ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 world Cup: ನ್ಯೂಜಿಲೆಂಡ್ ವಿರುದ್ಧ ವಿಂಡೀಸ್‌ಗೆ 13 ರನ್‌ಗಳ ಜಯ

Published 13 ಜೂನ್ 2024, 4:54 IST
Last Updated 13 ಜೂನ್ 2024, 4:54 IST
ಅಕ್ಷರ ಗಾತ್ರ

ತರೂಬಾ ಟ್ರಿನಿಡಾಡ್: ಶೆರ್ಫೆನ್ ರುದರ್‌ಫೋರ್ಡ್ ಅಬ್ಬರದ ಬ್ಯಾಟಿಂಗ್‌ನಿಂದ ಆತಿಥೇಯ ವೆಸ್ಟ್ ಇಂಡೀಸ್ ತಂಡವು  ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಜಯಿಸಿತು. ಇದರೊಂದಿಗೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 8 ಹಂತ ಪ್ರವೇಶಿಸಿತು. 

ಬ್ರಯನ್ ಲಾರಾ ಕ್ರೀಡಾಂಗಣದಲ್ಲಿ ಗುರುವಾರ ಬೆಳಿಗ್ಗೆ (ಭಾರತೀಯ ಕಾಲಮಾನ) ನಡೆದ ಸಿ ಗುಂಪಿನ ಪಂದ್ಯದಲ್ಲಿ ವಿಂಡೀಸ್ ತಂಡವು 13 ರನ್‌ಗಳಿಂದ ಗೆದ್ದಿತು. 

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿಂಡೀಸ್ ತಂಡವು ಆರಂಭದಲ್ಲಿ ಎಡವಿತು. ಹೀಗಾಗಿ ಕಿವೀಸ್ ಬೌಲರ್‌ಗಳ ದಾಳಿಯ ಮುಂದೆ 30 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ರುದರ್‌ಫೋರ್ಡ್ (ಔಟಾಗದೆ 68; 39ಎ, 4X2, 6X6) ತಂಡಕ್ಕೆ ಆಸರೆಯಾದರು. ಇದರಿಂದಾಗಿ ವಿಂಡೀಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 149 ರನ್‌ಗಳ ಹೋರಾಟದ ಮೊತ್ತ ಗಳಿಸಿತು. 

ನ್ಯೂಜಿಲೆಂಡ್ ತಂಡದಲ್ಲಿಯೂ ಉತ್ತಮ ಬ್ಯಾಟರ್‌ಗಳಿದ್ದರು. ಆದರೆ ಕೇನ್ ವಿಲಿಯಮ್ಸನ್ ಬಳಗವನ್ನು ವೇಗಿ ಅಲ್ಝರಿ ಜೋಸೆಫ್ (19ಕ್ಕೆ4) ಮತ್ತು ಸ್ಪಿನ್ನರ್ ಗುಡಕೇಶ್ ಮೋತಿ (25ಕ್ಕೆ3) ಕಟ್ಟಿಹಾಕಿದರು. 

ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 136 ರನ್ ಗಳಿಸಿತು. ಫಿನ್ ಅಲೆನ್ (26; 23ಎ) ಮತ್ತು ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಫಿಲಿಪ್ಸ್ (40; 33ಎ, 4X3, 6X2) ಹೋರಾಟ ತಂಡದ ಜಯಕ್ಕೆ ಸಾಕಾಗಲಿಲ್ಲ. ಇದರಿಂದಾಗಿ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. ಸೂಪರ್ 8ರ ಘಟ್ಟ ತಲುಪುವುದು ಅನುಮಾನವಾಗಿದೆ.

ಸಂಕ್ಷಿಪ್ತ ಸ್ಕೋರು:

ವೆಸ್ಟ್ ಇಂಡೀಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 149 (ಶೆರ್ಫೆನ್ ರುದರ್‌ಫೋರ್ಡ್  ಔಟಾಗದೆ 68,  ನಿಕೊಲಸ್ ಪೂರನ್ 17, ಅಕೀಲ್ ಹುಸೇನ್ 15, ಆ್ಯಂಡ್ರೆ ರಸೆಲ್ 14, ರೊಮೆರಿಯೊ ಶೆಫರ್ಡ್ 13, ಟ್ರೆಂಟ್ ಬೌಲ್ಟ್ 16ಕ್ಕೆ3, ಟಿಮ್ ಸೌಥಿ 21ಕ್ಕೆ2, ಲಾಕಿ ಫರ್ಗ್ಯುಸನ್ 27ಕ್ಕೆ2)

ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 136 (ಫಿನ್ ಅಲೆನ್ 26, ಡೆರಿಲ್ ಮಿಚೆಲ್ 12, ಗ್ಲೆನ್ ಫಿಲಿಪ್ಸ್ 40, ಮಿಚೆಲ್ ಸ್ಯಾಂಟನರ್ ಔಟಾಗದೆ 21, ಅಲ್ಝರಿ ಜೋಸೆಫ್ 19ಕ್ಕೆ4, ಗುಡಕೇಶ್ ಮೋತಿ 25ಕ್ಕೆ3)

ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 13 ರನ್‌ಗಳ ಜಯ.  ಪಂದ್ಯ ಶ್ರೇಷ್ಠ: ಶೆರ್ಫೆನ್ ರುದರ್‌ಫೋರ್ಡ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT