ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS| ಸ್ಟಾರ್ಕ್‌ ದಾಳಿಗೆ ಭಾರತ ತತ್ತರ: ಆಸ್ಟ್ರೇಲಿಯಾಕ್ಕೆ 10 ವಿಕೆಟ್‌ ಜಯ

Last Updated 19 ಮಾರ್ಚ್ 2023, 17:24 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಐದು ವಿಕೆಟ್‌ಗಳನ್ನು ಗಳಿಸಿದ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸ್ವಿಂಗ್ ಮುಂದೆ ಭಾರತ ತಂಡದ ಬ್ಯಾಟರ್‌ಗಳು ಮುಗ್ಗರಿಸಿದರು.

ಇದರಿಂದಾಗಿ ಭಾರತ ತಂಡವು ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಸೋತಿತು. ಮೂರು ಪಂದ್ಯಗಳ ಸರಣಿಯು 1–1ರಿಂದ ಸಮವಾಗಿದೆ. ಇನ್ನೂ ಒಂದು ಪಂದ್ಯ ಬಾಕಿಯಿದೆ.

ಭಾನುವಾರ ವಿಸಿಎ–ವಿಡಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟಾರ್ಕ್ (53ಕ್ಕೆ5) ಅವರ ಬೌಲಿಂಗ್‌ ಮುಂದೆ ಭಾರತ ತಂಡವು 26 ಓವರ್‌ಗಳಲ್ಲಿ 117 ರನ್ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಕೇವಲ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121 ರನ್‌ ಗಳಿಸಿ ಜಯಿಸಿತು. ತಂಡವು ಜಯದ ಗಡಿ ಮುಟ್ಟಿದಾಗ ಇನಿಂಗ್ಸ್‌ನಲ್ಲಿ ಇನ್ನೂ 234 ಎಸೆತಗಳು ಬಾಕಿ ಇದ್ದವು.

ಟ್ರಾವಿಸ್ ಹೆಡ್ (ಔಟಾಗದೆ 51) ಹಾಗೂ ಮಿಚೆಲ್ ಮಾರ್ಷ್ (ಅಜೇಯ 66) ಅರ್ಧಶತಕ ಗಳಿಸಿದರು. ಅದರಲ್ಲೂ ಮಾರ್ಷ್ ಅರ್ಧ ಡಜನ್ ಸಿಕ್ಸರ್‌ ಸಿಡಿಸಿದರು. ಅವರು ಮೊದಲ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ್ದರು.

ಬ್ಯಾಟಿಂಗ್ ವೈಫಲ್ಯ: ವಿರಾಟ್ ಕೊಹ್ಲಿ (31; 35ಎ), ರವೀಂದ್ರ ಜಡೇಜ (16; 39ಎ) ಹಾಗೂ ಅಕ್ಷರ್ ಪಟೇಲ್ (29; 29ಎ) ಅವರಷ್ಟೇ ಪ್ರವಾಸಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುವ ಪ್ರಯತ್ನ ಮಾಡಿದರು. ಉಳಿದವರು ಸ್ಟಾರ್ಕ್‌ ದಾಳಿಯ ಮುಂದೆ ತತ್ತರಿಸಿದರು.

ಸ್ಟಾಕ್ ಅವರು ರೋಹಿತ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಕಳೆದ ಪಂದ್ಯದಲ್ಲಿ ಮಿಂಚಿದ್ದ ಕೆ.ಎಲ್. ರಾಹುಲ್ ಮತ್ತು ಕೊನೆಯಲ್ಲಿ ಸಿರಾಜ್ ವಿಕೆಟ್‌ಗಳನ್ನು ಕಬಳಿಸಿದರು.

ಶುಭಮನ್ ಗಿಲ್ ಮೊದಲ ಓವರ್‌ನಲ್ಲಿಯೇ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಸತತ ಎರಡನೇ ಪಂದ್ಯದಲ್ಲಿ ಕ್ರಾಸ್‌ಬ್ಯಾಟ್ ಆಡಲು ಹೋಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಸೊನ್ನೆ ಸುತ್ತಿದರು.

ಕೊಹ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ, ಮಧ್ಯಾಹ್ನದ ಬಿಸಿಲಿನಲ್ಲಿ ಪಿಚ್‌ನಲ್ಲಿದ್ದ ಸತ್ವವನ್ನು ಅರಿತು ಬೌಲಿಂಗ್ ಮಾಡಿದ ನೇಥನ್ ಎಲ್ಲಿಸ್‌ ಎಸೆತದಲ್ಲಿ ವಿರಾಟ್ ಎಲ್‌ಬಿಡಬ್ಲ್ಯು ಆದರು.

ಇದರಿಂದಾಗಿ ತಂಡವು ನೂರು ರನ್‌ ಗಳಿಸುವ ಮುನ್ನವೇ ಆಲೌಟ್ ಆಗುವ ಆತಂಕ ಎದುರಾಗಿತ್ತು. ಆದರೆ ಎಡಗೈ ಜೋಡಿ ಜಡೇಜ ಮತ್ತು ಅಕ್ಷರ್ ಪಟೇಲ್ ಒಂದಿಷ್ಟು ರನ್‌ಗಳ ಕಾಣಿಕೆ ನೀಡಿದರು. ಅಕ್ಷರ್ ಎರಡು ಸಿಕ್ಸರ್‌ ಮತ್ತು ಒಂದು ಬೌಂಡರಿ ಕೂಡ ಗಳಿಸಿದರು. ಸೀನ್ ಅಬಾಟ್ ಮೂರು ವಿಕೆಟ್ ಗಳಿಸಿದರು.

ಮೂರನೇ ಹಾಗೂ ಕೊನೆಯ ಪಂದ್ಯವು ಇದೇ 22ರಂದು ಚೆನ್ನೈನಲ್ಲಿ ನಡೆಯಲಿದೆ.

ಸರಣಿಯ ಅಂತಿಮ ಪಂದ್ಯವು ಮಾರ್ಚ್ 22ರಂದು ಚೆನ್ನೈಯಲ್ಲಿ ನಡೆಯಲಿದೆ.

ಸ್ಕೋರ್‌ ಕಾರ್ಡ್‌

ಭಾರತ 117 (26 ಓವರ್‌)

ರೋಹಿತ್‌ ಸಿ ಸ್ಮಿತ್‌ ಬಿ ಸ್ಟಾರ್ಕ್‌ 13 (15ಎ, 4X2)

ಶುಭಮನ್‌ ಸಿ ಲಾಬುಷೇನ್‌ ಬಿ ಸ್ಟಾರ್ಕ್‌ 0 (2ಎ)

ವಿರಾಟ್‌ ಎಲ್‌ಬಿಡಬ್ಲ್ಯು ಬಿ ಎಲಿಸ್‌ 31 (35ಎ, 4X4)

ಸೂರ್ಯಕುಮಾರ್ ಎಲ್‌ಬಿಡಬ್ಲ್ಯು ಬಿ ಸ್ಟಾರ್ಕ್‌ 0 (1ಎ)

ರಾಹುಲ್‌ ಎಲ್‌ಬಿಡಬ್ಲ್ಯು ಬಿ ಸ್ಟಾರ್ಕ್‌ 9 (12ಎ, 4X1)

ಹಾರ್ದಿಕ್‌ ಸಿ ಸ್ಮಿತ್‌ ಬಿ ಅಬಾಟ್‌ 1 (3ಎ)

ಜಡೇಜ ಸಿ ಕ್ಯಾರಿ ಬಿ ಎಲಿಸ್‌ 16 (39ಎ, 4X1)

ಅಕ್ಷರ್‌ ಔಟಾಗದೆ 29 (29ಎ, 4X1, 6X2)

ಕುಲದೀಪ್ ಸಿ ಟ್ರಾವಿಸ್‌ ಬಿ ಅಬಾಟ್‌ 4 (17ಎ)

ಶಮಿ ಸಿ ಕ್ಯಾರಿ ಬಿ ಅಬಾಟ್‌ 0 (1ಎ)

ಸಿರಾಜ್‌ ಬಿ ಸ್ಟಾರ್ಕ್‌ 0 (3ಎ)

ಇತರೆ: 14 (ಲೆಗ್‌ಬೈ 2, ನೋಬಾಲ್ 1, ವೈಡ್ 11)

ವಿಕೆಟ್ ಪತನ: 1-3 (ಶುಭಮನ್ ಗಿಲ್‌, 0.3), 2-32 (ರೋಹಿತ್‌ ಶರ್ಮಾ, 4.4), 3-32 (ಸೂರ್ಯಕುಮಾರ್ ಯಾದವ್‌, 4.5), 4-48 (ಕೆ.ಎಲ್‌.ರಾಹುಲ್‌, 8.4), 5-49 (ಹಾರ್ದಿಕ್ ಪಾಂಡ್ಯ, 9.2), 6-71 (ವಿರಾಟ್‌ ಕೊಹ್ಲಿ, 15.2), 7-91 (ರವೀಂದ್ರ ಜಡೇಜ, 19.3), 8-103 (ಕುಲದೀಪ್ ಯಾದವ್‌, 24.4), 9-103 (ಮೊಹಮ್ಮದ್ ಶಮಿ, 24.5), 10-117 (ಮೊಹಮ್ಮದ್ ಸಿರಾಜ್‌, 25.6)

ಬೌಲಿಂಗ್‌: ಮಿಚೆಲ್ ಸ್ಟಾರ್ಕ್‌ 8–1–53–5, ಕ್ಯಾಮರಾನ್ ಗ್ರೀನ್‌ 5–0–20–0, ಸೀನ್ ಅಬಾಟ್‌ 6–0–23–3, ನೇಥನ್ ಎಲಿಸ್‌ 5–0–13–2, ಆ್ಯಡಂ ಜಂಪಾ 2–0–6–0

ಆಸ್ಟ್ರೇಲಿಯಾ ವಿಕೆಟ್‌ ನಷ್ಟವಿಲ್ಲದೆ 121 (11 ಓವರ್‌)

ಟ್ರಾವಿಸ್‌ ಔಟಾಗದೆ 51 (30ಎ, 4X10)

ಮಾರ್ಷ್‌ ಔಟಾಗದೆ 66 (36ಎ, 4X6, 6X6) ಇತರೆ: 4 (ವೈಡ್‌ 4)

ಬೌಲಿಂಗ್‌: ಮೊಹಮ್ಮದ್ ಶಮಿ 3–0–29–0, ಮೊಹಮ್ಮದ್ ಸಿರಾಜ್‌ 3–0–37–0, ಅಕ್ಷರ್ ಪಟೇಲ್‌ 3–0–25–0, ಹಾರ್ದಿಕ್ ಪಾಂಡ್ಯ 1–0–18–0, ಕುಲದೀಪ್ ಯಾದವ್‌ 1–0–12–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT