ಬುಧವಾರ, ಜನವರಿ 27, 2021
27 °C

ಸುರೇಶ್ ರೈನಾ ಪಾಲಿಗೆ ಸಿಎಸ್‌ಕೆ ಬಾಗಿಲು ಶಾಶ್ವತ ಬಂದ್?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ತಂಡದೊಂದಿಗೆ ತೆರಳಿದ ನಂತರ ‘ವೈಯಕ್ತಿಕ’ ಕಾರಣ ನೀಡಿ ದಿಢೀರ್ ವಾಪಸಾದ ಆಲ್‌ರೌಂಡರ್ ಸುರೇಶ್ ರೈನಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶಾಶ್ವತವಾಗಿ ಬಾಗಿಲು ಮುಚ್ಚಿದೆ ಎನ್ನಲಾಗಿದೆ. ಮುಂದಿನ ವರ್ಷದ ಐಪಿಎಲ್‌ನಲ್ಲೂ ಅವರಿಗೆ ತಂಡದಲ್ಲಿ ಆಡಲು ಅವಕಾಶ ಸಿಗುವುದು ಸಂದೇಹ.

ಸೆಪ್ಟೆಂಬರ್ 19ರಂದು ಯುಎಇಯಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡಲು ತೆರಳಿರುವ ಸಿಎಸ್‌ಕೆ ತಂಡದ ದೀಪಕ್ ಚಾಹರ್ ಮತ್ತು ಋತುರಾಜ್ ಗಾಯಕವಾಡ್ ಅವರಿಗೆ ಕೋವಿಡ್–19 ದೃಢವಾದ ಬೆನ್ನಲ್ಲೇ ಸುರೇಶ್ ರೈನಾ ತಂಡವನ್ನು ತೊರೆದು ವಾಪಸಾಗಿದ್ದರು. ಅವರ ಈ ವರ್ತನೆಯ ಬಗ್ಗೆ ತಂಡದ ಆಡಳಿತ ಬೇಸರ ವ್ಯಕ್ತಪಡಿಸಿದ್ದರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಭಾರತಕ್ಕೆ ವಾಪಸಾಗಿದ್ದರ ಬಗ್ಗೆ ತಂಡದ ಮಾಲೀಕ ಎನ್‌.ಶ್ರೀನಿವಾಸನ್ ಅವರೇ ಅಸಮಾಧಾನ ವ್ಯಕ್ತಪಡಿದ್ದಾರೆ.

ಸಿಎಸ್‌ಕೆ ತಂಡದಲ್ಲಿ ಕೋಚ್ ಮತ್ತು ವ್ಯವಸ್ಥಾಪಕರಿಗೆ ಹೋಟೆಲ್‌ನಲ್ಲಿ ‘ಸೂಟ್’ ಒದಗಿಸಲಾಗುತ್ತದೆ. ತಂಡದ ಆಟಗಾರರು ವಾಸವಿರುವ ಹೋಟೆಲ್‌ನಲ್ಲಿ ಸುರೇಶ್ ರೈನಾ ಅವಿರಿಗೂ ಸೂಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೊಠಡಿಗೆ ಬಾಲ್ಕನಿ ಇರಲಿಲ್ಲ. ಅವರ ಅಸಮಾಧಾನಕ್ಕೆ ಇದೇ ಕಾರಣ ಎಂದು ಐಪಿಎಲ್‌ ಮೂಲವೊಂದು ಹೇಳಿದೆ.

‘ಇದು ಸಮಸ್ಯೆ ಹೌದು. ಆದರೆ ತಂಡವನ್ನು ತೊರೆದು ವಾಪಸ್ ಬರುವಷ್ಟು ದೊಡ್ಡದಲ್ಲ. ಕೊರೊನಾ ಕಾಲದಲ್ಲಿ ಇಂಥ ಅಸೌಕರ್ಯಗಳನ್ನು ಸಹಿಸಿಕೊಂಡು ಇರಬೇಕಾಗುತ್ತದೆ’ ಎಂದು ಹೇಳಿರುವ ಮೂಲವು ‘ಸುರೇಶ್ ರೈನಾ ಅವರು ಜೀವ ಸುರಕ್ಷಾ ವ್ಯವಸ್ಥೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಅವರು ಈ ಬಾರಿ ತಂಡದಲ್ಲಿ ಇರುವುದಿಲ್ಲ ಎಂದು ಅಧಿಕೃತವಾಗಿಯೇ ಪ್ರಕಟಿಸಲಾಗಿದೆ. ಆದರೆ ಫ್ರಾಂಚೈಸ್‌ನ ಹಿರಿಯರಿಗೆ ಬೇಸರ ತರಿಸಿರುವುದರಿಂದ ಮುಂದಿನ ಏಪ್ರಿಲ್‌ನಲ್ಲಿ ಆರಂಭವಾಗಲಿರುವ 14ನೇ ಆವೃತ್ತಿಯಲ್ಲೂ ಅವಕಾಶ ಸಿಗುವ ಸಾಧ್ಯತೆ ಕಡಿಮೆ’ ಎಂದು ತಿಳಿಸಿದರು.

ಸುರೇಶ್ ರೈನಾಗೇ ನಷ್ಟ: ಶ್ರೀನಿವಾಸನ್

ತಂಡವನ್ನು ತೊರೆಯಲು ಕೈಗೊಂಡ ನಿರ್ಧಾರದಿಂದ ರೈನಾ ಅವರಿಗೇ ನಷ್ಟ. ಈ ಬಾರಿಯ ಟೂರ್ನಿ ಇನ್ನೂ ಆರಂಭಗೊಂಡಿಲ್ಲ. ಮುಂದಿನ ದಿನಗಳಲ್ಲಿ ಆಗಲಿರುವ ನಷ್ಟದ ಬಗ್ಗೆ ರೈನಾ ಅವರಿಗೆ ಕಲ್ಪನೆಯೇ ಇಲ್ಲ ಎಂದೆನಿಸುತ್ತದೆ. ಆರ್ಥಿಕವಾಗಿ ಅವರು ₹ 11 ಕೋಟಿ ಮೊತ್ತವನ್ನು ಕಳೆದುಕೊಳ್ಳಲಿದ್ದಾರೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್‌.ಶ್ರೀನಿವಾಸನ್ ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಕೆಲವರು ಬೇಗ ಉದ್ವೇಗಕ್ಕೆ ಒಳಗಾಗುತ್ತಾರೆ. ಆದರೆ ಮಹೇಂದ್ರ ಧೋನಿ ತಮ್ಮನ್ನು ತಾವು ಪೂರ್ಣ ನಿಯಂತ್ರಣದಲ್ಲಿರಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದು ಕುಟುಂಬದಂತೆ ಇದ್ದು ಹಿರಿಯ ಆಟಗಾರರೆಲ್ಲರೂ ಪರಸ್ಪರ ಸಹಕಾರದಲ್ಲಿದ್ದಾರೆ. ಅಸಮಾಧಾನ ಇದ್ದವರು ಹೊರನಡೆಯಬಹುದು. ತಂಡದಲ್ಲಿ ಇರುವಂತೆ ಯಾರ ಮೇಲೆಯೂ ಒತ್ತಡ ಹೇರುವುದಿಲ್ಲ’ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

‘ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಮಾತನಾಡಿದ್ದೇನೆ. ಎಷ್ಟೇ ಸದಸ್ಯರು ಕಡಿಮೆಯಾದರೂ ಆತಂಕಪಡಬೇಡಿ ಎಂದು ಅವರು ಭರವಸೆ ನೀಡಿದ್ದಾರೆ. ಸಹ ಆಟಗಾರರ ಜೊತೆ ಆನ್‌ಲೈನ್‌ ಮೂಲಕ ಮಾತನಾಡಿ ಎಲ್ಲರೂ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು