ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಹೋರಾಟ: ವಿರಾಟ್‌–ಕೇನ್ ನಾಯಕತ್ವಕ್ಕೆ ಸವಾಲು

‘ಕ್ವಾರ್ಟರ್‌ಫೈನಲ್’ ಪಂದ್ಯ ಇಂದು
Last Updated 30 ಅಕ್ಟೋಬರ್ 2021, 17:28 IST
ಅಕ್ಷರ ಗಾತ್ರ

ದುಬೈ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೇ ಅತ್ಯಂತ ಕಠಿಣವಾದ ಸವಾಲಿನ ಹೊಸ್ತಿಲಲ್ಲಿ ನಿಂತಿದ್ದಾರೆ.

ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥೇಯ ತಂಡವಾಗಿರುವ ಭಾರತ ತಂಡಕ್ಕೆ ಸೆಮಿಫೈನಲ್‌ ಪ್ರವೇಶದ ಕನಸು ಜೀವಂತವಾಗಿ ಉಳಿಯಬೇಕಾದರೆ ಭಾನುವಾರ ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು ಜಯಿಸಲೇಬೇಕು. ಕಿವೀಸ್ ಬಳಗಕ್ಕೂ ಇದು ‘ಮಾಡು ಇಲ್ಲವೇ ಮಡಿ’ ಪಂದ್ಯವೇ ಆಗಿದೆ. ಸೋತವರಿಗೆ ನಾಲ್ಕರ ಘಟ್ಟದ ಬಾಗಿಲು ಮುಚ್ಚುವ ಸಾಧ್ಯತೆ ಹೆಚ್ಚು.

ಸೂಪರ್ 12ರ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಎದುರು ಉಭಯ ತಂಡಗಳೂ ಸೋತಿರುವುದರಿಂದ ಈ ಒತ್ತಡ ಉದ್ಭವಿಸಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಸೊತ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ (ಸ್ಕಾಟ್ಲೆಂಡ್, ನಮಿಬಿಯಾ ಮತ್ತು ಆಫ್ಗಾನಿಸ್ತಾನದ ಎದುರು) ಜಯಿಸಬೇಕು. ಅದೇ ರೀತಿ ಈ ಪಂದ್ಯದಲ್ಲಿ ಗೆದ್ದ ತಂಡವು ಮುಂದಿನ ಮೂರು ಹಣಾಹಣಿಗಳಲ್ಲಿ ಒಂದರಲ್ಲಿ ಸೋಲಬೇಕು. ಆದರೆ ಕ್ರಿಕೆಟ್‌ ಲೋಕದಲ್ಲಿ ಈಗ ತಮ್ಮ ಅಸ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ತಂಡಗಳಎದುರು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಗೆಲ್ಲುವ ಸಾಧ್ಯತೆಯೇ ಅತಿ ಹೆಚ್ಚು.ಆದ್ದರಿಂದ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಪಂದ್ಯವು ಕುತೂಹಲದ ಗಣಿಯಾಗಿದೆ.

ಆದರೆ, ಐಸಿಸಿಯ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವು ಮೇಲುಗೈ ಸಾಧಿಸಿಲ್ಲ. 2016ರಲ್ಲಿ ಮಹೇಂದ್ರಸಿಂಗ್ ಧೋನಿ ಬಳಗದೆದುರೂ ಕಿವೀಸ್ ಜಯಿಸಿತ್ತು. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ಬಳಗವು ಕೊಹ್ಲಿ ಪಡೆಯನ್ನು ಸೋಲಿಸಿತ್ತು. ಕೆಲವು ತಿಂಗಳುಗಳ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿಯೂ ಕಿವೀಸ್ ಗೆದ್ದಿತ್ತು. ಅದರಿಂದಾಗಿ ಕೊಹ್ಲಿ ಎದುರು ಈ ಸೋಲಿನ ಸರಪಣಿ ತುಂಡರಿಸುವ ಸವಾಲು ಕೂಡ ಇದೆ. ಅದಕ್ಕಾಗಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಾಕ್ ಎದುರಿನ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಹೊಡೆದಿದ್ದರು. ಆದರೆ, ಆರಂಭಿಕ ಜೋಡಿ ರೋಹಿತ್ ಮತ್ತು ರಾಹುಲ್ ವೈಫಲ್ಯ ಅನುಭವಿಸಿದ್ದರು. ಆದರೂ ಅವರಿಬ್ಬರಿಗೆ ಮತ್ತೊಂದು ಅವಕಾಶ ಸಿಗಬಹುದು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್‌ರೌಂಡರ್‌ ಗೆ ಸ್ಥಾನ ಕೊಡಬಹುದು.

ಲಯ ಕಂಡುಕೊಳ್ಳಲು ಪರದಾಡುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ಶಾರ್ದೂಲ್ ಠಾಕೂರ್ ಅಥವಾ ಅನುಭವಿ ಆರ್. ಅಶ್ವಿನ್ ಅವರನ್ನು ಕಣಕ್ಕಿಳಿಸಬಹುದು. ಆರನೇ ಬೌಲರ್‌ ಅವಶ್ಯಕತೆಯೂ ಇರುವುದರಿಂದ ಈ ಸಾಧ್ಯತೆ ಹೆಚ್ಚಿದೆ. ಪಾಕ್ ಎದುರು ಆಡಿದ ಬೌಲರ್‌ಗಳು ಒಂದೇ ಒಂದು ವಿಕೆಟ್ ಕೂಡ ಗಳಿಸಿರಲಿಲ್ಲ.

ಕೇನ್ ಬಳಗವೂ ಒತ್ತಡದಲ್ಲಿದೆ. ಪಾಕ್ ಎದುರು ಬ್ಯಾಟಿಂಗ್‌ ಪಡೆಯು ತಡಬಡಾಯಿಸಿತ್ತು. ಆದ್ದರಿಂದ ಭಾರತದ ಬೌಲಿಂಗ್ ಎದುರಿಸಲು ಇನ್ನಷ್ಟು ಸಿದ್ಧತೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆ ಇದೆ. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಅವರ ಅನುಭವವೂ ಪಾಕ್ ಎದುರು ಹೆಚ್ಚು ಪ್ರಯೋಜನವಾಗಿರಲಿಲ್ಲ.

ತಂಡಗಳು
ಭಾರತ
: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಇಶಾನ್ ಕಿಶನ್, ರಾಹುಲ್ ಚಾಹರ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ, ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಜೇಮ್ಸ್ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟನರ್, ಈಶ ಸೋಧಿ, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಮಾರ್ಕ್ ಚಾಪಮನ್, ಆ್ಯಡಂ ಮಿಲ್ನೆ, ಕೈಲ್ ಜೆಮಿಸನ್, ಟಾಡ್ ಎಸಲ್.

ಪಂದ್ಯ ಆರಂಭ: ರಾತ್ರಿ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT