ಶುಕ್ರವಾರ, ಜುಲೈ 1, 2022
28 °C

IND vs WI: ವೆಸ್ಟ್ ಇಂಡೀಸ್‌ ವಿರುದ್ಧದ ಟಿ–20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ವೆಸ್ಟ್ ಇಂಡೀಸ್‌ ವಿರುದ್ಧ ಸರ್ವಾಂಗೀಣ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು 3–0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ.

ಕೋಲ್ಕತ್ತದ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯವನ್ನು ಭಾರತ ತಂಡ 17 ರನ್‌ಗಳಿಂದ ಗೆದ್ದುಕೊಂಡಿದೆ.

ಭಾರತ ನೀಡಿದ್ದ 185 ರನ್ ಗುರಿ ಬೆನ್ನತ್ತಿದ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ 6 ರನ್ ಗಳಿಸಿರುವಾಗಲೇ ಆಘಾತ ಎದುರಾಯಿತು. ದೀಪಕ್ ಚಾಹರ್ ಅವರು 6 ರನ್ ಗಳಿಸಿದ್ದ ಕೈಲ್ ಮೇಯರ್ಸ್ ಅವರಿಗೆ ಪೆವಿಲಿಯನ್ ಹಾದಿ ತೋರಿದರು. ತಂಡವು 26 ರನ್ ಗಳಿಸುವಷ್ಟರಲ್ಲಿ ಶಾಯ್ ಹೋಪ್ (8 ರನ್, 4 ಎಸೆತ) ನಿರ್ಗಮಿಸಿದರು.

ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ (61 ರನ್ 47 ಎಸೆತ) ದಾಖಲಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವುದು ಸಾಧ್ಯವಾಗಲಿಲ್ಲ.

ಒಂದು ಹಂತದಲ್ಲಿ ಪೂರನ್ ಜತೆಗೂಡಿದ ರೋವ್ಮನ್ ಪೊವೆಲ್ (25 ರನ್, 14 ಎಸೆತ) ಭಾರತದ ಬೌಲರ್‌ಗಳನ್ನು ಕಾಡಿದರು. ಇವರನ್ನು ಔಟ್ ಮಾಡುವ ಮೂಲಕ ಹರ್ಷಲ್ ಪಟೇಲ್ ಅವರು ಪಂದ್ಯವನ್ನು ಮರಳಿ ಭಾರತದ ಹಿಡಿತಕ್ಕೆ ತಂದರು. ಕೊನೆಯ ಹಂತದ ವರೆಗೂ ಕಾಡಿದ ಪೂರನ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಶಾರ್ದೂಲ್ ಠಾಕೂರ್ ಗೆಲುವು ಖಚಿತಪಡಿಸಿದರು.

ಅಂತಿಮವಾಗಿ ವೆಸ್ಟ್ ಇಂಡೀಸ್‌ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ಹರ್ಷಲ್ ಪಟೇಲ್ 3, ದೀಪಕ್ ಚಾಹರ್ 2, ವೆಂಕಟೇಶ ಅಯ್ಯರ್ 2, ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಅರ್ಧಶತಕದ (65 ರನ್, 31 ಎಸೆತ) ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 184 ರನ್ ಗಳಿಸಿತ್ತು.

ಮೊದಲ ಎರಡು ಪಂದ್ಯಗಳನ್ನು ಜಯಿಸುವ ಮೂಲಕ ಈ ಮೊದಲೇ ಸರಣಿ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾ, ಈ ಪಂದ್ಯದಲ್ಲಿ ಕೆಲವು ಪ್ರಯೋಗಗಳೊಂದಿಗೆ ಮೈದಾನಕ್ಕಿಳಿಯಿತು. ಆರಂಭಿಕರಾಗಿ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಕ್ರೀಸಿಗಿಳಿದರು. ಆದರೆ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ತಂಡದ ಮೊತ್ತ ಕೇವಲ 10 ರನ್ ಆಗಿದ್ದಾಗ ಕೇವಲ 4 ರನ್ ಗಳಿಸಿದ್ದ ಗಾಯಕ್ವಾಡ್ ಹೋಲ್ಡರ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ಇಶಾನ್ ಜತೆಗೂಡಿದ ಶ್ರೇಯಸ್ ಅಯ್ಯರ್ ಅಬ್ಬರಿಸುವ ಸುಳಿವು ನೀಡಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರುವುದು ಅವರಿಂದಾಗಲಿಲ್ಲ. ಈ ಜೋಡಿ 2ನೇ ವಿಕೆಟ್‌ಗೆ 53 ರನ್ ಕಲೆಹಾಕಿದರು.

ಇಶಾನ್ ಕಿಶನ್ 31 ಎಸೆತ ಎದುರಿಸಿ 34 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ನಾಯಕ ರೋಹಿತ್ ಶರ್ಮಾ ಕೂಡ 15 ಬಾಲ್ ಎದುರಿಸಿ ಕೇವಲ 7 ರನ್ ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

ಸೂರ್ಯಕುಮಾರ್ ಯಾದವ್ ಚುರುಕಿನ ಬ್ಯಾಟಿಂಗ್ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತ ಗಳಿಸಲು ಕಾರಣರಾದರು. ವೆಂಕಟೇಶ್ ಅಯ್ಯರ್ (ಔಟಾಗದೆ 35 ರನ್, 19 ಎಸೆತ) ಚುರುಕಿನ ಬ್ಯಾಟಿಂಗ್ ಮೂಲಕ ಸೂರ್ಯಕುಮಾರ್‌ಗೆ ಉತ್ತಮ ಸಾಥ್ ನೀಡಿದರು.

ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್ 1, ರಾಸ್ಟನ್ ಚೇಸ್ 1, ಹೇಡನ್ ವಾಲ್ಶ್‌ 1, ಡಾಮ್ನಿಕ್ ಡ್ರೇಕ್ಸ್ 1, ರೊಮಾರಿಯಾ ಶೇಫರ್ಡ್ 1 ವಿಕೆಟ್ ಪಡೆದರು.

ಟೀಮ್ ಇಂಡಿಯಾದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು