ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ: ಕೊಹ್ಲಿ

Published 5 ಜುಲೈ 2024, 3:03 IST
Last Updated 5 ಜುಲೈ 2024, 3:03 IST
ಅಕ್ಷರ ಗಾತ್ರ

ಮುಂಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಮುಂಬೈಯಲ್ಲಿ ಗುರುವಾರ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ತೆರೆದ ಬಸ್‌ನಲ್ಲಿ ಮೆರವಣಿಗೆ ಮಾಡಿದ ಆಟಗಾರರಿಗೆ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಜಯಘೋಷ ಹೇಳಿದರು. ಬಳಿಕ ಕಿಕ್ಕಿರಿದು ತುಂಬಿದ ವಾಂಖೆಡೆ ಮೈದಾನದಲ್ಲೂ ಸಂಭ್ರಮ ಆಚರಿಸಲಾಯಿತು.

'ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ. ನಾವು ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಅಳುತ್ತಿದ್ದೆವು' ಎಂದು ವಿಶ್ವಕಪ್ ಗೆಲುವಿನ ಸ್ಮರಣೀಯ ಕ್ಷಣಗಳನ್ನು ಕೊಹ್ಲಿ ಹಂಚಿಕೊಂಡಿದ್ದಾರೆ.

2011ರಲ್ಲಿ ಇದೇ ಮೈದಾನದಲ್ಲಿ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೈದಾನಕ್ಕೆ ಸುತ್ತು ಬಂದಿದ್ದರು. 21 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ನ ಭಾರವನ್ನು ಹೊತ್ತಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದರು. 'ಈಗ ನಾನು ಹಾಗೂ ರೋಹಿತ್, ಟ್ರೋಫಿ ಮರಳಿ ತರಲು ಭಾರವನ್ನು ಹೊತ್ತುಕೊಂಡಿದ್ದೇವೆ ಎಂದು ಅಂದುಕೊಳ್ಳುತ್ತೇವೆ' ಎಂದು ವಿರಾಟ್ ತಿಳಿಸಿದ್ದಾರೆ.

'ಅಂದು ಹಿರಿಯ ಆಟಗಾರರು ಭಾವುಕರಾಗಿದ್ದಾಗ ಅವರ ಭಾವನೆಗಳನ್ನು ಅಷ್ಟೊಂದು ಆಳವಾಗಿ ಗ್ರಹಿಸಲು ಸಾಧ್ಯವಾಗಿರಲಿಲ್ಲ. ಆದರೆ ನನಗೀಗ ಎಲ್ಲವೂ ಅರ್ಥವಾಗುತ್ತಿದೆ' ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

ಟೀಮ್ ಇಂಡಿಯಾ ಆಟಗಾರರ ಸಂಭ್ರಮ

(ಪಿಟಿಐ ಚಿತ್ರ)

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ನಲ್ಲಿ ಏಳು ರನ್ ಅಂತರದ ಜಯ ಗಳಿಸಿದ್ದ ಟೀಮ್ ಇಂಡಿಯಾ ಎರಡನೇ ಬಾರಿಗೆ ಟ್ವೆಂಟಿ-20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಸಮಯೋಚಿತ ಅರ್ಧಶತಕ ಗಳಿಸಿದ್ದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇನಿಂಗ್ಸ್ ಬ್ರೇಕ್ ವೇಳೆಯೇ ನನಗೆ ಈ ಪಂದ್ಯ ಕೊನೆಯದ್ದು ಎಂದು ತಿಳಿದಿತ್ತು. 'ಈಗ ಮುಂದಿನ ಪೀಳಿಗೆಗೆ ವಹಿಸುವ ಸಮಯ' ಎಂದು 35 ವರ್ಷದ ಕೊಹ್ಲಿ ತಮ್ಮ ವಿದಾಯದ ಕುರಿತು ತಿಳಿಸಿದರು.

ಇದೇ ವೇಳೆ ಜಸ್‌ಪ್ರೀತ್ ಬೂಮ್ರಾ ಅವರನ್ನು ತಲೆಮಾರಿನ ಆಟಗಾರ ಎಂದು ವಿರಾಟ್ ಕೊಹ್ಲಿ ಗುಣಗಾನ ಮಾಡಿದರು. ಟೂರ್ನಿಯುದ್ಧಕ್ಕೂ ನಿಖರ ದಾಳಿ ಸಂಘಟಿಸಿದ್ದ ಬೂಮ್ರಾ, 15 ವಿಕೆಟ್ ಕಬಳಿಸಿದ್ದರಲ್ಲದೆ ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ಒಡನಾಟವನ್ನು ಕೊಹ್ಲಿ ಸ್ಮರಿಸಿದರು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಹೇಳಿದರು.

ಇಂದಿನ ಈ ರಾತ್ರಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ನುಡಿದರು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT