ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ನಾಳೆ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಸವಾಲು

ಬಟ್ಲರ್‌ ಬಳಗಕ್ಕೆ ಬೌಲಿಂಗ್ ಸುಧಾರಿಸುವ ಒತ್ತಡ
Published 7 ಜೂನ್ 2024, 13:59 IST
Last Updated 7 ಜೂನ್ 2024, 13:59 IST
ಅಕ್ಷರ ಗಾತ್ರ

ಬ್ರಿಜ್‌ಟೌನ್‌ (ಬಾರ್ಬಡೋಸ್‌): ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು, ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ತಂಡದ ಎದುರು ಶನಿವಾರ ನಡೆಯಲಿರುವ  ‘ಬಿ’ ಗುಂಪಿನ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶನದ ವಿಶ್ವಾಸದೊಡನೆ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಮುಂದುವರಿಸಲಿದೆ.

ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್‌ನ ಮೊದಲ ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಆ ಪಂದ್ಯ ಸ್ಥಗಿತಗೊಳ್ಳುವ ಮೊದಲು ಸ್ಕಾಟ್ಲೆಂಡ್ ತಂಡ 10 ಓವರುಗಳಲ್ಲಿ ವಿಕೆಟ್‌ ಕಳೆದುಕೊಳ್ಳದೇ 90 ರನ್ ಗಳಿಸಿತ್ತು. ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್‌ ದೊರಕಿತ್ತು.

ಇಂಗ್ಲೆಂಡ್‌ ದಾಳಿಯನ್ನು ಸ್ಕಾಟ್ಲೆಂಡ್‌ನ ಆರಂಭ ಆಟಗಾರರು (ಜಾರ್ಜ್‌ ಮುನ್ಸೆ ಮತ್ತು ಮೈಕೆಲ್ ಜೋನ್ಸ್‌) ಆರಾಮವಾಗಿ ಎದುರಿಸಿ ರನ್‌ಗಳನ್ನು ಪೇರಿಸಿದ್ದರು. ಆಸ್ಟ್ರೇಲಿಯಾದ ಬ್ಯಾಟಿಂಗ್‌ ಕ್ರಮಾಂಕ ಇನ್ನಷ್ಟು ಪ್ರಬಲವಾಗಿದೆ. ಒಮಾನ್ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್‌ ಪರಾಕ್ರಮ ಮೆರೆದಿದ್ದರು. ವಾರ್ನರ್‌ ಅವರೂ ಅರ್ಧ ಶತಕ ಗಳಿಸಿದ್ದರು.

ಬೌಲರ್‌ಗಳ ಪೈಕಿ ಪುನರಾಗಮನ ಮಾಡುತ್ತಿರುವ ಜೋಫ್ರಾ ಆರ್ಚರ್ ಮೇಲೆಯೆ ಹೆಚ್ಚಿನ ಅವಲಂಬನೆ ಹೊಂದಿದ್ದು ಅವರು 2 ಓವರುಗಳಲ್ಲಿ 12 ರನ್ ನೀಡಿದ್ದರು.

ಐಪಿಎಲ್‌ನಲ್ಲಿ ಉತ್ತಮ ಸಾಧನೆ ತೋರಿದ್ದ ನಾಯಕ ಜೋಸ್‌ ಬಟ್ಲರ್‌ ಸೇರಿದಂತೆ ಇತರ ಬ್ಯಾಟರ್‌ಗಳು, ಆಸ್ಟ್ರೇಲಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಆಸ್ಟ್ರೇಲಿಯಾ ಬೌಲರ್‌ಗಳು ಒಮಾನ್ ಎದುರು ಉತ್ತಮ ಪ್ರದರ್ಶನ ನೀಡಿದ್ದರು. ಒಮಾನ್ ಎದುರು ಕಮಿನ್ಸ್‌ ಬದಲು ನಥಾನ್ ಎಲಿಸ್ ಆಡಿದ್ದರು. ಆದರೆ ಶನಿವಾರ ಪ್ರಬಲ ಎದುರಾಳಿ ವಿರುದ್ಧ ಆಡುವಾಗ ಕಮಿನ್ಸ್ ತಂಡಕ್ಕೆ ಮರಳುವ ಸಾಧ್ಯತೆಯಿದೆ.

2021ರ ಚಾಂಪಿಯನ್‌ ಆಸ್ಟ್ರೇಲಿಯಾ ಬ್ಯಾಟಿಂಗ್‌ ಪ್ರಬಲವಾಗಿದೆ. ಗ್ಲೆನ್‌ ಮ್ಯಾಕ್ಸ್‌ವೆಲ್ ಒಬ್ಬರೇ ಲಯಕಾಣುತ್ತಿಲ್ಲ. ಒಮಾನ್ ವಿರುದ್ಧವೂ ಅವರು ಸೊನ್ನೆ ಸುತ್ತಿದ್ದರು. ಈಗ ಲಯಕ್ಕೆ ಮರಳಲು ಇಂಗ್ಲೆಂಡ್ ಪಂದ್ಯ ಮತ್ತೊಂದು ಅವಕಾಶ ನೀಡಿದೆ.

ಪಂದ್ಯ ಆರಂಭ: ರಾತ್ರಿ 10.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT