ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹಿಂದೂಗಳ ನಡುವೆ ನಮಾಜ್‌' ಹೇಳಿಕೆ; ಕ್ಷಮೆಯಾಚಿಸಿದ ವಕಾರ್ ಯೂನಿಸ್

Last Updated 27 ಅಕ್ಟೋಬರ್ 2021, 11:33 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆದ ಪಂದ್ಯದ ನಡುವೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ನಮಾಜ್ ಮಾಡಿದ್ದರು.

ಭಾರತ ವಿರುದ್ಧ ಐತಿಹಾಸಿಕ ಗೆಲುವಿನ ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ದಿಗ್ಗಜ ವೇಗದ ಬೌಲರ್ ವಕಾರ್ ಯೂನಿಸ್, ಹಿಂದೂಗಳ ನಡುವೆ ರಿಜ್ವಾನ್ ನಮಾಜ್ ಮಾಡಿರುವುದು ಬಹಳ ವಿಶೇಷವೆನಿಸಿತು ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.

ವಕಾರ್ ಯೂನಿಸ್ ಅವಹೇಳನಕಾರಿ ಹೇಳಿಕೆ ಬಗ್ಗೆ ಕ್ರಿಕೆಟ್ ಲೋಕದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ವಕಾರ್, ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.

'ಕಾವೇರಿದ ಕ್ಷಣದಲ್ಲಿ ನಾನು ನೀಡಿರುವ ಹೇಳಿಕೆಯು ಹಲವರ ಭಾವನೆಗಳಿಗೆ ನೋವುಂಟು ಮಾಡಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇದು ಉದ್ದೇಶಪೂರ್ವಕವಾಗಿರಲಿಲ್ಲ. ಸಹಜ ತಪ್ಪಾಗಿದೆ. ಜನಾಂಗ, ವರ್ಣ ಅಥವಾ ಧರ್ಮಕ್ಕಿಂತ ಮಿಗಿಲಾಗಿ ಕ್ರೀಡೆಯು ಜನರನ್ನು ಒಗ್ಗೂಡಿಸುತ್ತದೆ' #ಕ್ಷಮಾಪಣೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಇನ್ನಿಂಗ್ಸ್‌ನಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್, ನಮಾಜ್ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ವಕಾರ್, 'ಬಾಬರ್ ಆಜಂ ಹಾಗೂ ರಿಜ್ವಾನ್ ಬ್ಯಾಟಿಂಗ್ ಮಾಡಿದ ರೀತಿಯು ಅದ್ಭುತವಾಗಿತ್ತು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಅತ್ಯುತ್ತಮ ಅಂಶವೆಂದರೆ, ಹಿಂದೂಗಳಿಂದ ಸುತ್ತುವರಿದ ಮೈದಾನದಲ್ಲಿ ನಮಾಜ್ ಮಾಡಿರುವುದು ನಿಜವಾಗಿಯೂ ನನಗೆ ತುಂಬಾ ವಿಶೇಷವಾಗಿತ್ತು' ಎಂದು ಹೇಳಿದ್ದರು.

ಭಾರತದ ಕ್ರಿಕೆಟ್ ನಿರೂಪಕರಾದ ಹರ್ಷ ಬೋಗ್ಲೆ, ವಕಾರ್ ಹೇಳಿಕೆಯನ್ನು ಖಂಡಿಸಿದ್ದರು. 'ಇದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಕ್ರಿಕೆಟ್‌ನ ರಾಯಭಾರಿಯಾಗಿ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು. ಕ್ರಿಕೆಟ್ ಜಗತ್ತನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕು. ಧರ್ಮದ ಹೆಸರಲ್ಲಿ ವಿಭಜಿಸಬಾರದು' ಎಂದು ಹೇಳಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡಾ ವಕಾರ್‌ಗೆ ತಿರುಗೇಟು ನೀಡಿದ್ದು, 'ಕ್ರೀಡೆಯಲ್ಲಿ ಇದನ್ನು ಹೇಳುವ ಮೂಲಕ ಜಿಹಾದಿ ಮನಸ್ಥಿತಿಯ ಮತ್ತೊಂದು ಹಂತವನ್ನು ತೋರುತ್ತಿದೆ. ಎಂತಹ ನಾಚಿಕೆಗೇಡಿನ ಮನುಷ್ಯ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT