ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್-ಅಫ್ಗನ್ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುವ ಭಾರತದ ಸೆಮಿಫೈನಲ್ ಕನಸು!

Last Updated 6 ನವೆಂಬರ್ 2021, 11:23 IST
ಅಕ್ಷರ ಗಾತ್ರ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಅಬುಧಾಬಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಅಫ್ಗಾನಿಸ್ತಾನ ನಡುವಣ ಪಂದ್ಯವು ಭಾರತದ ಪಾಲಿಗೆ ನಿರ್ಣಾಯಕವೆನಿಸಿದೆ. ಏಕೆಂದರೆ ಭಾರತದ ಸೆಮಿಫೈನಲ್ ಕನಸು ಈ ಪಂದ್ಯದ ಫಲಿತಾಂಶವನ್ನು ಅವಲಂಬಿಸಿರುತ್ತದೆ.

ಹಾಗೊಂದು ವೇಳೆ ನ್ಯೂಜಿಲೆಂಡ್ ತಂಡದ ವಿರುದ್ಧ ಅಫ್ಗಾನಿಸ್ತಾನ ಗೆಲುವು ದಾಖಲಿಸಿದರೆ ವಿರಾಟ್ ಕೊಹ್ಲಿ ಬಳಗದ ಸೆಮಿಫೈನಲ್ ಕನಸು ಚಿಗುರೊಡೆಯಲಿದೆ. ಹಾಗಾಗಿ ಕೋಟ್ಯಂತರ ಭಾರತೀಯ ಅಭಿಮಾನಿಗಳು ಅಫ್ಗಾನಿಸ್ತಾನದ ಗೆಲುವಿಗಾಗಿ ಪ್ರಾರ್ಥಿಸಲಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಸೂಪರ್-12 ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಅಫ್ಗಾನಿಸ್ತಾನ ಪಾಲಿಗಿದು ಮಹತ್ವದ ಪಂದ್ಯವಾಗಿದೆ. ನ್ಯೂಜಿಲೆಂಡ್ ಗೆದ್ದರೆ ಎಂಟು ಅಂಕಗಳೊಂದಿಗೆ ಪಾಕಿಸ್ತಾನದ ಜೊತೆಗೆ ಎರಡನೇ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

ಇನ್ನು ಅಫ್ಗಾನಿಸ್ತಾನ ಜಯಿಸಿದರೆ ನ್ಯೂಜಿಲೆಂಡ್ ತಂಡದಷ್ಟೇ ಆರು ಅಂಕಗಳನ್ನು ಗಿಟ್ಟಿಸಿಕೊಳ್ಳಲಿದೆ. ಅಲ್ಲದೆ ರನ್‌ರೇಟ್ ಲೆಕ್ಕಾಚಾರ ಶುರುವಾಗಲಿದೆ. ಹಾಗಾದ್ದಲ್ಲಿ ಸೋಮವಾರ ನಮೀಬಿಯಾ ವಿರುದ್ಧ ಉತ್ತಮ ರನ್‌ರೇಟ್‌ನೊಂದಿಗೆ ಜಯ ಗಳಿಸಿದ್ದಲ್ಲಿ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಲಿದೆ.

ಸ್ಕಾಟ್ಲೆಂಡ್ ವಿರುದ್ಧ 86 ರನ್ ಗುರಿಯನ್ನು 6.3 ಓವರ್‌ಗಳಲ್ಲೇ ಕ್ರಮಿಸಿರುವ ಭಾರತ (+1.619), ಈಗಾಗಲೇ ನ್ಯೂಜಿಲೆಂಡ್ (+1.277) ಹಾಗೂ ಅಫ್ಗಾನಿಸ್ತಾನಗಿಂತಲೂ (+1.481) ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT