ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಈಗಲೂ ಭಾರತದ ಸೆಮಿಫೈನಲ್ ಪ್ರವೇಶ ಸಾಧ್ಯ; ಹೇಗೆ ಗೊತ್ತಾ?

Last Updated 1 ನವೆಂಬರ್ 2021, 11:52 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡನೇ ಸೋಲಿನ ಮುಖಭಂಗಕ್ಕೊಳಗಾಗಿರುವ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಕಠಿಣವೆನಿಸಿದೆ.

ಪಾಕಿಸ್ತಾನ ವಿರುದ್ಧ 10 ವಿಕೆಟ್ ಅಂತರದ ಸೋಲು ಅನುಭವಿಸಿದ್ದ ವಿರಾಟ್ ಕೊಹ್ಲಿ ಬಳಗವು ನ್ಯೂಜಿಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.

ಇದರೊಂದಿಗೆ ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಿದೆ. ಹಾಗಿದ್ದರೂ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಭಾರತ ತಂಡವು ಈಗಲೂ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಯಿದೆ.

ಮುಂದಿನ ಎಲ್ಲ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಅನಿವಾರ್ಯವೆನಿಸಿದೆ. ಭಾರತ ತಂಡವು ನವೆಂಬರ್ 3ರಂದು ಅಫ್ಗಾನಿಸ್ತಾನ, ನ. 5ರಂದು ಸ್ಕಾಟ್ಲೆಂಡ್ ಹಾಗೂ ನ.8ರಂದು ನಮೀಬಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಈ ಮೂರು ಪಂದ್ಯಗಳನ್ನು ಗೆದ್ದರೆ ಒಟ್ಟು ಆರು ಅಂಕಗಳನ್ನಷ್ಟೇ ಸಂಪಾದಿಸಲಿದೆ. ಹಾಗಾಗಿ ಭಾರತದ ಸೆಮಿಫೈನಲ್ ಪ್ರವೇಶವು ಇತರೆ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಅಂದರೆ ನ್ಯೂಜಿಲೆಂಡ್ ಹಾಗೂ ಅಫ್ಗಾನಿಸ್ತಾನ ತಂಡಗಳು ಉಳಿದಿರುವ ಪಂದ್ಯಗಳ ಪೈಕಿ ಕನಿಷ್ಠಒಂದರಲ್ಲಿ ಸೋಲಬೇಕಿದೆ. ಹಾಗಾಗಿ ಈ ಎರಡು ತಂಡಗಳ ಗರಿಷ್ಠ ಅಂಕ ಆರಕ್ಕೆ ಸೀಮಿತಗೊಳ್ಳಬೇಕಿದೆ. ಅಲ್ಲದೆ ಇವೆರಡು ತಂಡಕ್ಕಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ.

ನ್ಯೂಜಿಲೆಂಡ್ ಉಳಿದಿರುವ ಮೂರು ಪಂದ್ಯಗಳಲ್ಲಿ ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ ಆಡಲಿದೆ. ಅತ್ತ ಅಫ್ಗಾನಿಸ್ತಾನಕ್ಕೆ ಕಿವೀಸ್ ಹೊರತಾಗಿ ಭಾರತದ ವಿರುದ್ಧದ ಪಂದ್ಯ ಬಾಕಿ ಉಳಿದಿದೆ.

ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಗೆಲುವು ದಾಖಲಿಸಿದರೂ ಭಾರತಕ್ಕೆ ಅಫ್ಗನ್ ವಿರುದ್ಧ ಬೃಹತ್ ಗೆಲುವು ಅನಿವಾರ್ಯವೆನಿಸುತ್ತದೆ. ಹಾಗೊಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ ಸೋತರೂ ಕ್ರಿಕೆಟ್‌ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸ್ಕಾಟ್ಲೆಂಡ್ ಅಥವಾ ನಮೀಬಿಯಾ ತಂಡಗಳು ಕಿವೀಸ್ ತಂಡವನ್ನು ಮಣಿಸಿದ್ದಲ್ಲಿ ಭಾರತಕ್ಕೆ ಅವಕಾಶ ದಟ್ಟವಾಗಲಿದೆ. ಈ ಸಂದರ್ಭದಲ್ಲೂ ಕಿವೀಸ್‌ಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ.

ಸದ್ಯ ಭಾರತ -1.609, ಅಫ್ಗಾನಿಸ್ತಾನ +3.097 ಹಾಗೂ ನ್ಯೂಜಿಲೆಂಡ್ +0.765 ನೆಟ್ ರೇನ್‌ರೇಟ್ ಕಾಯ್ಡುಕೊಂಡಿದೆ. ಹಾಗಾಗಿ ಭಾರತದ ಸೆಮಿಫೈನಲ್ ಕನಸು ನನಸಾಗಲು ಪವಾಡವೇ ನಡೆಯಬೇಕಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT