T20 WC | ಟೀಂ ಇಂಡಿಯಾವನ್ನು ಸಾಧಾರಣ ತಂಡವೆಂಬಂತೆ ಮಾಡಿದ ಇಂಗ್ಲೆಂಡ್: ಮಾರ್ಗನ್

ಅಡಿಲೇಡ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಅಮೋಘ ಜಯ ಸಾಧಿಸಿದ ಇಂಗ್ಲೆಂಡ್ ತಂಡವನ್ನು ಮಾಜಿ ಕ್ರಿಕೆಟಿಗ ಎಯಾನ್ ಮಾರ್ಗನ್ ಶ್ಲಾಘಿಸಿದ್ದಾರೆ.
ಇಂಗ್ಲೆಂಡ್ ಪರ 2019ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಮಾರ್ಗನ್, ಜಾಸ್ ಬಟ್ಲರ್ ಬಳಗ ಆಡಿದ ರೀತಿಯು ಭಾರತ ತಂಡವನ್ನು ಸಾಧಾರಣ ತಂಡವೆಂಬಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು (ನವೆಂಬರ್ 10 ರಂದು) ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ (50) ಮತ್ತು ಸ್ಫೋಟಕ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ (63) ಭಾರತ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಗಿದ್ದರು.
ಇದನ್ನೂ ಓದಿ: IPL ಗೆದ್ದು ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ಲ; ರೋಹಿತ್ ವಿರುದ್ಧ ನೆಟ್ಟಿಗರ ಕಿಡಿ
ಈ ಮೊತ್ತ ಇಂಗ್ಲೆಂಡ್‌ಗೆ ಸವಾಲೇ ಆಗಲಿಲ್ಲ. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್ ಹೇಲ್ಸ್ (89) ಮತ್ತು ಜಾಸ್ ಬಟ್ಲರ್ (80) ಜೋಡಿ ಮುರಿಯದ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 170 ರನ್ ಕಲೆಹಾಕಿತು. ಹೀಗಾಗಿ 10 ವಿಕೆಟ್ ಅಂತರದ ಜಯ ಸಾಧಿಸಿದ ಇಂಗ್ಲೆಂಡ್, ನವೆಂಬರ್ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿತ್ತು.
ಪಂದ್ಯದ ಕುರಿತು 'ಸ್ಕೈ ಸ್ಪೋರ್ಟ್ಸ್' ಜೊತೆ ಮಾತನಾಡಿರುವ ಮಾರ್ಗನ್, 'ಇಂಗ್ಲೆಂಡ್ ಪಡೆ, ಭಾರತ ತಂಡವು ಸಾಧಾರಣ ತಂಡದ ರೀತಿ ಕಾಣುವಂತೆ ಮಾಡಿತು. ಲಯದಲ್ಲಿರುವ ಜಾಸ್, ಕ್ರಿಕೆಟ್ ಜಗತ್ತಿನಲ್ಲಿ ಬೌಲಿಂಗ್ ಮಾಡಲು ಕಠಿಣ ಎನಿಸುವ ಬ್ಯಾಟರ್. ಅವರ ನಾಯಕತ್ವದ ಇಂಗ್ಲೆಂಡ್, ಅತ್ಯಂತ ಗುಣಮಟ್ಟದ ಆಟ ಪ್ರದರ್ಶಿಸಿದೆ' ಎಂದಿದ್ದಾರೆ.
ಇದೇ ವರ್ಷ (2022) ಜುಲೈನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಮಾರ್ಗನ್, ಇಂದು ತಾವೆಷ್ಟು ಚೆನ್ನಾಗಿ ಆಡಿದ್ದೇವೆ ಎಂಬುದನ್ನು ಆಟಗಾರರು ಅವಲೋಕಿಸಬೇಕು ಮತ್ತು ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿಯೂ ಇದೇ ರೀತಿಯ ಪ್ರದರ್ಶನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಇವನ್ನೂ ಓದಿ
* T20 World Cup: ಚುಟುಕು ಕ್ರಿಕೆಟ್ನಲ್ಲಿ 4 ಸಾವಿರ ಪೂರೈಸಿದ ಏಕೈಕ ಆಟಗಾರ ಕೊಹ್ಲಿ
* T20 WC ಸೆಮಿಫೈನಲ್ | ಭಾರತಕ್ಕೆ 10 ವಿಕೆಟ್ ಅಂತರದ ಸೋಲು; ಫೈನಲ್‌ಗೆ ಇಂಗ್ಲೆಂಡ್
* T20 WC ಸೆಮಿಫೈನಲ್: ಸೋಲಿನ ಬಳಿಕ ಭಾವುಕರಾದ ರೋಹಿತ್ಗೆ ಕೋಚ್ ದ್ರಾವಿಡ್ ಸಾಂತ್ವನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.