ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ: ರಾಹುಲ್ ಮನದಾಳದ ಮಾತು

Published 6 ಜುಲೈ 2024, 7:09 IST
Last Updated 6 ಜುಲೈ 2024, 7:09 IST
ಅಕ್ಷರ ಗಾತ್ರ

ಬೆಂಗಳೂರು: 'ತಂಡದಲ್ಲಿ ವೈಫಲ್ಯದ ಭಯ ಇಲ್ಲದ ಸುರಕ್ಷಿತ ವಾತಾವರಣ ಸೃಷ್ಟಿ ಮಾಡುವುದೇ ನನ್ನ ಗುರಿಯಾಗಿತ್ತು' ಎಂದು ಟೀಮ್ ಇಂಡಿಯಾದ ನಿರ್ಗಮಿತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟೀಮ್ ಇಂಡಿಯಾದ ಜೊತೆ ಕೋಚಿಂಗ್ ಅನುಭವಗಳ ಕುರಿತು ರಾಹುಲ್ ದ್ರಾವಿಡ್ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಬಿಸಿಸಿಐ ವಿಡಿಯೊ ಹಂಚಿಕೊಂಡಿದೆ.

'ಕೋಚಿಂಗ್ ಮಾಡುವುದರಲ್ಲಿ ಮಾತ್ರ ನಾನು ನಂಬಿಕೆ ಇಡುವುದಿಲ್ಲ. ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದರೊಂದಿಗೆ ಯಶಸ್ಸಿಗಾಗಿ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ಮುಖ್ಯವೆನಿಸುತ್ತದೆ' ಎಂದು ಹೇಳಿದ್ದಾರೆ.

'ತಂಡದಲ್ಲಿ ವೃತ್ತಿಪರ, ಸುರಕ್ಷಿತ ಹಾಗೂ ವೈಫಲ್ಯದ ಭಯ ಇಲ್ಲದ ವಾತಾವರಣ ಸೃಷ್ಟಿ ಮಾಡುವುದೇ ನನ್ನ ಜವಾಬ್ದಾರಿಯಾಗಿತ್ತು. ಆಟಗಾರರನ್ನು ಮತ್ತಷ್ಟು ಸಾಧನೆ ಮಾಡಲು ಪ್ರೇರಿಸುವುದಕ್ಕೆ ಆದ್ಯತೆ ನೀಡಿದ್ದೆ' ಎಂದು ಹೇಳಿದ್ದಾರೆ.

ಕೋಚ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ, 2024ರ ಟಿ20 ವಿಶ್ವಕಪ್ ಜಯಿಸಿತು.

'ತಂಡದಲ್ಲಿ ಪದೇ ಪದೇ ಬದಲಾವಣೆ ಬಯಸಿರಲಿಲ್ಲ. ಸ್ಥಿರತೆ ಕಾಯ್ದುಕೊಳ್ಳುವುದರತ್ತ ಗಮನ ಹರಿಸುತ್ತೇನೆ. ಆದರೆ ಕೋವಿಡ್ ಬಳಿಕ ನನ್ನ ಕೋಚಿಂಗ್‌ನ ಆರಂಭಿಕ ಕಾಲದಲ್ಲಿ ಗಾಯ ಹಾಗೂ ಇತರೆ ಕಾರಣದಿಂದಾಗಿ ಹೆಚ್ಚಿನ ಬದಲಾವಣೆ ಮಾಡಬೇಕಾಯಿತು. ಇದರಿಂದಾಗಿ ತುಂಬಾ ಯುವ ಆಟಗಾರರಿಗೆ ಉತ್ತಮ ಅವಕಾಶ ದೊರೆಯಿತು' ಎಂದು ತಿಳಿಸಿದ್ದಾರೆ.

'ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಯುವ ಕ್ರಿಕೆಟಿಗರು ಬೇಗನೇ ಒಗ್ಗಿಕೊಂಡರು. ಇದರಿಂದಾಗಿ ಬಲಿಷ್ಠ ತಂಡವನ್ನು ಕಟ್ಟಲು ನೆರವಾಯಿತು' ಎಂದು ಉಲ್ಲೇಖಿಸಿದ್ದಾರೆ.

'ಎಲ್ಲ ಮೂರು ಮಾದರಿಯಲ್ಲೂ ಟೀಮ್ ಇಂಡಿಯಾದ ನಿರ್ವಹಣೆಯನ್ನು ರಾಹುಲ್ ಶ್ಲಾಘಿಸಿದರು. ನಾವು ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಪೂರ್ವ ಸಿದ್ಧತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದೆವು' ಎಂದು ತಿಳಿಸಿದರು.

ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರನ್ನು ರಾಹುಲ್ ಶ್ಲಾಘಿಸಿದ್ದಾರೆ. 'ಓರ್ವ ವ್ಯಕ್ತಿ, ಆಟಗಾರ ಹಾಗೂ ನಾಯಕರಾಗಿ ರೋಹಿತ್ ಅವರ ಪ್ರಗತಿಯ ಬಗ್ಗೆ ತುಂಬಾನೇ ಖುಷಿಪಡುತ್ತೇನೆ' ಎಂದು ಹೇಳಿದ್ದಾರೆ.

'ಈ ಪ್ರಯಾಣದಲ್ಲಿ ನಾವು ಉತ್ತಮ ಫಲಿತಾಂಶವನ್ನು ದಾಖಲಿಸಿದ್ದೇವೆ. ಇದಕ್ಕಿಂತಲೂ ಮಿಗಿಲಾಗಿ ಟೀಮ್ ಇಂಡಿಯಾ ಆಟಗಾರರೊಂದಿಗಿನ ಬಾಂಧವ್ಯ, ಗೆಳೆತನವು ಸದಾ ಜೊತೆಗಿರುತ್ತದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT