ಮಂಗಳವಾರ, ಅಕ್ಟೋಬರ್ 19, 2021
22 °C

ಆರ್‌ಸಿಬಿ ಬ್ರ್ಯಾಂಡ್ ಮೌಲ್ಯ ವರ್ಧಿಸಿದ ಕೊಹ್ಲಿ: ಕ್ರಿಕೆಟಿಗ ಸುನೀಲ್ ಗಾವಸ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ರಜ್ವಲಿಸುವ ವರ್ಚಸ್ಸಿಗೆ  ವಿರಾಟ್ ಕೊಹ್ಲಿ ನಾಯಕತ್ವ ಕಾರಣ. ತಂಡಕ್ಕೊಂದು ಬ್ರ್ಯಾಂಡ್ ಮೌಲ್ಯ ತಂದುಕೊಟ್ಟ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ದಿಗ್ಗಜ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.‌

‘ಕೆಲವೇ ಕ್ರಿಕೆಟಿಗರು ಮತ್ತು ನಾಯಕರು ತಮ್ಮ ಫ್ರ್ಯಾಂಚೈಸ್‌ಗೆ ಇಂತಹದೊಂದು ಕಳೆ ತುಂಬಿದ್ದಾರೆ. ಆದರೆ, ಕೊಹ್ಲಿ ಕಾಣಿಕೆಯು ಉನ್ನತಮಟ್ಟದ್ದಾಗಿದೆ. ಇದು ಎಲ್ಲರಿಂದಲೂ ಸಾಧ್ಯವಾಗದು’ ಎಂದು ಸ್ಟಾರ್ ಸ್ಪೋರ್ಟ್‌ಗೆ ಹೇಳಿಕೆ ನೀಡಿದ್ದಾರೆ.

ವಿರಾಟ್ ನಾಯಕತ್ವದ ಕೊನೆಯ ಪಂದ್ಯವನ್ನು ಗಾವಸ್ಕರ್ ಅವರು, ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ಅವರ ವಿದಾಯದ ಪಂದ್ಯಗಳಿಗೆ ಹೋಲಿಕೆ ಮಾಡಿದ್ದಾರೆ.

‘ತಮ್ಮ ಕೊನೆಯ ಪಂದ್ಯದಲ್ಲಿ ಅಮೋಘ ಯಶಸ್ಸಿನ ನಗುವಿನೊಂದಿಗೆ ಮರಳುವುದು ಎಲ್ಲ ಕ್ರಿಕೆಟಿಗರ ಆಸೆ. ಆದರೆ ಬಹಳಷ್ಟು ಶ್ರೇಷ್ಠ ಆಟಗಾರರಿಗೆ ಇದು ಸಾಧ್ಯವಾಗಿಲ್ಲ. ಡಾನ್ ಬ್ರಾಡ್ಮನ್ ತಮ್ಮ ಕೊನೆಯ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಸಚಿನ್ ತೆಂಡೂಲ್ಕರ್ ಕೊನೆಯ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಆಸೆ ಹೊಂದಿದ್ದರು. ಆದರೆ ಸಚಿನ್ ಅರ್ಧಶತಕ (74 ರನ್) ಗಳಿಸಿ ಔಟಾಗಿದ್ದರು. ವಿರಾಟ್ ನಾಯಕತ್ವದ ಕೊನೆಯ ಐಪಿಎಲ್‌ನಲ್ಲಿ ಪ್ರಶಸ್ತಿ ಜಯಿಸುವ ಕನಸು ಕಂಡಿದ್ದರು. ಆದರೆ, ಎಲಿಮಿನೇಟರ್‌ನಲ್ಲಿಯೇ ತಂಡವು ಹೊರಬಿತ್ತು’ ಎಂದರು.

‘ಕೊಹ್ಲಿ ತಂಡಕ್ಕೆ ನೀಡಿರುವ ಕಾಣಿಕೆ ಅಮೂಲ್ಯವಾದದ್ದು. ಅದೊಂದು ವರ್ಷ (2016) ವಿರಾಟ್ ಐಪಿಎಲ್‌ನಲ್ಲಿ 973 ರನ್‌ಗಳನ್ನು ಪೇರಿಸಿದ್ದರು. ಸಾವಿರಕ್ಕೆ 27 ರನ್‌ಗಳಷ್ಟೇ ವ್ಯತ್ಯಾಸವಿತ್ತು. ಇದು ಅಸಾಮಾನ್ಯರಿಂದ ಮಾತ್ರ ಸಾಧ್ಯ’ ಎಂದು  ಗಾವಸ್ಕರ್ ಶ್ಲಾಘಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು