ಬ್ರಾವೊಗೆ ವಿದಾಯ; ವಿಕೆಟ್ ಪಡೆದ ಖುಷಿಯಲ್ಲಿ ಮಾರ್ಶ್‌ರನ್ನು ತಬ್ಬಿಕೊಂಡ ಗೇಲ್

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯವು ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು.
ಡೇವಿಡ್ ವಾರ್ನರ್ (89*) ಹಾಗೂ ಮಿಚೆಲ್ ಮಾರ್ಶ್ (53) ಬಿರುಸಿನ ಅರ್ಧಶತಕದ ಬೆಂಬಲದೊಂದಿಗೆ ಆಸೀಸ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.
ಇದನ್ನೂ ಓದಿ: T20 WC: ವಾರ್ನರ್-ಮಾರ್ಶ್ ಅಬ್ಬರ; ವಿಂಡೀಸ್ ವಿರುದ್ಧ ಆಸೀಸ್ಗೆ ಗೆಲುವು
ಸೋಲಿನ ಹೊರತಾಗಿಯೂ ವಿಂಡೀಸ್ ಪಾಲಿಗೂ ಈ ಪಂದ್ಯ ಸ್ಮರಣೀಯವೆನಿಸಿತ್ತು. ಡ್ವೇನ್ ಬ್ರಾವೊ ಸೋಲಿನೊಂದಿಗೆ ವಿದಾಯವನ್ನು ಹಾಡಿದ್ದಾರೆ. 42 ವರ್ಷದ ಕ್ರಿಸ್ ಗೇಲ್ ಸಹ ವಿಂಡೀಸ್ ಸಮವಸ್ತ್ರದಲ್ಲಿ ಕೊನೆಯ ಪಂದ್ಯವನ್ನು ಆಡಿದ್ದಾರೆ ಎಂದೇ ಅಂದಾಜಿಸಲಾಗಿದೆ.
ಇವೆಲ್ಲವೂ ಅವಿಸ್ಮರಣೀಯ ಕ್ಷಣಗಳಿಗೆ ಎಡೆಮಾಡಿಕೊಟ್ಟಿತ್ತು. ಡ್ವೇನ್ ಬ್ರಾವೊ ಹಾಗೂ ಕ್ರಿಸ್ ಗೇಲ್ ಅವರನ್ನು ಆಸೀಸ್ ಆಟಗಾರರು ಗೌರವಿಸಿದರು. ಈ ಮೂಲಕ ಕ್ರೀಡಾಸ್ಪೂರ್ತಿಯನ್ನು ಮೆರೆದರು.
ಬ್ಯಾಟಿಂಗ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ಅಂತಿಮ ಹಂತದಲ್ಲಿ ಬೌಲಿಂಗ್ ಮಾಡಿ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಅಲ್ಲದೆ ವಿಕೆಟ್ ಪಡೆದ ಖುಷಿಯಲ್ಲಿ ಓಡೋಡಿ ಹೋಗಿ ಬ್ಯಾಟರ್ ಮಿಚೆಲ್ ಮಾರ್ಶ್ ಅವರನ್ನು ತಬ್ಬಿಕೊಂಡರು.
ಇದಕ್ಕೂ ಮೊದಲು ಔಟ್ ಆಗಿ ಪೆವಿಲಿಯನ್‌ಗೆ ಹಿಂತಿರುಗಿದ ಗೇಲ್, ಸಹಿ ಹಾಕಿದ ಗ್ಲೋವ್ ಅನ್ನು ಅಭಿಮಾನಿಗಳಿಗೆ ನೀಡುವ ಮೂಲಕ ಗಮನ ಸೆಳೆದರು.
ಇದನ್ನೂ ಓದಿ: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕ್ರಿಸ್ ಗೇಲ್ ವಿದಾಯ?
ಗೇಲ್, ಬ್ರಾವೊ ಅವರ ಜೊತೆಗಿನ ವಿಂಡೀಸ್ ಆಟಗಾರರ ಒಡನಾಟವು ಮತ್ತಷ್ಟು ಮುದವನ್ನು ನೀಡಿತು. ಇದರೊಂದಿಗೆ 2012 ಹಾಗೂ 2016 ಟ್ವೆಂಟಿ-20 ವಿಶ್ವಕಪ್ ಗೆದ್ದ ವಿಂಡೀಸ್‌ನ ದಿಗ್ಗಜ ಆಟಗಾರರ ಸುವರ್ಣ ಅಧ್ಯಾಯಕ್ಕೆ ತರೆ ಬಿದ್ದಂತಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.