ಸೋಮವಾರ, ಫೆಬ್ರವರಿ 17, 2020
30 °C
ಕರುಣ್ ಅರ್ಧಶತಕ

ಸೂಪರ್‌ ಲೀಗ್‌ಗೆ ಕರ್ನಾಟಕ, ಬಿಹಾರ ವಿರುದ್ಧ ನಿರಾಯಾಸ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶಾಖಪಟ್ಟಣ: ನಿರೀಕ್ಷೆಯಂತೆಯೇ ಬಿಹಾರ ತಂಡವು ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಸುಲಭದ ತುತ್ತಾಯಿತು.

ಶುಕ್ರವಾರ ಇಲ್ಲಿ ನಡೆದ  ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ  ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವು 9 ವಿಕೆಟ್‌ಗಳಿಂದ ಬಿಹಾರ ಎದುರು ಜಯಿಸಿತು. ಇದರೊಂದಿಗೆ ಒಟ್ಟು 16 ಪಾಯಿಂಟ್ಸ್‌ ಗಳಿಸಿ ಸೂಪರ್ ಲೀಗ್ ಪ್ರವೇಶ ಖಚಿತಪಡಿಸಿಕೊಂಡಿತು.

ಟಾಸ್ ಗೆದ್ದ ಬಿಹಾರ ತಂಡವು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿತು. ಕರ್ನಾಟಕದ ಬೌಲಿಂಗ್ ಪಡೆಯ ದಾಳಿಯ ಮುಂದೆ 106 ರನ್‌ಗಳ ಅಲ್ಪಮೊತ್ತಕ್ಕೆ ಕುಸಿಯಿತು. ಮಧ್ಯಮವೇಗಿಗಳಾದ ರೋನಿತ್ ಮೋರೆ, ವಿ.ಕೌಶಿಕ್, ಸ್ಪಿನ್ನರ್‌ಗಳಾದ ಪ್ರವೀಣ್ ದುಬೆ ಮತ್ತು ಶ್ರೆಯಸ್ ಗೋಪಾಲ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಎಡಗೈ ಸ್ಪಿನ್ನರ್ ಜೆ. ಸುಚಿತ್ ಒಂದು ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡವು 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 107 ರನ್‌ ಗಳಿಸಿ ಗುರಿ ಮುಟ್ಟಿತು. ಬಾಂಗ್ಲಾ ಎದುರು ಟಿ20 ಸರಣಿಯಲ್ಲಿ ಆಡಿ ಬಂದಿರುವ ಕೆ.ಎಲ್. ರಾಹುಲ್ ಈ ಪಂದ್ಯದಲ್ಲಿ ದೇವದತ್ತ ಪಡಿಕ್ಕಲ್ ಜೊತೆಗೆ ಇನಿಂಗ್ಸ್ ಆರಂಭಿಸಿದರು.  ಆದರೆ ಕೇವಲ ಎರಡು ರನ್ ಗಳಿಸಿ ಔಟಾದರು. ಈ ಹಂತದಲ್ಲಿ ದೇವದತ್ತ ಜೊತೆಗೂಡಿದ ಕರುಣ್ ನಾಯರ್ (ಔಟಾಗದೆ 65; 36ಎಸೆತ, 7ಬೌಂಡರಿ, 4ಸಿಕ್ಸರ್) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 102 ರನ್‌ ಸೇರಿಸಿದರು. ತಂಡವನ್ನು ಗೆಲುವಿನ ದಡ ತಲುಪಿಸಿದರು.

ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ಗಳಿಸಿದ ಕರುಣ್ ನಾಯರ್ ಲಯ ಕಂಡುಕೊಂಡರು. ವಿಜಯ್ ಹಜಾರೆ ಟೂರ್ನಿಯಲ್ಲಿ ಅವರು ರನ್‌ ಗಳಿಸಲು ಬಹಳಷ್ಟು ಪ್ರಯಾಸಪಟ್ಟಿದ್ದರು. ಅವರು ಇಲ್ಲಿ ಲಯಕ್ಕೆ ಮರಳಿರುವುದರಿಂದ ತಂಡದ ಬ್ಯಾಟಿಂಗ್ ಶಕ್ತಿ ಹೆಚ್ಚಿದಂತಾಗಿದೆ.

ಕರ್ನಾಟಕವು ಈ ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಗೋವಾ ಎದುರು ಭಾನುವಾರ ಆಡಲಿದೆ.

ಸಂಕ್ಷಿಪ್ತ ಸ್ಕೋರು: ಎ ಗುಂಪು: ಬಿಹಾರ: 19.3 ಓವರ್‌ಗಳಲ್ಲಿ 106 (ಬಾಬುಲ್ ಕುಮಾರ್ 41, ಮೊಹಮ್ಮದ್ ರೆಹಮತ್‌ ಉಲ್ಲಾ 23, ಆಶುತೋಷ್ ಅಮನ್ 21, ರೋನಿತ್ ಮೋರೆ 22ಕ್ಕೆ2, ವಿ.ಕೌಶಿಕ್ 24ಕ್ಕೆ2, ಪ್ರವೀಣ ದುಬೆ 18ಕ್ಕೆ2, ಶ್ರೇಯಸ್ ಗೋಪಾಲ್ 16ಕ್ಕೆ2) ಕರ್ನಾಟಕ: 11.2 ಓವರ್‌ಗಳಲ್ಲಿ 1 ವಿಕೆಟ್‌ಗೆ 107 (ದೇವದತ್ತ ಪಡಿಕ್ಕಲ್ ಔಟಾಗದೆ 37, ಕರುಣ್ ನಾಯರ್ ಔಠಾಗದೆ 65, ಅಭಿಜಿತ್ ಸಾಕೇತ್ 33ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 9 ವಿಕೆಟ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು