ಮಂಗಳವಾರ, ಆಗಸ್ಟ್ 3, 2021
26 °C

ಕೋವಿಡ್ ಭೀತಿ: ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿದ ವಿಂಡೀಸ್‌ನ ಮೂವರು ಆಟಗಾರರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಂಡನ್: ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯು, ವೆಸ್ಟ್‌ ಇಂಡೀಸ್‌ ವಿರುದ್ಧ ಖಾಲಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಯೋಜಿಸುವ ಯೋಜನೆಯಲ್ಲಿದೆ. ಇದು ಕ್ರಿಕೆಟ್‌ ಚಟುವಟಿಕೆಗಳು ಮತ್ತೊಮ್ಮೆ ಆರಂಭವಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಖುಷಿ ನೀಡಿದೆ. ಟೂರ್ನಿಯು ಜುಲೈ 8 ರಿಂದ ಆರಂಭವಾಗಲಿದೆ.

ಹ್ಯಾಂಪ್‌ಶೈರ್‌ನಲ್ಲಿರುವ ಏಜಸ್‌ ಬೌಲ್‌ ಮತ್ತು ಲ್ಯಾಂಕ್‌ಶೈರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ವೆಸ್ಟ್‌ ಇಂಡೀಸ್‌ ತಂಡವು ಕ್ವಾರಂಟೈನ್‌ ಮತ್ತು ತರಬೇತಿ ಸಲುವಾಗಿ ಇದೇ ತಿಂಗಳು 9ರಂದು ಓಲ್ಡ್‌ ಟ್ರಾಫರ್ಡ್‌ಗೆ ಬಂದಿಳಿಯಲಿದೆ.

ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಮಂಡಳಿಯು ಬುಧವಾರ 14 ಆಟಗಾರರ ತಂಡ ಮತ್ತು 11 ಮೀಸಲು ಆಟಗಾರ ಪಟ್ಟಿಯನ್ನು ಪ್ರವಾಸಕ್ಕೆ ಅಂತಿಮಗೊಳಿಸಿದೆ. ಆದರೆ, ಈ ತಂಡದ ಕೆಲವು ಆಟಗಾರರು ಇಂಗ್ಲೆಂಡ್‌ ಪ್ರವಾಸದಿಂದ ಹಿಂದೆದಿದ್ದಾರೆ.

ತಂಡದ ಆಯ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ವಿಂಡೀಸ್‌ ಮಂಡಳಿ, ‘ಇಂಗ್ಲೆಂಡ್ ಸರ್ಕಾರದ ಅಂತಿಮ ಅನುಮೋದನೆ ದೊರೆತಿರುವ ಮೂರು ಪಂದ್ಯಗಳ ವಿಸ್ಡನ್‌ ಟ್ರೋಫಿ ಟೂರ್ನಿಯಲ್ಲಿ ವಿಂಡೀಸ್‌ ಆಡಲಿದೆ. ಜುಲೈ 8ರಿಂದ ಪಂದ್ಯಗಳು ಆರಂಭವಾಗಲಿವೆ. ಅದರಂತೆ ಪ್ರವಾಸ ಕೈಗೊಳ್ಳಲಿರುವ ಆಟಗಾರರಿಗೆ ಕೋವಿಡ್–19 ತಪಾಸಣೆ ನಡೆಸಿ, ಇದೇ 8 ರಂದು ಖಾಸಗೀ ವಿಮಾನಗಳಲ್ಲಿ ತೆರಳಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದೆ.

ಮುಂದುವರಿದು, ‘ಡರೇನ್‌ ಬ್ರಾವೊ, ಶಿಮ್ರೋನ್‌ ಹೆಟ್ಮೆಯರ್‌ ಮತ್ತು ಕೀಮೊ ಪೌಲ್‌ ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸಲಾಗುವುದು. ಈ ಹಿಂದೆಯೇ ಹೇಳಿರುವಂತೆ ಮುಂದಿನ ಟೂರ್ನಿಗಳಿಗೆ ತಂಡದ ಆಯ್ಕೆ ಮಾಡುವಾಗ ಈ ಮೂವರನ್ನು ಕಡೆಗಣಿಸುವುದಿಲ್ಲ’ ಎಂದಿದೆ.

ಕೋವಿಡ್‌–19 ಸೋಂಕು ಭೀತಿಯಿಂದಾಗಿ ಮಾರ್ಚ್‌ನಿಂದೀಚೆಗೆ ಕ್ರಿಕೆಟ್‌ ಚಟುವಟಿಗೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು