ಭಾನುವಾರ, ಜನವರಿ 17, 2021
22 °C
ಆಸ್ಟ್ರೇಲಿಯಾ ಕೈವಶವಾದ ಏಕದಿನ ಕ್ರಿಕೆಟ್ ಸರಣಿ: ವಿರಾಟ್, ರಾಹುಲ್ ಆಟ ವ್ಯರ್ಥ

ಸ್ಮಿತ್ ಆಟಕ್ಕೆ ವಿರಾಟ್ ಬಳಗ ಚಿತ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಪಡೆಯ ದೌರ್ಬಲ್ಯ ಭಾನುವಾರ ಮತ್ತೊಮ್ಮೆ ಬಟಾಬಯಲಾಯಿತು. 

ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಶತಕ ಬಾರಿಸಿದ ಸ್ಟೀವನ್ ಸ್ಮಿತ್ ಆಟದ ಬಲದಿಂದ ಆಸ್ಟ್ರೇಲಿಯಾ ತಂಡವು 51 ರನ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಕೈವಶ ಮಾಡಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡವು 50 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 389 ರನ್‌ ಗಳಿಸಿ, ಭಾರತಕ್ಕೆ ಕಠಿಣ ಗುರಿ ಒಡ್ಡಿತು. ಸ್ಮಿತ್ (104; 62ಎಸೆತ, 14ಬೌಂಡರಿ, 2ಸಿಕ್ಸರ್) ಮತ್ತು ನಾಲ್ವರು ಬ್ಯಾಟ್ಸ್‌ಮನ್‌ಗಳು ಬಾರಿಸಿದ ಅರ್ಧಶತಕಗಳಿಂದಾಗಿ ಆಸ್ಟ್ರೇಲಿಯಾ ದೊಡ್ಡ ಮೊತ್ತ ಪೇರಿಸಿತು.

ಗುರಿ ಬೆನ್ನತ್ತಿದ ಭಾರತ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 338 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ (89;87ಎ, 7ಬೌಂ,2ಸಿ) ಮತ್ತು ಕೆ.ಎಲ್. ರಾಹುಲ್ (76; 66ಎ, 4ಬೌಂ, 5ಸಿ) ಅಬ್ಬರದ ಆಟ ವ್ಯರ್ಥವಾಯಿತು.

ಭಾರತದ ಇನಿಂಗ್ಸ್‌ಗೆ ಮಯಂಕ್ ಅಗರವಾಲ್ (28; 26ಎ) ಮತ್ತು ಶಿಖರ್ ಧವನ್ (30; 23ಎ) ಮೊದಲ ವಿಕೆಟ್‌ಗೆ 58 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಎಂಟು ಮತ್ತು ಒಂಬತ್ತನೇ ಓವರ್‌ನಲ್ಲಿ ಕ್ರಮವಾಗಿ ಶಿಖರ್ ಮತ್ತು ಮಯಂಕ್ ಪೆವಿಲಿಯನ್ ಸೇರಿದರು.  ನಂತರ ಶ್ರೇಯಸ್ ಮತ್ತು ವಿರಾಟ್ ಮೂರನೇ ವಿಕೆಟ್‌ಗೆ 93 ರನ್‌ ಸೇರಿಸಿದರು. ಹೆನ್ರಿಕ್ಸ್‌ ಈ ಜೊತೆಯಾಟವನ್ನು ಮುರಿದರು. ರಾಹುಲ್ ಅಮೋಘ ಆಟವಾಡಿದರು. ಆದರೆ ಹಾರ್ದಿಕ್ ಮತ್ತು ಜಡೇಜ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು.

ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ (83; 77ಎ) ಮತ್ತು ನಾಯಕ ಆ್ಯರನ್ ಫಿಂಚ್ (60; 69ಎ) ಭರ್ಜರಿ ಆರಂಭ ನೀಡಿದರು. 23 ಓವರ್‌ಗಳು ಮುಗಿಯುಷ್ಟ್ರರಲ್ಲಿಯೇ 142 ರನ್‌ಗಳನ್ನು ಸೇರಿಸಿದರು. ಸತತ ಎರಡನೇ ಪಂದ್ಯದಲ್ಲಿಯೂ ಇವರಿಬ್ಬರೂ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. 

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಫಿಂಚ್‌ ಆಟಕ್ಕೆ ಇಲ್ಲಿ ಮೊಹಮ್ಮದ್ ಶಮಿ ತಡೆಯೊಡ್ಡಿದರು.  ಇದಾಗಿ ಎರಡು ಓವರ್‌ಗಳ ನಂತರ ಶ್ರೇಯಸ್ ಅಯ್ಯರ್ ಚುರುಕಿನ ಫೀಲ್ಡಿಂಗ್‌ನಿಂದಾಗಿ ವಾರ್ನರ್ ರನ್‌ಔಟ್ ಆದರು.

ಆದರೆ, ಭಾರತ ತಂಡಕ್ಕೆ ಅವರಿಬ್ಬರ ನಿರ್ಗಮನದ ಖುಷಿ ಅನುಭವಿಸಲು ಸ್ಮಿತ್ ಬಿಡಲಿಲ್ಲ. ಈ ಪಂದ್ಯದಲ್ಲಿಯೂ ಅವರು 62 ಎಸೆತಗಳಲ್ಲಿ ನೂರರ ಗಡಿ ದಾಟಿದರು.  ಭಾರತದ ಎದುರು ಇದು ಅವರ ಐದನೇ ಶತಕ. ಬೌಲರ್‌ಗಳ ಯಾವ ಎಸೆತಕ್ಕೂ ಅವರು ಜಗ್ಗಲಿಲ್ಲ. ಅವರ ವಿಚಿತ್ರವಾದ ಪದಚಲನೆಯು ಬೌಲರ್‌ಗಳ ಹದ ತಪ್ಪಿಸಿತು. ಅದರ ಲಾಭ ಪಡೆದ ಸ್ಮಿತ್ 14 ಬೌಂಡರಿ ಸಿಡಿಸಿದರು. 162.50ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಅವರಿಗೆ ಉತ್ತಮ ಜೊತೆ ನೀಡಿದ ಮಾರ್ನಸ್ ಲಾಬುಷೇನ್ (70; 61ಎ, 5ಬೌಂ) ಮೂರನೇ ವಿಕೆಟ್ ಜೊತೆಯಾಟದಲ್ಲಿ 135 ರನ್‌ಗಳು ಸೇರಲು ಕಾರಣರಾದರು. 42ನೇ ಓವರ್‌ನಲ್ಲಿ ಸ್ಮಿತ್ ವಿಕೆಟ್ ಗಳಿಸಿದ ಹಾರ್ದಿಕ್ ಪಾಂಡ್ಯ ಸಂಭ್ರಮಿಸಿದರು. ಕಳೆದ ಒಂದು ವರ್ಷದಲ್ಲಿ ಇದೇ ಮೊದಲ ಬಾರಿ ಪಾಂಡ್ಯ ಬೌಲಿಂಗ್ ಮಾಡಿದರು. ಅವರು ಐಪಿಎಲ್‌ನಲ್ಲಿಯೂ ಬೌಲಿಂಗ್ ಮಾಡಿರಲಿಲ್ಲ.

ಸ್ಮಿತ್ ಔಟಾದಾಗ ತಂಡದ ಮೊತ್ತ ಇನ್ನೂ 300ರ ಗಡಿ ದಾಟಿರಲಿಲ್ಲ. ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ (ಔಟಾಗದೆ 63; 29ಎ,4ಬೌಂ, 4ಸಿ) ಬೌಲರ್‌ಗಳ ಚಳಿ ಬಿಡಿಸಿದರು. ಅವರು ಮತ್ತು ಲಾಬುಷೇನ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಲು ಕೇವಲ 41 ಎಸೆತಗಳನ್ನು ತೆಗೆದುಕೊಂಡರು. 44ನೇ ಓವರ್‌ನಲ್ಲಿ ಲಾಬುಷೇನ್ ಅವರ ಕ್ಯಾಚ್ ಅನ್ನು ರವೀಂದ್ರ ಜಡೇಜ ನೆಲಕ್ಕೆ ಚೆಲ್ಲಿದ್ದು ತುಟ್ಟಿಯಾಯಿತು. 49ನೇ ಓವರ್‌ನಲ್ಲಿ  ಔಟಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು