ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ 17ರಿಂದ ಟಿ20 ವಿಶ್ವಕಪ್‌: ಐಸಿಸಿ ಪ್ರಕಟಣೆ

Last Updated 29 ಜೂನ್ 2021, 11:31 IST
ಅಕ್ಷರ ಗಾತ್ರ

ದುಬೈ: ಈ ವರ್ಷದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳು ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ನಡೆಯಲಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ.

ಭಾರತದಲ್ಲಿ ನಡೆಸಲು ಉದ್ದೇಶಿಸಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಕೋವಿಡ್‌–19 ಕಾರಣಗಳಿಂದಾಗಿ ಯುಎಇ ಮತ್ತು ಒಮಾನ್‌ಗೆ ಸ್ಥಳಾಂತರಿಸಲಾಗಿದೆ. 'ಟೂರ್ನಿಯನ್ನು ಭಾರತದಿಂದ ಸ್ಥಳಾಂತರಿಸಬಹುದು' ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸೋಮವಾರ ಐಸಿಸಿಗೆ ತಿಳಿಸಿತ್ತು.

'ಬಿಸಿಸಿಐ ಟೂರ್ನಿಯ ಆಯೋಜನೆ ಮುಂದುವರಿಸಲಿದ್ದು, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್‌ ಝಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಹಾಗೂ ಒಮಾನ್‌ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ 2021ರ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೂ ಟಿ20 ವಿಶ್ವಕಪ್‌ ಕ್ರಿಕೆಟ್‌ ನಡೆಯಲಿದೆ' ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಹತೆಗಾಗಿ ಎಂಟು ತಂಡಗಳು ಟೂರ್ನಿಯ ಮೊದಲ ಸುತ್ತಿನಲ್ಲಿ ಸೆಣಸಲಿವೆ. ಒಮಾನ್‌ ಮತ್ತು ಯುಎಇ ಎರಡೂ ಕಡೆ ಆರಂಭಿಕ ಸುತ್ತಿನ ಪಂದ್ಯಗಳು ನಡೆಯಲಿವೆ. ಎಂಟು ತಂಡಗಳ ಪೈಕಿ ನಾಲ್ಕು ತಂಡಗಳು 'ಸೂಪರ್‌ 12' ಸುತ್ತಿಗೆ ಅರ್ಹತೆ ಪಡೆಯುತ್ತವೆ, ಆ ತಂಡಗಳು ಈಗಾಗಲೇ ಅರ್ಹತೆ ಗಳಿಸಿರುವ 8 ತಂಡಗಳೊಂದಿಗೆ ಸೇರಲಿವೆ. ನವೆಂಬರ್‌ 14ರಂದು ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿದೆ.

ಭಾರತದಲ್ಲಿ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ಮುಂದೂಡಿರುವ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ.

ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೆಣಸಲಿರುವ ಎಂಟು ತಂಡಗಳು:

1. ಬಾಂಗ್ಲಾದೇಶ
2. ಶ್ರೀಲಂಕಾ
3. ಐರ್ಲೆಂಡ್‌
4. ನೆದರ್ಲೆಂಡ್‌
5. ಸ್ಕಾಟ್‌ಲೆಂಡ್‌
6. ನಮೀಬಿಯಾ
7. ಒಮಾನ್‌
8. ಪಪುವಾ ನ್ಯೂ ಗ್ಯುನಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT