ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಎದುರು ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಖಾನ್: ತಮಿಳುನಾಡಿಗೆ ಟ್ರೋಫಿ

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿ
Last Updated 22 ನವೆಂಬರ್ 2021, 12:42 IST
ಅಕ್ಷರ ಗಾತ್ರ

ನವದೆಹಲಿ:ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ನಾಲ್ಕು ವಿಕೆಟ್ ಅಂತರದಿಂದ ಮಣಿಸಿದ ತಮಿಳುನಾಡು ಪಡೆ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.ಕೊನೇ ಎಸೆತದಲ್ಲಿ ಐದು ರನ್ ಬೇಕಿದ್ದಾಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಾರುಕ್ ಖಾನ್ ಸಿಕ್ಸರ್ ಸಿಡಿಸಿ ಕರ್ನಾಟಕದ ಕೈಯಿಂದ ಜಯ ಕಸಿದುಕೊಂಡರು.

ಹೀಗಾಗಿ 2018–19 ಮತ್ತು 2019–20ರಲ್ಲಿ ಪ್ರಶಸ್ತಿ ಗೆದ್ದಿದ್ದ ಕರ್ನಾಟಕದ 'ಹ್ಯಾಟ್ರಿಕ್' ಆಸೆ ಕೈಗೂಡಲಿಲ್ಲ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು151 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ವಿಜಯ್ ಶಂಕರ್ ಪಡೆ, ಅಂತಿಮ ಎಸೆತದವರೆಗೂ ಹೋರಾಡಿ ಜಯ ದಕ್ಕಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದಮನೀಷ್ ಪಾಂಡೆ ಬಳಗದ ಆರಂಭ ಉತ್ತಮವಾಗಿರಲಿಲ್ಲ. ಸೆಮಿಫೈನಲ್ ಪಂದ್ಯದ ಹೀರೋ ರೋಹನ್ ಕದಂ ಇಲ್ಲಿ ಸೊನ್ನೆ ಸುತ್ತಿದರು. ತಂಡದ ಮೊತ್ತ 32 ರನ್ ಆಗಿದ್ದ ವೇಳೆ ಪಾಂಡೆ (13) ಮತ್ತು ಕರುಣ್ ನಾಯರ್ (18) ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು. ಬಳಿಕ ಬಂದ ಬಿ.ಆರ್.ಶರತ್16 ರನ್ ಗಳಿಸಿ ವಿಕೆಟ್ ಕೈ ಚೆಲ್ಲಿದರು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಚೆನ್ನಾಗಿ ಬ್ಯಾಟ್‌ ಬೀಸಿದ ಅಭಿನವ್ ಮನೋಹರ್ (46) ಹಾಗೂ ಪ್ರವೀಣ್ ದುಬೆ (33) ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಈ ಮೊತ್ತ ಬೆನ್ನತ್ತಿದ ತಮಿಳುನಾಡಿಗೆ ಎನ್.ಜಗದೀಶನ್ ಮತ್ತು ಶಾರುಕ್ ಖಾನ್ ನೆರವಾದರು. ಜಗದೀಶನ್ಅಗ್ರ ಕ್ರಮಾಂಕದಲ್ಲಿ ನಿಧಾನಗತಿಯ ಆಟವಾಡಿದರೂ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅವರು 46 ಎಸೆತಗಳಲ್ಲಿ 41 ರನ್ ಗಳಿಸಿದರು.

16ನೇ ಓವರ್‌ನಲ್ಲಿ ಜಗದೀಶನ್ ಔಟಾದಾಗ ತಂಡದ ಮೊತ್ತ 4 ವಿಕೆಟ್‌ಗೆ 97ರನ್ ಆಗಿತ್ತು. ಹೀಗಾಗಿ ತಮಿಳುನಾಡಿಗೆ ಕೊನೇ ನಾಲ್ಕು ಓವರ್‌ಗಳಲ್ಲಿ ಗೆಲ್ಲಲು55 ರನ್‌ಗಳ ಅಗತ್ಯವಿತ್ತು.

ಈ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಾರುಖ್, ಕೇವಲ 15 ಎಸೆತಗಳಲ್ಲಿ ಒಂದು ಫೋರ್ ಮತ್ತು ಮೂರು ಸಿಕ್ಸರ್ ಸಹಿತ 33 ರನ್ ಚಚ್ಚಿದರು.

ಅಂತಿಮ ನಾಲ್ಕು ಓವರ್‌ಗಳಲ್ಲಿ ಬರೋಬ್ಬರಿ 9 ಇತರೆ ರನ್ ಕೊಡುಗೆ ನೀಡಿದ್ದು ಕರ್ನಾಟಕಕ್ಕೆ ಮುಳುವಾಯಿತು.

ಇನಿಂಗ್ಸ್‌ನ ಮಧ್ಯದಲ್ಲಿ ಕರ್ನಾಟಕ ಚೆನ್ನಾಗಿ ಬೌಲಿಂಗ್ ಮಾಡಿತು. ಆದರೂ ಶಾರೂಖ್ ಖಾನ್ ದಿಟ್ಟವಾಗಿ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ವಿಜಯ್ ಶಂಕರ್, ತಮಿಳುನಾಡು ತಂಡದ ನಾಯಕ

***

ಕೊನೆಯ ಎಸೆತ ಎದುರಿಸುವಾಗ ಹಲವು ಯೋಚನೆಗಳು ಬಂದಿದ್ದವು. ನನ್ನ ನಿರೀಕ್ಷೆಯಂತೆ ಚೆಂಡು ನುಗ್ಗಿಬಂತು. ಹೀಗಾಗಿ ಸಿಕ್ಸರ್ ಎತ್ತುವುದು ಸುಲಭವಾಯಿತು.
ಶಾರೂಖ್ ಖಾನ್, ತಮಿಳುನಾಡು ಬ್ಯಾಟರ್

***

ಟೂರ್ನಿಯ ಉದ್ದಕ್ಕೂ ಆಟಗಾರರು ಉತ್ತಮ ಕಾಣಿಕೆ ನೀಡಿದ್ದಾರೆ.ಆದರೂ ಸೋಲು ಬೇಸರ ತಂದಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಂದ ಇನ್ನಷ್ಟು ರನ್ ಬರಬೇಕಾಗಿತ್ತು.
ಮನೀಷ್ ಪಾಂಡೆ, ಕರ್ನಾಟಕ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT