂ ಜೊತೆಗೂಡಿ ಹೆಜ್ಜೆ ಹಾಕಿದ್ದಾರೆ. ಇದೆಲ್ಲವೂ ಧನಶ್ರೀ ಅವರಿಗೆ ಯೂಟ್ಯೂಬ್‌ನಲ್ಲಿ ಹೆಸರು ಗಳಿಸಿಕೊಟ್ಟಿದೆ. ಅವರ ಚಾನಲ್‌ ಚಂದಾದಾರರ ಸಂಖ್ಯೆ 15 ಲಕ್ಷ ದಾಟಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಹಿಂಬಾಲಿಸುತ್ತಿರುವವರ ಸಂಖ್ಯೆ ಐದು ಲಕ್ಷಕ್ಕೂ ಅಧಿಕ.      

‘ಬ್ಯೂಟಿ ವಿಥ್ ಬ್ರೈನ್ಸ್‌’ ಎಂಬ ವಿಶೇಷಣವೂ ಧನಶ್ರೀ ಅವರಿಗಿದೆ. ಬಾಡಿ ಕಂಡೀಷನಿಂಗ್, ಬಾಲಿವುಡ್ ಹಿಪ್ ಹಾಪ್ ತರಬೇತಿ ನೀಡುವ ಅವರು ಮದುವೆ ಸಮಾರಂಭಗಳನ್ನು ‘ವಿನ್ಯಾಸ‘ಗೊಳಿಸುವುದರಲ್ಲೂ ನೈಪುಣ್ಯ ಗಳಿಸಿದ್ದಾರೆ. ಮದುವೆಗಳಿಗೆ ನೃತ್ಯದ ಸೊಬಗು ನೀಡುವುದು ಇದರ ಪ್ರಮುಖ ಭಾಗ.

ನಿಶ್ಚಿತಾರ್ಥದ ನಂತರ ಯಜುವೇಂದ್ರ ಚಾಹಲ್ ಮೊದಲು ಕಣಕ್ಕೆ ಇಳಿಯುವ ಟೂರ್ನಿ ಐಪಿಎಲ್‌. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿರುವ ಅವರ ಪಾಲಿಗೆ ಧನಶ್ರೀ ಭಾಗ್ಯಲಕ್ಷ್ಮಿ ಆಗುವಳೇ ಎಂಬುದು ಎಲ್ಲರ ಕುತೂಹಲ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದರಿಂದ ಮುಂದಿನ ಯೋಜನೆ ಏನಾಗಿರಬಹುದು ಎಂಬ ಕುತೂಹಲವೂ ಗರಿಗೆದರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು