ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್ ಟಿಕೆಟ್‌ಗಳಿಗೆ ಡಿಮ್ಯಾಂಡ್: ಕಾಳಸಂತೆಕೋರರಿಗೆ ಸುಗ್ಗಿ

Last Updated 19 ಜೂನ್ 2022, 12:28 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಪಂದ್ಯದ ಟಿಕೆಟ್‌ಗಳಿಗೆ ಈಗ ಶುಕ್ರದೆಸೆ. ಕಾಳಸಂತೆಕೋರರಿಗೆ ಸುಗ್ಗಿ. ಕಡಿಮೆ ಮುಖಬೆಲೆಯ ಟಿಕೆಟ್‌ಗಳು ಮೂರ್ನಾಲ್ಕು ಪಟ್ಟು ಬೆಲೆಗೆ ಬಿಕರಿಯಾಗಿವೆ.

ವಾರದ ರಜೆ ದಿನವಾದ ಭಾನುವಾರ ರಾತ್ರಿ ನಡೆಯಲಿರುವುದರಿಂದ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಕುದುರಿದೆ. ವಿಶೇಷವಾಗಿ ₹ 750 ಮತ್ತು ₹ 2000 ಬೆಲೆಯ ಟಿಕೆಟ್‌ಗಳು ನಾಲ್ಕರಿಂದ ಐದು ಸಾವಿರದವರೆಗೆ ಬಿಕರಿಯಾಗಿವೆ. ಐದು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿ ಇದಾಗಿದೆ. ಸರಣಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿವೆ. ಅಲ್ಲದೇ ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿರುವುದರಿಂದ ಜನಾಕರ್ಷಣೆ ಅಪಾರವಾಗಿದೆ.

‘ನಾವು ಮೂರು ಮಂದಿ ಸ್ನೇಹಿತರು ನಿನ್ನೆ (ಶನಿವಾರ) ಬೆಳಿಗ್ಗೆಯೇ 750ರ ಟಿಕೆಟ್‌ಗಳನ್ನು ತಲಾ ₹ 2500ರಂತೆಎ ಕೊಂಡುಕೊಂಡಿದ್ದೇವೆ. ಈಗ ಮತ್ತೊಬ್ಬರು ಬರುವುದಾಗಿ ಹೇಳಿರುವುದರಿಂದ ವಿಚಾರಿಸಿದರೆ ಅದೇ ಮುಖಬೆಲೆ ಟಿಕೆಟ್‌ ನಾಲ್ಕು ಸಾವಿರವೆಂದು ಹೇಳುತ್ತಿದ್ದಾರೆ. ಕಬ್ಬನ್‌ ಪಾರ್ಕ್‌ನೊಳಗೆ, ಮೆಟ್ರೊ ನಿಲ್ದಾಣದ ಹಿಂಭಾಗಗಳಲ್ಲಿ ಕೆಲವರು ಬ್ಲ್ಯಾಕ್‌ನಲ್ಲಿ ಮಾರುತ್ತಿದ್ದಾರೆ. ಕೊಳ್ಳುವವರೂ ಮುಗಿಬೀಳುತ್ತಿದ್ದಾರೆ’ ಎಂದು ಟಿಕೆಟ್‌ ಖರೀದಿಗಾಗಿ ಎಡತಾಕುತ್ತಿದ್ದ ಪ್ರವೀಣ್ ಹೇಳಿದರು.

ಪಂದ್ಯ ಶುರುವಾಗುವ ಅರ್ಧಗಂಟೆ ಮೊದಲಿಗೆ ಕೈಗೆ ಬಂದ ಬೆಲೆಗೆ ಕೊಟ್ಟುಹೋಗುತ್ತಾರೆಂಬ ನಿರೀಕ್ಷೆಯಲ್ಲಿಯೂ ಕೆಲವರು ಕಾಯುತ್ತಿದ್ದ ದೃಶ್ಯಗಳು ಮೈದಾನದ ಸುತ್ತಮುತ್ತ ಕಂಡುಬಂದವು.

ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿಯು ಜನಜಂಗುಳಿಯನ್ನು ನಿಯಂತ್ರಿಸಲು, ಗೇಟ್‌ಗಳ ಮಾಹಿತಿ ನೀಡುವಲ್ಲಿ ನಿರತರಾಗಿದ್ದರು.

‘ಕಳ್ಳ ಸಂತೆಯಲ್ಲಿ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ಇಲ್ಲ. ಮೈದಾನ ಸುತ್ತಮುತ್ತ ನಿಗಾ ವಹಿಸಿ, ಟಿಕೆಟ್ ಮಾರುವವರನ್ನು ಪತ್ತೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಈಚೆಗೆ ಐಪಿಎಲ್‌ನಲ್ಲಿ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಅವರ ಆಟ ನೋಡಲು ಬಹಳಷ್ಟು ಜನರು ಮೈದಾನಕ್ಕೆ ಧಾವಿಸುತ್ತಿದ್ದಾರೆ. ಅವರು ಆರ್‌ಸಿಬಿ ಸೇರ್ಪಡೆಯಾದ ನಂತರ ಬೆಂಗಳೂರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

2019ರ ನಂತರ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿಲ್ಲ. ಕಳೆದ ಮಾರ್ಚ್‌ನಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT