ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆರ್‌ಸಿಬಿಯ ಹೊಸ ಅಧ್ಯಾಯ – ವಿರಾಟ್ ಕೊಹ್ಲಿ

Published 19 ಮಾರ್ಚ್ 2024, 23:20 IST
Last Updated 19 ಮಾರ್ಚ್ 2024, 23:20 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಮಂಗಳವಾರ ರಾತ್ರಿ ಎಂದಿನಂತೆ ಇರಲಿಲ್ಲ. ಅಲ್ಲಿ ಚೆಂಡು ಬ್ಯಾಟಿಗೆ ಅಪ್ಪಳಿಸುವ ಸದ್ದಾಗಲೀ, ಹೌ ಇಸ್‌ ದ್ಯಾಟ್, ಕ್ಯಾಚ್ ಇಟ್ ಕೂಗುಗಳಾಗಲೀ ಇರಲಿಲ್ಲ. ಆದರೆ ಕನ್ನಡ ಚಿತ್ರಗೀತೆಗಳ  ಕಲರವ ಇತ್ತು. ರಘು ದೀಕ್ಷಿತ್‌ ಸಂಗೀತದ ಅಬ್ಬರವಿತ್ತು. ಇಂಗ್ಲೆಂಡ್‌ನ ಅಲೆನ್ ವಾಕರ್ ಅವರ ಚೆಂದದ ಇಂಗ್ಲಿಷ್ ಗಾಯನ ಮತ್ತು ಡಿಜಿಟಲ್ ಕೌಶಲದ ದೃಶ್ಯಾವಳಿಗಳಿದ್ದವು. ಚೆನ್ನಾಟವಾಡುತ್ತಿದ್ದ ರಂಗುರಂಗಿನ ಬೆಳಕಿನ ಕಿರಣಗಳು ಹಸಿರು ಹುಲ್ಲಿನ ಮೇಲೆ ರಂಗೋಲಿ ಬಿಡಿಸಿದ್ದವು...

ಇದೆಲ್ಲವನ್ನೂ ಮೀರಿಸುವಂತೆ ಕ್ರೀಡಾಂಗಣದಲ್ಲಿ ಸೇರಿದ್ದ  25 ಸಾವಿರಕ್ಕೂ ಹೆಚ್ಚು ಜನರ ‘ಆರ್‌ಸಿಬಿ..ಆರ್‌ಸಿಬಿ..‘,  ‘ಕೊಹ್ಲಿ..ಕೊಹ್ಲಿ..’  ಎಂಬ ಕೂಗುಗಳು ಪ್ರತಿಧ್ವನಿಸಿದವು. ಮಧ್ಯಾಹ್ನ 2 ಗಂಟೆಗೆ ಬಿರುಬಿಸಿಲಿನಲ್ಲಿಯೇ ಕಿಲೋಮೀಟರ್‌ ಗಟ್ಟಲೇ ಸಾಲುಗಟ್ಟಿ ಕ್ರೀಡಾಂಗಣಕ್ಕೆ ಪ್ರವೇಶಿಸಿದವರು, ರಾತ್ರಿ ಎಂಟರ ವರೆಗೂ  ‘ಆರ್‌ಸಿಬಿ ಅನ್‌ಬಾಕ್ಸ್‌’ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಮತ್ತು ಆಟಗಾರ್ತಿಯರನ್ನು ಕಣ್ತುಂಬಿಕೊಂಡರು.  ‌

ಮನರಂಜನೆ ಕಾರ್ಯಕ್ರಮಗಳ ನಂತರ ವೇದಿಕೆಯಲ್ಲಿದ್ದ ವಿರಾಟ್ ಕೊಹ್ಲಿ, ‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದು ಕನ್ನಡದಲ್ಲಿ ಉದ್ಘರಿಸಿದರು. ಅವರು ಡಿಜಿಟಲ್ ಬಜರ್ ಒತ್ತಿದಾಗ ಬೃಹತ್ ಪರದೆಯ ಮೇಲೆ ಮೂಡಿದ ವಿಡಿಯೊ ತುಣುಕು ಗಳಲ್ಲಿ ನಾಯಕ ಫಫ್ ಡುಪ್ಲೆಸಿ, ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಮತ್ತು ವಿರಾಟ್ ಅವರು ಹೊಸ ಜೆರ್ಸಿಯಲ್ಲಿ ಕಾಣಿಸಿಕೊಂಡರು. ಜೆರ್ಸಿಯ ಮೇಲ್ಭಾಗ ನೀಲಿ ಮತ್ತು ಕೆಳಭಾಗದಲ್ಲಿ ಕೆಂಪುಬಣ್ಣಗಳು ಗಮನ ಸೆಳೆದವು. ಇದೇ ಹೊತ್ತಿನಲ್ಲಿ ತಂಡದ ಎಲ್ಲ ಆಟಗಾರರು ಮತ್ತು ನೆರವು ಸಿಬ್ಬಂದಿಯು ವೇದಿಕೆಯಲ್ಲಿದ್ದು ಅಭಿಮಾನಿಗಳತ್ತ ಕೈಬೀಸಿದರು.

ಬ್ಯಾಂಗಲೋರ್– ಬೆಂಗಳೂರು: ಇದೇ ಕಾರ್ಯಕ್ರಮದಲ್ಲಿ ತಂಡದ ಹೆಸರಿನಲ್ಲಿದ್ದ ಬ್ಯಾಂಗಲೋರ್ (ಇಂಗ್ಲಿಷ್ ಪದ) ಅನ್ನು ಬೆಂಗಳೂರು ಎಂದು ಬದಲಾಯಿಸಲಾಯಿತು. ಅಲ್ಲದೇ ಲೋಗೊದ ಹೊಸ ವಿನ್ಯಾಸವನ್ನೂ ಬಿಡುಗಡೆಗೊಳಿಸಲಾಯಿತು. ಕನ್ನಡ ಚಿತ್ರತಾರೆಗಳಾದ ಶಿವರಾಜ್‌ ಕುಮಾರ್, ರಿಷಭ್ ಶೆಟ್ಟಿ, ಸುದೀಪ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಬದಲಾವಣೆಯ ಕುರಿತು ಮಾಡಿದ್ದ ವಿಡಿಯೊ ಪ್ರದರ್ಶಿಸಿದಾಗ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿದವು.

ಆರ್‌ಸಿಬಿ ಭುವನಕ್ಕೆ ವಿನಯ್: ‘ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಕ್ರಿಕೆಟಿಗ  ಆರ್. ವಿನಯಕುಮಾರ್ ಅವರಿಗೆ ಆರ್‌ಸಿಬಿ ಹಾಲ್‌ ಆಫ್‌ ಫೇಮ್‌ ಗೌರವ ನೀಡಲಾಯಿತು. ಈ ಹಿಂದೆ ಅವರು ಕೆಲವು ವರ್ಷ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. ಮಧ್ಯಮವೇಗಿ ವಿನಯ್ ಅವರು ಕರ್ನಾಟಕ ತಂಡವು ಎರಡು ಬಾರಿ ರಣಜಿ ಟ್ರೋಫಿ ಜಯಿಸಿದಾಗ ನಾಯಕರಾಗಿದ್ದರು. ಭಾರತ ತಂಡದಲ್ಲಿಯೂ ಆಡಿದ್ದರು.

ನೆಟ್ಸ್‌ ವೀಕ್ಷಿಸಿದ ಅಭಿಮಾನಿಗಳು: ಸಂಜೆಯ ಕಾರ್ಯಕ್ರಮಕ್ಕೆ ಮಧ್ಯಾಹ್ನದಿಂದಲೇ ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬಂದಿದ್ದರು.  ಇದೇ ಹೊತ್ತಿನಲ್ಲಿ ನಡೆಯುತ್ತಿದ್ದ ಆಟಗಾರರ ನೆಟ್ಸ್‌ ಅಭ್ಯಾಸವನ್ನು ನೋಡಿದರು. ಇನ್ನೊಂದೆಡೆ ಬರ್ಫಿ ಬ್ಯಾಂಡ್‌ನವರ ಸಂಗೀತ ನಡೆಯಿತು.

ಇದೇ 22ರಂದು ಚೆನ್ನೈನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಲಿದೆ.

ಟ್ರೋಫಿಯೊಂದಿಗೆ ಮಿಂಚಿದ ಕ್ವೀನ್ಸ್‌

ಎರಡು ದಿನಗಳ ಹಿಂದಷ್ಟೇ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯಲ್ಲಿ ಕಪ್ ಜಯಿಸಿದ್ದ ಸ್ಮೃತಿ ಮಂದಾನ ನಾಯಕತ್ವದ ಬಳಗವು ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಸ್ಮೃತಿ, ಕರ್ನಾಟಕದ ಶ್ರೇಯಾಂಕ ಪಾಟೀಲ, ಸೋಫಿ ಮಾಲಿನೆ ಸೇರಿದಂತೆ ಎಲ್ಲ ಆಟಗಾರ್ತಿಯರು ಮತ್ತು ಸಿಬ್ಬಂದಿಯು ಟ್ರೋಫಿಯನ್ನು ಎತ್ತಿ ಹಿಡಿದು ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿದರು. ಅಭಿಮಾನಿ ಗಳತ್ತ ಟ್ರೋಫಿ ತೋರಿಸಿ ಕೈ ಬೀಸಿ ಅಭಿನಂದಿಸಿದರು. ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT