ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕುಡ್ಲದ ಹುಡುಗ ಕೆ.ಎಲ್. ರಾಹುಲ್ ಮೇಲೆ ಕಣ್ಣು

Last Updated 8 ಸೆಪ್ಟೆಂಬರ್ 2020, 5:20 IST
ಅಕ್ಷರ ಗಾತ್ರ

ಬೆಂಗಳೂರು: ಕುಡ್ಲದ ಹುಡುಗ ಕೆ.ಎಲ್. ರಾಹುಲ್ ಅವರ ವೃತ್ತಿಜೀವನದ ಮಹತ್ವದ ಇನಿಂಗ್ಸ್‌ ಈಗ ಶುರುವಾಗಲಿದೆ.

ಕೊರೊನಾ ಪೂರ್ವದಲ್ಲಿ ಅವರ ಆಟ, ದಾಖಲೆಗಳು ಮತ್ತು ಕ್ರೀಡಾಂಗಣದ ಆಚೆಗಿನ ’ಚಟುವಟಿಕೆ‘ಗಳು ಈಗ ಇತಿಹಾಸದ ಪುಟ ಸೇರಿಯಾಗಿದೆ. ದೀರ್ಘ ಬಿಡುವಿನ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಕಣಕ್ಕಿಳಿಯುತ್ತಿರುವ ರಾಹುಲ್ ಸುತ್ತ ಭಾರತ ಕ್ರಿಕೆಟ್‌ ಕ್ಷೇತ್ರವು ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕನಾಗಿ ಮತ್ತು ಮಹೇಂದ್ರಸಿಂಗ್ ಧೋನಿ ನಿವೃತ್ತಿಯಿಂದಾಗಿ ತೆರವಾಗಿರುವ ಭಾರತ ತಂಡದ ವಿಕೆಟ್‌ಕೀಪರ್ ಸ್ಥಾನದ ವಾರಸುದಾರನಾಗಿ ರಾಹುಲ್ ಬಿಂಬಿತರಾಗುತ್ತಿದ್ದಾರೆ. ಅದರಿಂದಾಗಿ ಈ ಐಪಿಎಲ್ ಅವರ ವೃತ್ತಿಜೀವನದ ಮಹತ್ವದ ಘಟ್ಟವಾಗಲಿರುವುದು ಖಚಿತ.

ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ತಂಡವೊಂದರ ನಾಯಕತ್ವ ವಹಿಸುವುದು ಪ್ರತಿಷ್ಠೆಯ ವಿಷಯ. 28 ವರ್ಷದ ರಾಹುಲ್‌ಗ ಕಿಂಗ್ಸ್‌ನಂತಹ ದೊಡ್ಡ ತಂಡದ ನಾಯಕತ್ವದ ಹೊಣೆ ಲಭಿಸಿದೆ. ಅವರ ಅದೃಷ್ಟಕ್ಕೆ ತಂಡದಲ್ಲಿ ’ಸ್ನೇಹಿತ‘ರಾದ ಮಯಂಕ್ ಅಗರವಾಲ್, ಕರುಣ್ ನಾಯರ್, ಜೆ ಸುಚಿತ್ ಮತ್ತು ಕೃಷ್ಣಪ್ಪ ಗೌತಮ್ ಇದ್ದಾರೆ. ಅಲ್ಲದೇ ದಿಗ್ಗಜ ಅನಿಲ್ ಕುಂಬ್ಳೆ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ. ಇದರಿಂದಾಗಿ ಅರ್ಧ ತಂಡ ಕರ್ನಾಟಕಮಯವಾಗಿದೆ. ಆದ್ದರಿಂದಲೇ ಕನ್ನಡಿಗರಿಗೂ ಕಿಂಗ್ಸ್‌ ಪಂಜಾಬ್ ತಂಡದ ಮೇಲೆ ಹೆಚ್ಚು ಗಮನವಿರುವುದು ಸುಳ್ಳಲ್ಲ. ಅದರೊಂದಿಗೆ ತಂಡದಲ್ಲಿರುವ ತಮಗಿಂತಲೂ ಅನುಭವಿ ಆಟಗಾರರಾದ ಕ್ರಿಸ್ ಗೇಲ್ ಅವರನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಚಾತುರ್ಯವನ್ನೂ ತೋರಿಸಬೇಕಿದೆ.

’ಕ್ಲಾಸ್‌ರೂಮ್‌ಗೆ ಮರಳಿದ್ದೇನೆ. ಇಲ್ಲಿ ಕೆಲವು ಹೊಸ ವಿದ್ಯಾರ್ಥಿಗಳೂ ಇದ್ದಾರೆ. ಅಲ್ಲದೇ ಹೆಡ್‌ ಬಾಯ್ (ಕೆ.ಎಲ್.) ಮತ್ತು ಹೊಸ ಹೆಡ್‌ ಮಾಸ್ಟರ್‌ (ಅನಿಲ್ ಕುಂಬ್ಳೆ) ಕೂಡ ಇದ್ದಾರೆ. ಎಲ್ಲರೊಂದಿಗೆ ತಾಳಮೇಳ ಸಾಧಿಸಿ ಮುಂದುವರಿಯಲಿದ್ದೇನೆ‘ ಎಂದು ವೆಸ್ಟ್ ಇಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟ್ವೀಟ್ ಮಾಡಿದ್ದಾರೆ.

ಬಹುತೇಕ ಗೇಲ್ ಜೊತೆಗೆ ಇನಿಂಗ್ಸ್‌ ಆರಂಭಿಸುವ ಹೊಣೆಯನ್ನೂ ರಾಹುಲ್ ನಿಭಾಯಿಸಬೇಕಾಗಬಹುದು. ಆದ್ದರಿಂದ ತಂಡಕ್ಕೆ ಗಟ್ಟಿ ಬುನಾದಿ ಹಾಕುವ ಹೊಣೆ ಅವರ ಮೇಲಿದೆ. 2014ರಲ್ಲಿ ರನ್ನರ್ಸ್ ಅಪ್ ಆಗಿದ್ದ ತಂಡದ ದಾಖಲೆಯನ್ನು ಮುರಿದು, ಚಾಂಪಿಯನ್‌ ಪಟ್ಟಕ್ಕೆ ಏರಿಸುವ ಗುರಿ ರಾಹುಲ್ ಮುಂದಿದೆ.

ಜೊತಗೆ ವಿಕೆಟ್‌ ಹಿಂದೆಯೂ ತಮ್ಮ ಪ್ರತಿಭೆ ಮೆರೆಯುವ ಗುರುತರ ಹೊಣೆ ಇದೆ. ಏಕೆಂದರೆ ಅವರು ಈ ಟೂರ್ನಿಯಲ್ಲಿ ತೋರಿಸುವ ವಿಕೆಟ್‌ಕೀಪಿಂಗ್ ಮತ್ತು ಬ್ಯಾಟಿಂಗ್ ಕೌಶಲವು ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ.

’ಭಾರತ ಕ್ರಿಕೆಟ್‌ ತಂಡದ ವಿಕೆಟ್‌ಕೀಪಿಂಗ್‌ನಲ್ಲಿ ಧೋನಿ ಜಾಗವನ್ನು ತುಂಬಲು ರಾಹುಲ್ ಮತ್ತು ರಿಷಭ್ ಪಂತ್ ಇಬ್ಬರೂ ಸಮರ್ಥರಾಗಿದ್ದಾರೆ‘ ಎಂದು ಈಚೆಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜೋನ್ಸ್‌ ಹೇಳಿದ್ದರು.

ರಾಷ್ಟ್ರೀಯ ತಂಡದ ಆಯ್ಕೆಗಾರರಿಗೆ ಈ ಇಬ್ಬರಿಂದ ಬಹಳಷ್ಟು ನಿರೀಕ್ಷೆಗಳಿವೆ. ಅದರಲ್ಲೂ ರಾಹುಲ್‌ ಮೇಲೆ ಹೆಚ್ಚು. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‌ ಸರಣಿಗೆ ವೃದ್ಧಿಮಾನ್ ಸಹಾ ಮೊದಲ ಆಯ್ಕೆಯ ವಿಕೆಟ್‌ಕೀಪರ್ ಆಗುವುದು ಖಚಿತ. ಆದರೆ ಸೀಮಿತ ಓವರ್‌ಗಳಲ್ಲಿ ಅವರಿಗೆ ಅವಕಾಶ ಸಿಗುವುದು ಖಚಿತವಿಲ್ಲ. ಆದ್ದರಿಂದ ರಾಹುಲ್ ಮತ್ತು ರಿಷಭ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗುವುದು.

2019ರ ಏಕದಿನ ವಿಶ್ವಕಪ್ ನಂತರ ಧೋನಿ ಭಾರತ ತಂಡದಿಂದ ದೂರ ಉಳಿದಾಗ ರಿಷಭ್ ಪಂತ್ ಅವರಿಗೆ ಅವಕಾಶಗಳನ್ನು ನೀಡಲಾಯಿತು. ಆದರೆ, ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ದೆಹಲಿ ಆಟಗಾರ ವಿಫಲರಾದರು. ಲಯದ ಕೊರತೆಯ ಕಾರಣ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದ ರಾಹುಲ್, ಕರ್ನಾಟಕ ತಂಡಕ್ಕೆ ಮರಳಿದ್ದರು. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ತಮ್ಮ ’ಏಕಾಗ್ರತೆ‘ ಮರಳಿ ಪಡೆಯುವತ್ತ ಚಿತ್ತ ನೆಟ್ಟರು. ಬಹುತೇಕ ಯಶಸ್ವಿಯೂ ಆದರು. ವಿಕೆಟ್‌ಕೀಪಿಂಗ್‌ನಲ್ಲಿಯೂ ಮಿಂಚಿದರು. ಇದರಿಂದಾಗಿ ಅವರಿಗೆ ವಿರಾಟ್ ಕೊಹ್ಲಿಯಿಂದ ಬುಲಾವ್ ಬಂದಿತ್ತು.

ಆದರೆ ಅಲ್ಲಿ ಅವರು ಕೆಲವು ಪ್ರಯೋಗಗಳಿಗೆ ತಮ್ಮನ್ನು ತಮ್ಮನ್ನು ಒಡ್ಡಿಕೊಳ್ಳಬೇಕಾಯಿತು. ಹೋದ ಡಿಸೆಂಬರ್‌ನಲ್ಲಿ ವಿಶಾಖಪಟ್ಟಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರೇನೋ ನಿಜ. ಆದರೆ, ತಂಡದಲ್ಲಿ ಮತ್ತೊಬ್ಬ ಬ್ಯಾಟಿಂಗ್ ಅಥವಾ ಬೌಲಿಂಗ್ ಆಲ್‌ರೌಂಡರ್‌ಗೆ ಸ್ಥಾನ ನೀಡುವುದರ ಬಗ್ಗೆ ಯೋಚಿಸುತ್ತಿದ್ದ ತಂಡದ ಆಡಳಿತಕ್ಕೆ ರಾಹುಲ್ ಕೈಗಳಿಗೆ ವಿಕೆಟ್‌ಕೀಪಿಂಗ್ ಕೈಗವಸು ತೊಡಿಸುವ ವಿಚಾರ ಹೊಳೆಯಿತು. ಜನವರಿ 14ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಹೆಲ್ಮೆಟ್‌ಗೆ ಚೆಂಡು ಬಡಿದಿತ್ತು. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಿ ರಾಹುಲ್‌ಗೆ ಕೀಪಿಂಗ್ ಹೊಣೆ ವಹಿಸಲಾಗಿತ್ತು ನ್ಯೂಜಿಲೆಂಡ್ ಪ್ರವಾಸದಲ್ಲಿಯೂ ರಾಹುಲ್‌ ವಿಕೆಟ್‌ಕೀಪರ್ ಆಗಿ ಮುಂದುವರಿದರು. ಬ್ಯಾಟಿಂಗ್‌ನಲ್ಲಿಯೂ ಕ್ರಮಾಂಕಗಳನ್ನು ಬದಲಿಸಿ ಆಡಿಸಲಾಯಿತು. ಎಲ್ಲದರಲ್ಲೂ ರಾಹುಲ್ ಜಯಗಳಿಸಿದರು.

ಆದರೆ ಕೀಪಿಂಗ್‌ ಮಾಡುತ್ತ ಬ್ಯಾಟಿಂಗ್‌ನಲ್ಲಿ ರಾಹುಲ್ ದುರ್ಬಲರಾಗುವರೇ ಎಂಬ ಪ್ರಶ್ನೆಗಳು ಕೇಳಿಬಂದವು. ಈಗಲೂ ಅಂತಹ ಸಂದೇಹ ಇದೆ. ಆದರೆ, ಅದನ್ನು ಅವರ ಬಾಲ್ಯದ ಕೋಚ್ ಜಯರಾಜ್ ಸ್ಯಾಮುವೆಲ್ ತಳ್ಳಿ ಹಾಕುತ್ತಾರೆ.

‘ಆತನ ಪ್ರತಿಭೆ ಮತ್ತು ಪರಿಶ್ರಮ ಆಗಾಧವಾದದ್ದು. ಆರಂಭದ ದಿನಗಳಿಂದಲೂ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ಆಗಿದ್ದ ರಾಹುಲ್, ಮಂಗಳೂರು ವಲಯ ತಂಡಕ್ಕೆ ಆಡಿದ್ದರು. ಆಗಲೂ ವಿಕೆಟ್‌ಕೀಪರ್ ಆಗಿದ್ದರು. ವಯೋಮಿತಿ ವಿಭಾಗದ ರಾಜ್ಯ ತಂಡಗಳಲ್ಲಿ ಆಡುವಾಗಲೂ ಕೀಪಿಂಗ್ ಮಾಡಿದ್ದಾರೆ. ಅದರಿಂದಾಗಿ ಅವರಿಗೆ ಕೀಪಿಂಗ್ ಕಷ್ಟವಾಗುವುದಿಲ್ಲ’ ಎಂದು ಮಂಗಳೂರಿನಲ್ಲಿರುವ ಜಯರಾಜ್ ಸ್ಯಾಮುಯೆಲ್ ಹೇಳುತ್ತಾರೆ.

ತಮ್ಮ ಹತ್ತನೇ ವಯಸ್ಸಿನಲ್ಲಿಯೇ ರಾಹುಲ್ ಜಯರಾಜ್ ಅವರ ಅಕಾಡೆಮಿಯಲ್ಲಿ ಕ್ರಿಕೆಟ್ ಕಲಿಯಲು ಆರಂಭಿಸಿದ್ದರು. ರಾಹುಲ್ ವೃತ್ತಿಜೀವನದ ಯಶಸ್ಸಿನಲ್ಲಿ ಜಯರಾಜ್ ಅವರ ಕಾಣಿಕೆಯೂ ಮಹತ್ವದ್ದಾಗಿದೆ.

‘ವಿಕೆಟ್‌ಕೀಪಿಂಗ್‌ನಿಂದ ರಾಹುಲ್ ಬ್ಯಾಟಿಂಗ್‌ಗೆ ಯಾವುದೇ ತೊಂದರೆ ಆಗುವುದಿಲ್ಲ. ಬದಲಿಗೆ ಇನ್ನಷ್ಟು ಉತ್ಕೃಷ್ಟಗೊಳ್ಳುತ್ತದೆ. ಕೀಪಿಂಗ್ ಮಾಡುವಾಗ ಪ್ರತಿಯೊಂದು ಎಸೆತಕ್ಕೂ ಸ್ಪಂದಿಸಲೇಬೇಕು. ಅದರಿಂದಾಗಿ ಚೆಂಡಿನ ಚಲನೆ, ಪಿಚ್‌ ಗುಣಮಟ್ಟ ಮತ್ತು ಬೇರೆ ಬೇರೆ ಬ್ಯಾಟ್ಸ್‌ಮನ್‌ಗಳ ಕೌಶಲಗಳನ್ನು ಹತ್ತಿರದಿಂದ ನೋಡುತ್ತಾರೆ. ಅವು ಮನದಲ್ಲಿ ಅಚ್ಚಾಗುತ್ತವೆ. ಅದರಿಂದ ಅವರ ಬ್ಯಾಟಿಂಗ್ ಮತ್ತಷ್ಟು ಪರಿಪಕ್ವಗೊಳ್ಳುತ್ತದೆ. ರಾಹುಲ್, ಮಾನಸಿಕವಾಗಿಯೂ ಬಹಳ ಗಟ್ಟಿಗ’ ಎಂದು ಜಯರಾಜ್ ವಿಶ್ಲೇಷಿಸುತ್ತಾರೆ.‌

ರಾಹುಲ್ ದ್ರಾವಿಡ್ ಅವರಿಗೂ ಇಂತಹ ಸವಾಲು ಎದುರಾಗಿತ್ತು. ಸೌರವ್ ಗಂಗೂಲಿ ನಾಯಕತ್ವದ ತಂಡದಲ್ಲಿ ಆಡುವಾಗ ಕೀಪಿಂಗ್ ಮಾಡಬೇಕಾದ ಸಂದರ್ಭ ಬಂದಿತ್ತು. ಚತುರ ಮತ್ತು ಚುರುಕಾದ ಫೀಲ್ಡರ್‌ ಆಗಿದ್ದ ದ್ರಾವಿಡ್‌ಗೆ ಕೀಪಿಂಗ್ ಕಷ್ಟವಾಗಲಿಲ್ಲ. ಫಿಟ್‌ನೆಸ್‌ ಮತ್ತು ಮನೋದಾರ್ಢ್ಯ ಬಲವಾಗಿದ್ದ ದ್ರಾವಿಡ್ ಅದರಲ್ಲೂ ಸೈ ಎನಿಸಿಕೊಂಡಿದ್ದರು. ಈಗ ಕನ್ನಡನಾಡಿನ ಮತ್ತೊಬ್ಬ ರಾಹುಲ್ ಮುಂದೆ ಅಂತಹ ಸವಾಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT