ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ ಉತ್ತೇಜನಕ್ಕೆ ಅಕಾಡೆಮಿ: ಕೆಎಸ್‌ಸಿಎ ಕಾರ್ಯದರ್ಶಿ  ಸಂತೋಷ ಮೆನನ್

Last Updated 3 ಮಾರ್ಚ್ 2021, 10:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ವಲಯ ವ್ಯಾಪ್ತಿಯ ಮಹಿಳಾ ಕ್ರಿಕೆಟಿಗರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ತರಬೇತಿ ಒದಗಿಸಲು ಮುಂದಿನ ವರ್ಷ ಅಕಾಡೆಮಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು.

ಬುಧವಾರ ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ‘ಆಟಗಾರ್ತಿಯರು ಅಭ್ಯಾಸ ಹಾಗೂ ಪಂದ್ಯಗಳನ್ನಾಡಲು ಬೆಂಗಳೂರನ್ನೇ ನೆಚ್ಚಿಕೊಳ್ಳಬೇಕಾಗಿದೆಯಲ್ಲ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

‘ಲೋಧಾ ಸಮಿತಿ ಶಿಫಾರಸುಗಳ ಪಾಲನೆ ಮತ್ತು ಕೋವಿಡ್‌ನಿಂದಾಗಿ ಕ್ರಿಕೆಟ್ ಮೈದಾನಗಳಲ್ಲಿ ಕಟ್ಟಡ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ತಡವಾಗಿದೆ. 2016ರಲ್ಲಿ ಬೆಂಗಳೂರು ಸಮೀಪದ ಆಲೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ ಕ್ರೀಡಾಂಗಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಮೂರೂ ಕಡೆ ಮೈದಾನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣದ ಕೆಲಸ ಬಾಕಿ ಉಳಿದಿದೆ. ಇದಕ್ಕಾಗಿ ತಲಾ ₹25 ಕೋಟಿ ಮೀಸಲಿಡಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಧಾರವಾಡ ವಲಯ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ.

‘ಹುಬ್ಬಳ್ಳಿಯಲ್ಲಿ ಕಟ್ಟಡ ಮತ್ತು ಕ್ಲಬ್‌ ಹೌಸ್‌ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಈಜುಕೊಳ, ಸಮಾರಂಭಗಳಿಗೆ ಸಭಾಂಗಣ, ಸಂಕೀರ್ಣ ಸೇರಿದಂತೆ ಹಲವು ಸೌಲಭ್ಯಗಳು ಲಭಿಸಲಿವೆ. ಇದರಿಂದ ಸ್ಥಳೀಯವಾಗಿಯೇ ಆದಾಯ ಗಳಿಸಿ ಕ್ರಿಕೆಟ್‌ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದರು.

‘ಕೆಎಸ್‌ಸಿಎ ವತಿಯಿಂದ ಕಾರವಾರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದ್ದು, ನೋಂದಣಿಯಷ್ಟೇ ಬಾಕಿಯಿದೆ. ಗದಗನ ಹೊಸ ಕ್ರೀಡಾಂಗಣದಲ್ಲಿ ಇನ್ನೆರೆಡು ವರ್ಷಗಳಲ್ಲಿ ಸ್ಪರ್ಧಾತ್ಮಕ ಪಂದ್ಯಗಳನ್ನು ಆಯೋಜಿಸಲು ಅಗತ್ಯವಿರುವಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ಜೆ. ಅಭಿರಾಮ್‌, ಆಡಳಿತ ಮಂಡಳಿ ಸದಸ್ಯ ತಿಲಕ್‌ ನಾಯ್ಡು, ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ, ಅಧ್ಯಕ್ಷ ವೀರಣ್ಣ ಸವಡಿ, ಮಾಜಿ ನಿಮಂತ್ರಕ ಬಾಬಾ ಭೂಸದ, ಧಾರವಾಡ ವಲಯದ ಕ್ರಿಕೆಟ್‌ ಟೂರ್ನಿ ಸಮಿತಿ ಮುಖ್ಯಸ್ಥ ಅಲ್ತಾಫ್‌ ಕಿತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT