ಬುಧವಾರ, ಜನವರಿ 29, 2020
25 °C

ಕನಸುಗಳ ರಥವೇರಿ ಬಂತು ಟ್ವೆಂಟಿ–20

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ಅಂಗಳದಲ್ಲಿ 2020ರ ವರ್ಷ ಏನು ಕರಾಮತ್ತು ತೋರಲಿದೆ? ಇದೇ ವರ್ಷ ನಡೆಯುವ ಟಿ20 ವಿಶ್ವಕಪ್‌ ಭಾರತದ ಮುಡಿಗೇರುವುದೇ? ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಎತ್ತಬಹುದೇ? ಹೀಗೆ ಹತ್ತಾರು ಕನಸುಗಳ ಸುತ್ತ ಚರ್ಚೆ ಗರಿಗೆದರಿದೆ. ನವನವೀನ ದಾಖಲೆಗಳು, ಹಳೆಯ ಸಾಧನೆಗಳನ್ನು ಮುರಿಯುವ ಘಟಾನುಘಟಿಗಳ ಸುತ್ತ ಒಂದು ಚುಟುಕು ನೋಟ

ಹವಾಮಾನ ಮತ್ತು ಕ್ರಿಕೆಟ್

ಹವಾಗುಣದ ಸ್ಥಿತಿ–ಗತಿಯೊಂದಿಗೆ ಕ್ರಿಕೆಟ್‌ನ ವೇಳಾಪಟ್ಟಿಯೂ ಬದಲಾಗುತ್ತದೆ. ಬಹುಶಃ ಇಡೀ ವಿಶ್ವದಲ್ಲಿ ಹವಾಮಾನದ ಮೇಲೆ ಅವಲಂಬಿತವಾಗಿರುವ ಕ್ರೀಡೆಗಳಲ್ಲಿ ಕ್ರಿಕೆಟ್‌ಗೇ ಮೊದಲ ಸ್ಥಾನ  ಇರಬೇಕು. ಮಳೆ, ಮಂದಬೆಳಕು, ವಾಯುಮಾಲಿನ್ಯಗಳಿಂದಾಗಿ ಎಷ್ಟೊಂದು ಪಂದ್ಯಗಳು ರದ್ದಾಗಿವೆ. ಅರ್ಧಂಬರ್ಧವಾಗಿವೆ. ಇದೀಗ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿನಿಂದ ಉಂಟಾಗಿರುವ ಹೊಗೆಯ ಪರಿಣಾಮ ನ್ಯೂಜಿಲೆಂಡ್‌ ಎದುರಿನ ಟೆಸ್ಟ್ ಪಂದ್ಯವೂ ಅಸ್ತವ್ಯಸ್ಥವಾಗುವ ಸಾಧ್ಯತೆ ಇದೆ.  ಇತ್ತೀಚೆಗೆ ದೆಹಲಿಯಲ್ಲಿ ಹೊಂಜಿನಿಂದಾಗಿ ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯವನ್ನು ಸ್ಥಳಾಂತರಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೂ ದೆಹಲಿಯಲ್ಲಿ ಪಂದ್ಯ ನಡೆದಿತ್ತು. ವರ್ಷದಿಂದ ವರ್ಷಕ್ಕೆ ಹವಾಮಾನ ವೈಪರಿತ್ಯಗಳು ಹೆಚ್ಚುತ್ತಲೇ ಇವೆ. ಇದರಿಂದಾಗಿ ಕ್ರಿಕೆಟ್‌ನ ಆರ್ಥಿಕ ಗಳಿಕೆಗೆ ಪೆಟ್ಟು ಬೀಳುತ್ತಿದೆ. ಹೀಗಾಗಿ  ಮುಂದಿನ ದಿನಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಪರಿಹಾರ ಸೂತ್ರ ಕಂಡುಹಿಡಿಯಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತ ಗಂಭೀರ ಚಿಂತನೆಗೆ ಹೊಸ ವರ್ಷವು ವೇದಿಕೆಯಾಗುವ ಸಾಧ್ಯತೆ ಇದೆ.

ರಣಜಿ ಕಿರೀಟದ ಕನಸು

ಈ ವರ್ಷದ ರಣಜಿ ಋತುವಿನ ಮೊದಲ ಪಂದ್ಯದಲ್ಲಿಯೇ ಬದ್ಧ ಎದುರಾಳಿ ತಮಿಳುನಾಡು ತಂಡದ ಎದುರು ರೋಚಕ ಜಯ ಸಾಧಿಸಿರುವ ಕರ್ನಾಟಕ ಪ್ರಶಸ್ತಿ ಜಯದ ಕನಸಿಗೆ ಮುನ್ನುಡಿ ಬರೆದಿದೆ. ನಿಗದಿಯ ಓವರ್‌ಗಳ ಎರಡೂ ಮಾದರಿಯಲ್ಲಿ ಚಾಂಪಿಯನ್ ಆಗಿರುವ ರಾಜ್ಯ ತಂಡವು ರಣಜಿ ಟ್ರೋಫಿ ಗೆದ್ದರೆ ಹ್ಯಾಟ್ರಿಕ್ ಸಾಧನೆಯಾಗುತ್ತದೆ.   ವಿನಯಕುಮಾರ್ ನಾಯಕತ್ವದ ತಂಡವು ಏಳು ವರ್ಷಗಳ ಹಿಂದೆ ‘ಡಬಲ್ ಟ್ರಿಪಲ್’ ಸಾಧನೆ ಮಾಡಿತ್ತು. ಇದೀಗ ಕರುಣ್ ನಾಯರ್ ನಾಯಕತ್ವದ ತಂಡಕ್ಕೆ ಸುವರ್ಣಾವಕಾಶವಿದೆ. ಮಯಂಕ್ ಅಗರವಾಲ್, ಮನೀಷ್ ಪಾಂಡೆ, ಕೆ.ಎಲ್. ರಾಹುಲ್, ಪ್ರಸಿದ್ಧ ಕೃಷ್ಣ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಉತ್ತಮವಾಗಿ ಆಡುತ್ತಿರುವುದು ಆಶಾದಾಯಕ. ಒಂಬತ್ತನೇ ರಣಜಿ ಕಿರೀಟ ಜಯಿಸುವ ಸಾಮರ್ಥ್ಯ ಈ ತಂಡಕ್ಕೆ ಇದೆ.

ಬೆಂಗಳೂರಿನಲ್ಲಿ ಪಿಂಕ್ ಬಾಲ್?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆ ಇದೆ.  ಈಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪಿಂಕ್‌ ಬಾಲ್ ಟೆಸ್ಟ್‌ಗೆ ಆಯ್ಕೆ ಮಾಡಿರುವ ನಾಲ್ಕು ತಾಣಗಳಲ್ಲಿ ಬೆಂಗಳೂರು ಕೂಡ ಒಂದು. ಆದರೆ, ಈ ವರ್ಷ ಭಾರತವು ತವರಿನಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ. ಆದ್ದರಿಂದ ವೇಳಾಪಟ್ಟಿ ಇನ್ನೂ ಸ್ಪಷ್ಟವಾಗಿಲ್ಲ.
ಎನ್‌ಸಿಎಗೆ ಹೊಸ ರೂಪ–ರಂಗು

ಕೆಲವು ವಿವಾದಗಳಿಗೆ ಗುರಿಯಾಗಿರುವ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಹೊಸ ರೂಪ ನೀಡಲು ಅದರ ಮುಖಸ್ಯ ರಾಹುಲ್ ದ್ರಾವಿಡ್ ಮತ್ತು ಸೌರವ್‌ ಗಂಗೂಲಿ ಜೊತೆಯಾಟ ಆರಂಭಿಸಿದ್ದಾರೆ.  ಆದ್ದರಿಂದ ದೇವನಹಳ್ಳಿ ಸಮೀಪದಲ್ಲಿ ಮಂಜೂರಾಗಿರುವ ಜಮೀನಿನಲ್ಲಿ ಎನ್‌ಸಿಎ ನೂತನ ಸೌಧದ ನಿರ್ಮಾಣ ಕಾರ್ಯಾ ಶೀಘ್ರ ಆರಂಭ ಆಗುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಸದ್ಯ ಇರುವ ಅಕಾಡೆಮಿಯಲ್ಲಿ ಆಡಳಿತಾತ್ಮಕ ಸುಧಾರಣೆಗೂ ಈ ಜೋಡಿ ಕೈಹಾಕಿದೆ.

ಸೂಪರ್ ಸೀರಿಸ್ ನಡೆಯುವುದೇ?

ಬಿಗ್‌ ತ್ರೀ ತಂಡಗಳಾದ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ನಾಲ್ಕು ದೇಶಗಳ  ಏಕದಿನ ಸೂಪರ್ ಸೀರಿಸ್ ಟೂರ್ನಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸೌರವ್ ಗಂಗೂಲಿ ಈಚೆಗೆ ಈ ಕುರಿತು ಪ್ರಸ್ತಾವ ನೀಡಿದ್ದರು.ಇಂಗ್ಲೆಂಡ್, ಆಸ್ಟ್ರೇಲಿಯಾ ಒಲವು ವ್ಯಕ್ತಪಡಿಸಿವೆ. ಯಥಾಪ್ರಕಾರ ಪಾಕಿಸ್ತಾನ ವಿರೋಧಿಸಿದೆ. ಪರ–ವಿರೋಧಗಳ ಚರ್ಚೆಯ ನಂತರ ಶೀಘ್ರದಲ್ಲಿಯೇ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಇದರಲ್ಲಿ ಆಡುವ ನಾಲ್ಕನೇ ದೇಶ ಯಾವುದೆಂದು ಕೂಡ ತಿಳಿದುಬರಲಿದೆ.

ಮುಂದುವರಿಯುವರೇ ಗಂಗೂಲಿ?

‘ಕೂಲಿಂಗ್ ಆಫ್‌’ ನಿಯಮದ ಪ್ರಕಾರ ಸೌರವ್ ಗಂಗೂಲಿ ಅವರ ಅವಧಿಯು ಈ ವರ್ಷದ ಆಗಸ್ಟ್‌ನಲ್ಲಿ ಅಂತ್ಯಗೊಳ್ಳಲಿದೆ. ಆದರೆ ಈಚೆಗೆ ಬಿಸಿಸಿಐ ಎಜಿಎಂನಲ್ಲಿ  ನಿರ್ಧರಿಸಿದಂತೆ ನಿಯಮಾವಳಿಯ ತಿದ್ದುಪಡಿಗೆ ಅನುಮತಿ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಒಂದೊಮ್ಮೆ ಸುಪ್ರೀಂ ಅಸ್ತು ಎಂದರೆ, ಗಂಗೂಲಿ ಮುಂದಿನ ಮೂರು ವರ್ಷಗಳಿಗೂ ಹೆಚ್ಚು ಅವಧಿಯವರೆಗೆ ಅಧ್ಯಕ್ಷರಾಗಿರುವುದು ಖಚಿತ!

ಮಹೇಂದ್ರಸಿಂಗ್ ಧೋನಿ ಮರುಪ್ರವೇಶ?

ತಮ್ಮ ನಿವೃತ್ತಿ ಅಥವಾ ಕ್ರಿಕೆಟ್‌ ಅಂಗಳದ ಮರುಪ್ರವೇಶದ ಬಗ್ಗೆ ಮಹೇಂದ್ರಸಿಂಗ್ ಧೋನಿ ಜನವರಿಯಲ್ಲಿ ಹೇಳುವುದಾಗಿ ಪ್ರಕಟಿಸಿದ್ದರು. ಆದರೆ ಸದ್ಯದವರೆಗೂ ಅವರಿಂದ ಮತ್ತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಹುಶಃ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ಅವರು ಮರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಎದುರಿನ ಚುಟುಕು ಸರಣಿಗೆ ಅವರು ಮರಳುವ ನಿರೀಕ್ಷೆ ಇತ್ತು. ಆದರೆ ಅವರು ತಂಡದಲ್ಲಿಲ್ಲ. ಈ ಸರಣಿಯಲ್ಲಿ ರಿಷಭ್ ಪಂತ್ ಅವರು ಆಟಕ್ಕೆ ಕುದುರಿಕೊಳ್ಳದಿದ್ದರೆ ಮುಂದಿನ ಸರಣಿಯಲ್ಲಿ ಧೋನಿ ಮರಳಬಹುದು ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಕಾದು ನೋಡಬೇಕಷ್ಟೇ.

ಪಾಕ್‌ನಲ್ಲಿ ಆಡುವುದೇ ಭಾರತ?

ಈ ಬಾರಿ ಪಾಕಿಸ್ತಾನವು ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತ ಆಡುವುದು ಅನುಮಾನ.  ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಚೆನ್ನಾಗಿಲ್ಲದ ಕಾರಣ ದ್ವಿಪಕ್ಷೀಯ ಸರಣಿಗಳು ನಿಂತು ಹೋಗಿ ವರ್ಷಗಳೇ ಕಳೆದಿವೆ.  ಒಂದೊಮ್ಮೆ ಈ ಟೂರ್ನಿಯನ್ನು ಪಾಕಿಸ್ತಾನವು ತಟಸ್ಥ ತಾಣದಲ್ಲಿ ಆಯೋಜಿಸಿದರೆ ಭಾರತವು ಕಣಕ್ಕಿಳಿಯುವ ಸಾಧ್ಯತೆ ಇದೆ. ಜುಲೈ– ಆಗಸ್ಟ್‌ನಲ್ಲಿ ಈ ಟೂರ್ನಿ ನಡೆಯಲಿದೆ. ಭಾರತದ ನಿರ್ಧಾರದತ್ತ ಕುತೂಹಲದ ಕಣ್ಣುಗಳು ನೆಟ್ಟಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು