ಶುಕ್ರವಾರ, ಡಿಸೆಂಬರ್ 3, 2021
27 °C
ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಸೆಡ್ಡು ಹೊಡೆಯುವರೇ ಬಾಬರ್?

T20 WC: ಭಾರತ–ಪಾಕ್ ಮುಖಾಮುಖಿ ಇಂದು, ಭಾರತಕ್ಕೆ ಜಯದ ಪರಂಪರೆ ಮುಂದುವರಿಸುವ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತ ತಂಡಕ್ಕೆ ವಿಶ್ವಕಪ್ ಟೂರ್ನಿಗಳಲ್ಲಿ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವ ಛಲ. ವಿರಾಟ್ ಕೊಹ್ಲಿ ಬಳಗದ ಆಟಕ್ಕೆ ತಡೆಯೊಡ್ಡಿ ಹೊಸ ಇತಿಹಾಸ ನಿರ್ಮಿಸುವ ಕನಸು ಬಾಬರ್ ಆಜಂ ಬಳಗದ್ದು. 

ಭಾನುವಾರ ನಡೆಯಲಿರುವ ಕ್ರಿಕೆಟ್‌ ಜಗತ್ತಿನ ಈ ಬದ್ಧ ಎದುರಾಗಳಿಗಳ ಹಣಾಹಣಿಯನ್ನು ಕಣ್ಮನ ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾದಿದ್ದಾರೆ. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಸಲ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಪಾಕ್ ತಂಡವನ್ನು ಎದುರಿಸುತ್ತಿದೆ. ಈ ಹಿಂದಿನ ಎಲ್ಲ ಟಿ20 ವಿಶ್ವಕಪ್‌ಗಳಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು ಪಾಕ್ ಎದುರು ಜಯಿಸಿತ್ತು. ಅದೇ ಪರಂಪರೆಯನ್ನು ಮುಂದುವರಿಸುವ ಸವಾಲು ವಿರಾಟ್ ಮುಂದಿದೆ.ಈ ಟೂರ್ನಿಯ ನಂತರ ಟಿ20 ತಂಡದ ನಾಯಕತ್ವವನ್ನು ವಿರಾಟ್ ಬಿಟ್ಟುಕೊಡಲಿದ್ದಾರೆ. ಆದ್ದರಿಂದ ಅವರಿಗೆ ಗೆಲುವಿನ ಕಾಣಿಕೆ ಕೊಡುವ ಛಲದಲ್ಲಿ ತಂಡವೂ ಇದೆ.

ಓದಿ: 

ಉಭಯ ದೇಶಗಳ ನಡುವಣ ಹದಗೆಟ್ಟಿರುವ  ರಾಜಕೀಯ ಸಂಬಂಧಗಳಿಂದಾಗಿ ಕ್ರೀಡಾ ತಂಡಗಳು ಮುಖಾಮುಖಿಯಾಗುವುದು ಅಪರೂಪವಾಗಿದೆ.  ಎರಡೂ ತಂಡಗಳ ನಡುವೆ ಹಲವು ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಆದ್ದರಿಂದ ವಿಶ್ವಕಪ್ ವೇದಿಕೆಗಳಲ್ಲಿ  ಮಾತ್ರ ಈ ತಂಡಗಳು ಎದುರುಬದುರಾಗುವುದರಿಂದ ಅಭಿಮಾನಿಗಳ ವಲಯದಲ್ಲಿ ರೋಚಕತೆ ಬಿಸಿಯೇರುತ್ತದೆ.


ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತಕ್ಕೆ ಜಯ ಸಿಗಲೆಂದು ಹಾರೈಸಿ ಬೆಂಗಳೂರಿನಲ್ಲಿ ಅಭಿಮಾನಿಗಳು ಹೋಮ, ಪೂಜೆ ನಡೆಸಿದರು –ಪಿಟಿಐ ಚಿತ್ರ

‘ಎಲ್ಲ ಪಂದ್ಯಗಳಂತೆ ಇದೂ ಒಂದು’ ಎಂದು ವಿರಾಟ್ ಸೇರಿದಂತೆ ಕೆಲವು ಆಟಗಾರರು ಹೇಳಿಕೆ ನೀಡಿದ್ದಾರೆ. ಆದರೂ ಈ ಹಿಂದಿನ ಹಲವು ಮುಖಾಮುಖಿಗಳಲ್ಲಿ ಅನುಭವಿಸಿದ ಸಿಹಿ–ಕಹಿಯ ಘಟನೆಗಳು ಜನರ ವಲಯದಲ್ಲಿ ಹಾಸುಹೊಕ್ಕಾಗಿವೆ. ಅವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ, ಚಿತ್ರಗಳ ರೂಪದಲ್ಲಿ ಹರಿದಾಡುತ್ತಿವೆ.

ಓದಿ: 

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್ ಎದುರು ನಿರಾಶೆ ಅನುಭವಿಸಿದ್ದನ್ನು ವಿರಾಟ್, ರೋಹಿತ್ ಮತ್ತು ಬೂಮ್ರಾ  ಮರೆತಿಲ್ಲ. ಈ ಬಾರಿ ಎರಡೂ ತಂಡಗಳನ್ನು ಹೋಲಿಕೆ ಮಾಡಿದರೆ ಬಹಳಷ್ಟು ವಿಷಯಗಳಲ್ಲಿ ಭಾರತವೇ ಬಲಾಢ್ಯ.


ವಿರಾಟ್ ಕೊಹ್ಲಿ

ಪಾಕ್ ತಂಡದ ನಾಯಕ ಬಾಬರ್ ಆಜಂ ಬ್ಯಾಟಿಂಗ್ ಮತ್ತು ಶಾಂತಚಿತ್ತದ ನಾಯಕತ್ವ ವಹಿಸುವ ಪ್ರತಿಭಾನ್ವಿತರು. ರಿಜ್ವಾನ್, ಹ್ಯಾರಿಸ್ ರವೂಫ್, ಫಕರ್ ಜಮಾನ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಆಟಗಾರರು. ಅಲ್ಲದೇ ಯುಎಇಯು ಪಾಕಿಸ್ತಾನ ತಂಡಕ್ಕೆ ಎರಡನೇ ತವರು. ತಮ್ಮ ದೇಶದ ಆಂತರಿಕ ಅಭದ್ರತೆಯ ಕಾರಣಗಳಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ದುಬೈ, ಅಬುಧಾಬಿಯನ್ನು ತನ್ನ ತಟಸ್ಥ ತಾಣವನ್ನಾಗಿ ಪಾಕ್ ಮಾಡಿಕೊಂಡಿದೆ. ಆದ್ದರಿಂದ ಆ ಅನುಭವವು ತಂಡಕ್ಕೆ ನೆರವಾಗಬಹುದು.

ಆದರೆ ಐಪಿಎಲ್‌ನಲ್ಲಿ ಆಡಿ ಬಂದಿರುವ ವಿರಾಟ್, ರೋಹಿತ್, ಜಡೇಜ, ಆರ್. ಅಶ್ವಿನ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಎದುರಿಸುವುದು ಕಠಿಣ ಸವಾಲು. ರೋಹಿತ್ ಜೊತೆಗೆ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ. ಹಾರ್ದಿಕ್ ಪಾಂಡ್ಯ ಅವರಿಗೆ ಅವಕಾಶ ಸಿಗುವ ಬಗ್ಗೆ ಖಚಿತತೆ ಇಲ್ಲ. ಆದ್ದರಿಂದ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಓದಿ: 

ಒಟ್ಟಿನಲ್ಲಿ ವಾರಾಂತ್ಯ ರಜೆಯ ದಿನದ ರಾತ್ರಿ ರೋಚಕ ಪಂದ್ಯ ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜ, ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್.

ಓದಿ: 

ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಅಲಿಫ್ ಅಲಿ, ಇಮಾದ್ ವಾಸೀಂ, ಶಾದಾಬ್ ಖಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ, ಹೈದರ್ ಅಲಿ.

ಪಂದ್ಯ ಆರಂಭ: ರಾತ್ರಿ 7.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು