ಐಸಿಸಿ ಟೆಸ್ಟ್ ರ್‍ಯಾಂಕಿಂಗ್ | ಕುಸಿದ ಕೊಹ್ಲಿ; ಅಗ್ರ ಹತ್ತರಲ್ಲಿ ಭಾರತದ ನಾಲ್ವರು

ದುಬೈ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್‍ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಸ್ಮಿತ್ ಖಾತೆಯಲ್ಲಿ ಒಟ್ಟು 911 ಅಂಕಗಳಿದ್ದು, ಕೊಹ್ಲಿ 906 ಅಂಕ ಹೊಂದಿದ್ದಾರೆ.
ಕಿವೀಸ್ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 2 ರನ್ ಗಳಿಸಿದ್ದ ಕೊಹ್ಲಿ, ಎರಡನೇ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿ ಔಟಾಗಿದ್ದರು. ಹೀಗಾಗಿ ಒಟ್ಟು 22 ಪಾಯಿಂಟ್ಸ್ ಕಳೆದುಕೊಂಡು ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಈ ಸರಣಿಗೂ ಮುನ್ನ ಕೊಹ್ಲಿ ಖಾತೆಯಲ್ಲಿ 928 ಪಾಯಿಂಟ್ಸ್ ಇದ್ದವು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸರಾಸರಿ ಪ್ರತಿ 6.5 ಇನಿಂಗ್ಸ್‌ಗೊಂದರಂತೆ ಶತಕ ಬಾರಿಸಿರುವ ಅವರು, ಕಳೆದ 20 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಮೂರಂಕಿ ದಾಟಿಲ್ಲ.
ಇದನ್ನೂ ಓದಿ: ಕೊಹ್ಲಿಗೆ ಶತಕದ ಬರ: 19 ಇನಿಂಗ್ಸ್ ಮುಗಿದರೂ ಮೂರಂಕಿ ಮುಟ್ಟದ ನಂ.1 ಬ್ಯಾಟ್ಸ್ಮನ್
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ (827) ಹಾಗೂ ಪಾಕಿಸ್ತಾನದ ಬಾಬರ್ ಅಜಂ (800) ಇದ್ದಾರೆ.
ಒಟ್ಟಾರೆ ಭಾರತದ ನಾಲ್ವರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸ್ಥಾನ ಮೇಲೇರಿರುವ ಅಜಿಂಕ್ಯ ರಹಾನೆ 8ರಲ್ಲಿ ಇದ್ದಾರೆ. ಎರಡು ಸ್ಥಾನ ಕಳೆದುಕೊಂಡಿರುವ ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ 9ರಲ್ಲಿ ಕಾಣಿಕೊಂಡಿದ್ದಾರೆ. ಕನ್ನಡಿಗ ಮಯಂಕ್ ಅಗರವಾಲ್ 2 ಸ್ಥಾನ ಮೇಲೇರಿದ್ದು, 10ನೇ ಸ್ಥಾನಪಡೆದಿದ್ದಾರೆ.
ಬೌಲರ್‌ಗಳ ವಿಭಾಗದಲ್ಲಿ ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (904), ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್ (843), ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (830), ದಕ್ಷಿಣ ಆಫ್ರಿಕಾದ ಕಗಿಸೊ ರಬಡ (802) ಮತ್ತು ಆಸ್ಟ್ರೇಲಿಯಾದ ಮಿಚೇಲ್ ಸ್ಟಾರ್ಕ್ (796) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.
ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 1 ವಿಕೆಟ್ ಪಡೆದಿದ್ದ ಜಸ್‌ಪ್ರೀತ್ ಬೂಮ್ರಾ 11ನೇ ಸ್ಥಾನಕ್ಕೆ ಜಾರಿದ್ದಾರೆ. ಹೀಗಾಗಿ 9ನೇ ಸ್ಥಾನದಲ್ಲಿರುವ ರವಿಚಂದ್ರನ್ ಅಶ್ವಿನ್ (765), ಅಗ್ರ ಹತ್ತರಲ್ಲಿ ಕಾಣಿಸಿಕೊಂಡ ಭಾರತದ ಏಕೈಕ ಬೌಲರ್ ಎನಿಸಿದ್ದಾರೆ.
ಜೇಸನ್ ಹೋಲ್ಡರ್ (473), ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (407), ಭಾರತದ ರವೀಂದ್ ಜಡೇಜಾ (397), ಆಸಿಸ್‌ನ ಸ್ಟಾರ್ಕ್ (298) ಮತ್ತು ಭಾರತದ ರವಿಚಂದ್ರನ್ ಅಶ್ವಿನ್ (288) ಆಲ್ರೌಂಡರ್‌ಗಳ ವಿಭಾಗದಲ್ಲಿ ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.