ಶುಕ್ರವಾರ, ಜೂನ್ 5, 2020
27 °C

ಐಪಿಎಲ್‌ಗಿಂತ ಹೆಚ್ಚು ಆದ್ಯತೆ ವಿಶ್ವಕಪ್‌ಗೆ ಸಿಗಲಿ: ಅಲನ್ ಬಾರ್ಡರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೆಲ್ಬೋರ್ನ್‌: ಜಗತ್ತಿನಾದ್ಯಂತ ಭೀತಿ ಉಂಟುಮಾಡಿರುವ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕೆ ಸಿಗದಿರುವುದರಿಂದ ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಟೂರ್ನಿ ನಡೆಯುವುದು ಅನುಮಾನವಾಗಿದೆ. ಹಾಗೇನಾದರೂ ಆದಲ್ಲಿ, ಭಾರತದಲ್ಲಿ ಐಪಿಎಲ್‌ ನಡೆಸಲು ಸಾಧ್ಯವಾಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್‌ ಬಾರ್ಡರ್‌ ಅವರು, ಭಾರತದ ಲೀಗ್‌ವೊಂದಕ್ಕೆ ವಿಶ್ವಕಪ್‌ಗಿಂತ ಹೆಚ್ಚು ಆದ್ಯತೆ ಸಿಗಬಾರದು ಎಂದು ಹೇಳಿದ್ದಾರೆ.

ಕ್ರೀಡಾ ಜಗತ್ತಿನ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್‌ ಅನ್ನು ಈಗಾಗಲೇ ಮುಂದೂಡಲಾಗಿದೆ. ಹೀಗಿದ್ದರೂ ಟಿ20 ವಿಶ್ವಕಪ್‌ ಆಯೋಜನೆ ಬಗ್ಗೆ ಚರ್ಚೆ ಮುಂದುವರಿದಿದೆ. ಅಕ್ಟೋಬರ್‌ 18ರಿಂದ ನವೆಂಬರ್‌ 15ರ ವರೆಗೆ ಟಿ20 ವಿಶ್ವಕಪ್‌ ನಡೆಸಲು ಉದ್ದೇಶಿಸಲಾಗಿದೆ. ಮಾರ್ಚ್‌ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಕೋವಿಡ್‌–19 ಭೀತಿಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

‘ಈ ವಿಚಾರದಲ್ಲಿ ನನಗೆ ಸಂತೋಷವಿಲ್ಲ. ವಿಶ್ವಮಟ್ಟದ ಟೂರ್ನಿಯು ಸ್ಥಳೀಯ ಟೂರ್ನಿಗಿಂತ ಹೆಚ್ಚಿನ ಆದ್ಯತೆ ಗಳಿಸಬೇಕು. ಒಂದು ವೇಳೆ ಟಿ20 ವಿಶ್ವಕಪ್‌ ಸಾಧ್ಯವಾಗದಿದ್ದರೆ, ಐಪಿಎಲ್‌ ನಡೆಯಬಹುದು ಎಂದು ನಾನು ಭಾವಿಸುವುದಿಲ್ಲ’ ಎಂದು ಎಬಿಸಿ ರೆಡಿಯೊ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

‘ಈ ರೀತಿಯ (ವಿಶ್ವಕಪ್‌ ಬದಲು ಐಪಿಎಲ್‌ ನಡೆಸುವ) ನಿರ್ಧಾರವನ್ನು ನಾನು ಪ್ರಶ್ನಿಸುತ್ತೇನೆ. ಇದು ಕೇವಲ ಹಣ ದೋಚುವಿಕೆ. ಅಲ್ಲವೇ?’ ಎಂದಿದ್ದಾರೆ. ಮುಂದುವರಿದು, ‘ಖಂಡಿತವಾಗಿಯೂ ವಿಶ್ವಕಪ್‌ಗೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ವಿಶ್ವಕಪ್‌ ಮುಂದೂಡಿ ಐಪಿಎಲ್‌ಗೆ ಅವಕಾಶ ನೀಡುವುದು, ಕ್ರೀಡಾ ಜಗತ್ತಿನ ಕೆಟ್ಟ ನಡವಳಿಕೆಯಾಗುತ್ತದೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ, ಶ್ರೀಮಂತ ಕ್ರಿಕೆಟ್‌ ಲೀಗ್‌ ಆಯೋಜನೆಗೆ ಪ್ರತಿಭಟನಾರ್ಥವಾಗಿ ಯಾವುದೇ ದೇಶಗಳು ಮತ್ತು ಮಂಡಳಿಗಳು ತಮ್ಮ ಆಟಗಾರರನ್ನು ಕಳುಹಿಸಬಾರದು. ಆದರೆ, ವಿಶ್ವ ಕ್ರಿಕೆಟ್‌ ಈ ರೀತಿ ಆಗಲು ಅವಕಾಶ ನೀಡುತ್ತದೆ ಎಂದು ಅಂದುಕೊಂಡಿಲ್ಲ’ ಎಂದು ಹೇಳಿದ್ದಾರೆ.

‘ಭಾರತ ಅಂತರರಾಷ್ಟ್ರೀಯ ಕ್ರಿಕೆಟ್‌ ಅನ್ನು ಮೀರಿ ಸಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಹಾಗೇನಾದರು ಆದರೆ, ಅದು ತಪ್ಪು ಹಾದಿಯಲ್ಲಿ ಸಾಗಲಿದೆ’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು