ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ನನ್ನ ಸಹೋದರ; ವೃತ್ತಿಜೀವನದ ದೊಡ್ಡ ಜವಾಬ್ದಾರಿ ನನ್ನ ಹೆಗಲ ಮೇಲಿದೆ: ಪಾಂಡ್ಯ

Last Updated 18 ಅಕ್ಟೋಬರ್ 2021, 12:50 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫಿನಿಶರ್ ಆಗಿ ವೃತ್ತಿಜೀವನದ ಅತ್ಯಂತ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಎಂದು ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಅಲ್ಲದೆ ಜೀವನ ತರಬೇತುದಾರ ಹಾಗೂ ಸಹೋದರ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಎಲ್ಲವೂ ತಮ್ಮ ಹೆಗಲ ಮೇಲಿದೆ ಎಂದು ತಿಳಿಸಿದ್ದಾರೆ.

'ಇಎಸ್‌ಪಿಎನ್ ಕ್ರಿಕ್‌ಇನ್ಫೋ'ಗೆ ನೀಡಿದ ಸಂದರ್ಶನದಲ್ಲಿ 28ರ ಹರೆಯದ ಹಾರ್ದಿಕ್ ಪ್ರತಿಕ್ರಿಯಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ವೃತ್ತಿ ಜೀವನದ ಬಳಿಕ ಭಾರತ ಭಾಗವಹಿಸುತ್ತಿರುವ ಮೊದಲ ವಿಶ್ವಕಪ್ ಇದಾಗಿದೆ. ಆದರೂ ಧೋನಿ ಸಾನಿಧ್ಯ ಕಂಡುಬರಲಿದ್ದು, ಮಾರ್ಗದರ್ಶಕರಾಗಿ ನೆರವಾಗಲಿದ್ದಾರೆ.

'ಈ ವರೆಗಿನ ಅತಿ ದೊಡ್ಡ ಜವಾಬ್ದಾರಿ ಎಂದು ಹೇಳಬಯಸುತ್ತೇನೆ. ಏಕೆಂದರೆ ಈ ಸಲ ಧೋನಿ ಇಲ್ಲ. ಎಲ್ಲವೂ ನನ್ನ ಹೆಗಲ ಮೇಲಿದೆ. ನಾನು ಆ ರೀತಿಯಾಗಿ ಯೋಚಿಸಲು ಇಷ್ಟಪಡುತ್ತೇನೆ. ಏಕೆಂದರೆ ಇದರಿಂದ ನನಗೆ ಹೆಚ್ಚುವರಿ ಸವಾಲು ಎದುರಾಗುತ್ತದೆ. ಈ ಬಗ್ಗೆ ಉತ್ಸಾಹಿತನಾಗಿದ್ದೇನೆ' ಎಂದು ಪಾಂಡ್ಯ ತಿಳಿಸಿದ್ದಾರೆ.

'ಎಂಎಸ್ ಮೊದಲಿನಿಂದಲೂ ನನ್ನನ್ನು ಅರ್ಥಮಾಡಿಕೊಂಡಿದ್ದಾರೆ. ನಾನು ಹೇಗೆ ಕೆಲಸ ಮಾಡುತ್ತೇನೆ. ನಾನು ಯಾವ ರೀತಿಯ ವ್ಯಕ್ತಿ, ನನಗೆ ಇಷ್ಟವಿಲ್ಲದ ವಿಷಯಗಳು, ಎಲ್ಲವೂ ಅವರಿಗೆ ತಿಳಿದಿದೆ' ಎಂದು ಹೇಳಿದರು.

2019ರಲ್ಲಿ ವಿವಾದಾತ್ಮಕ ಹೇಳಿಕೆ ಸಂಬಂಧ ನಿಷೇಧ ಶಿಕ್ಷೆಯನ್ನು ಎದುರಿಸಿದ ಬಳಿಕ ಧೋನಿ ಹೇಗೆ ತಮ್ಮನ್ನು ಬೆಂಬಲಿಸಿದ್ದರು ಎಂಬುದನ್ನು ಪಾಂಡ್ಯ ನೆನಪಿಸಿದರು.

'ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನನಗೆ ಯಾವುದೇ ಹೋಟೆಲ್ ಕೊಠಡಿಗಳಿರಲಿಲ್ಲ. ನಂತರ ಒಂದು ಕರೆ ಬಂತು. 'ನೀವು ಈಗಲೇ ಬನ್ನಿ, ಧೋನಿ ಹೇಳಿದರು'. ಧೋನಿ ನನ್ನ ಬೆಂಬಲಕ್ಕಿರುವ ಮೊದಲ ವ್ಯಕ್ತಿ. ನಾನು ಯಾವ ರೀತಿಯ ವ್ಯಕ್ತಿ ಎಂಬುದು ಅವರಿಗೆ ಗೊತ್ತಿದೆ. ನನ್ನನ್ನು ಗಾಢವಾಗಿ ಅರ್ಥಮಾಡಿಕೊಂಡಿದ್ದಾರೆ. ನಾನು ಅವರಿಗೆ ತುಂಬಾ ಹತ್ತಿರವಾಗಿದ್ದೇನೆ. ನನ್ನನ್ನು ನಿಯಂತ್ರಿಸಬಹುದಾದ ಏಕಮಾತ್ರ ವ್ಯಕ್ತಿ ಅವರಾಗಿದ್ದಾರೆ' ಎಂದರು.

'ಈ ಎಲ್ಲ ವಿವಾದಗಳು ಸಂಭವಿಸಿದಾಗ, ನನ್ನ ಹೆಗಲ ಮೇಲೆ ಕೈಯಿಟ್ಟು ಧೈರ್ಯ ತುಂಬುವ ವ್ಯಕ್ತಿಯ ಅಗತ್ಯವಿದೆ ಎಂಬುದು ಅವರಿಗೆ ತಿಳಿದಿತ್ತು. ನನ್ನ ಕ್ರಿಕೆಟ್ ಜೀವನದಲ್ಲಿ ಅನೇಕ ಬಾರಿ ನೆರವಾಗಿದ್ದಾರೆ. ನಾನು ಎಂದಿಗೂ ಮಹಿ ಅವರನ್ನು ಮಹಾನ್ ಆಗಿಕಂಡಿಲ್ಲ. ಅವರು ನನ್ನ ಪಾಲಿಗೆ ಸಹೋದರ' ಎಂದು ಪ್ರತಿಪಾದಿಸಿದರು.

ಅದೇ ರೀತಿ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಿದಾಗ ಧೋನಿ ನೆರವಾಗುತ್ತಾರೆ ಎಂದು ತಿಳಿಸಿದ್ದಾರೆ. 'ನನ್ನ ಪಾಲಿಗೆ ಧೋನಿ 'ಜೀವನ ತರಬೇತುದಾರ'. ನಿಸ್ಸಂಶಯವಾಗಿಯೂ ಧೋನಿ ಜೊತೆಗೆ ಇರುವುದರಿಂದ ಪ್ರಬುದ್ಧರಾಗಲು, ವಿನಯವಂತರಾಗಿ ಇರಲು ಕಲಿಯುತ್ತೀರಿ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT