ಬುಧವಾರ, ಜನವರಿ 22, 2020
19 °C
ಶ್ರೀಲಂಕಾ ಕ್ರಿಕೆಟಿಗನ ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ

Viral Video | ಕುಸಿದು ಬಿದ್ದ ಆಟಗಾರನನ್ನು ಔಟ್ ಮಾಡದೆ, ನೆರವಿಗೆ ಧಾವಿಸಿದ ವೇಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರ್ಲ್‌(ದಕ್ಷಿಣ ಆಫ್ರಿಕಾ): ಪೆಟ್ಟು ತಿಂದು ಪಿಚ್ ಮೇಲೆಯೇ ಕುಸಿದು ಬಿದ್ದ ಬ್ಯಾಟ್ಸ್‌ಮನ್‌ಅನ್ನು ರನೌಟ್‌ ಮಾಡುವುದನ್ನು ಬಿಟ್ಟು ನೆರವಿಗೆ ಧಾವಿಸಿದ ಶ್ರೀಲಂಕಾ ಮಧ್ಯಮ ವೇಗಿ ಇಸುರು ಉದಾನ, ದಕ್ಷಿಣ ಆಫ್ರಿಕಾ ಟಿ20 ಟೂರ್ನಿ ಎಂಝಾಂಸಿ ಸೂಪರ್‌ ಲೀಗ್‌ನಲ್ಲಿ (ಎಂಎಸ್‌ಎಲ್‌) ಕ್ರೀಡಾಸ್ಫೂರ್ತಿ ಮೆರೆದರು. ಲೀಗ್‌ನ ಪಾರ್ಲ್‌ ರಾಕ್ಸ್‌ ಹಾಗೂ ನೆಲ್ಸನ್‌ ಮಂಡೇಲಾ ಬೇ ಜೇಂಟ್ಸ್‌ ತಂಡಗಳ ನಡುವಣ ಪಂದ್ಯ ಈ ಮಾನವೀಯ ಕ್ಷಣಕ್ಕೆ ಸಾಕ್ಷಿಯಾಯಿತು.

ಇಲ್ಲಿನ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಕ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ್ದ ಜೇಂಟ್ಸ್‌ 156 ರನ್‌ ಗಳಿಸಲಷ್ಟೇ ಶಕ್ತವಾಗಿ 12 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: ವಿಕೆಟ್ ಪಡೆದು ಅಂಗಳದಲ್ಲೇ ಜಾದೂ ಮಾಡಿ ಸಂಭ್ರಮಿಸಿದ ಆಫ್ರಿಕಾ ಬೌಲರ್!

ಮೊತ್ತ ಬೆನ್ನತ್ತಿದ್ದ ಜೇಂಟ್ಸ್‌ 8 ಎಸೆತಗಳಲ್ಲಿ 24 ರನ್‌ ಗಳಿಸಬೇಕಿದ್ದಾಗ ಸ್ಟ್ರೈಕ್‌ನಲ್ಲಿ ಹೆಯ್ನೋ ಕುಹ್ನ್‌ ಹಾಗೂ ನಾನ್‌ ಸ್ಟ್ರೈಕ್‌ನಲ್ಲಿ ಮಾರ್ಕೊ ಮಾರಿಯಸ್‌ ಬ್ಯಾಟ್‌ ಮಾಡುತ್ತಿದ್ದರು. ಇಸುರು ಉದಾನ ಎಸೆದ 19ನೇ ಓವರ್‌ನ ಐದನೇ ಎಸೆತದಲ್ಲಿ ಕುಹ್ನ್‌, ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ, ಚೆಂಡು ಮಾರ್ಕೊ ತೋಳಿಗೆ ಬಡಿಯಿತು. ಕ್ರೀಸ್‌ ಬಿಟ್ಟು ಸಾಕಷ್ಟು ಮುಂದೆ ಬಂದಿದ್ದ ಮಾರ್ಕೊ ಪೆಟ್ಟು ತಿಂದು ತತ್ತರಿಸಿ ಅಲ್ಲಿಯೇ ಕುಸಿದು ಬಿದ್ದರು.

ಈ ವೇಳೆ ಚೆಂಡನ್ನು ತೆಗೆದುಕೊಂಡ ಉದಾನ ರನೌಟ್‌ ಮಾಡಲು ಅವಕಾಶವಿದ್ದರೂ, ಮಾರ್ಕೊ ಸ್ಥಿತಿ ಕಂಡು ಸುಮ್ಮನಾದರು. ಬಳಿಕ ಅವರ ನೆರವಿಗೆ ಧಾವಿಸಿದರು. ಆ ಕ್ಷಣದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ, ಕ್ರೀಡಾಸ್ಫೂರ್ತಿ ಮೆರೆದ ಉದಾನಗೆ ನೆಟ್ಟಿಗರು ಮೆಚ್ಚುಗೆಯ ಮಳೆಸುರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು