ಮಂಗಳವಾರ, ಡಿಸೆಂಬರ್ 6, 2022
21 °C

IPL ಗೆದ್ದು ಶ್ರೇಷ್ಠ ನಾಯಕನಾಗಲು ಸಾಧ್ಯವಿಲ್ಲ; ರೋಹಿತ್ ವಿರುದ್ಧ ನೆಟ್ಟಿಗರ ಕಿಡಿ

ಪ್ರಜಾವಾಣಿ ವೆಬ್ ಡೆಸ್ಕ್‌  Updated:

ಅಕ್ಷರ ಗಾತ್ರ : | |

ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಅಂತರದ ಹೀನಾಯ ಸೋಲು ಅನುಭವಿಸಿದೆ.

ಇಂದು (ನವೆಂಬರ್‌ 10 ರಂದು) ಅಡಿಲೇಡ್‌ನ ಓವಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತ್ತು. ವಿರಾಟ್‌ ಕೊಹ್ಲಿ (50) ಹಾಗೂ ಹಾರ್ದಿಕ್‌ ಪಾಂಡ್ಯ (63) ಅರ್ಧಶತಕ ಸಿಡಿಸಿ ನೆರವಾಗಿದ್ದರು.

ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ ಒಂದೂ ವಿಕೆಟ್‌ ಕಳೆದುಕೊಳ್ಳದೆ ಜಯದ ನಗೆ ಬೀರಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅಲೆಕ್ಸ್‌ ಹೇಲ್ಸ್‌ ಮತ್ತು ಜಾಸ್‌ ಬಟ್ಲರ್‌ ಜೋಡಿ ಮುರಿಯದ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 170 ರನ್‌ ಕಲೆಹಾಕಿತು.

ಇದನ್ನೂ ಓದಿ: 

ಹೇಲ್ಸ್‌ ಕೇವಲ 47 ಎಸೆತಗಳಲ್ಲಿ 7 ಸಿಕ್ಸರ್‌ ಮತ್ತು 4 ಬೌಂಡರಿ ಸಹಿತ 89 ರನ್‌ ಚಚ್ಚಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಬಟ್ಲರ್‌ 49 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 9 ಬೌಂಡರಿ ಸಹಿತ 80 ರನ್‌ ಸಿಡಿಸಿದರು. ಹೀಗಾಗಿ ಇನ್ನೂ ನಾಲ್ಕು ಓವರ್‌ ಬಾಕಿ ಇರುವಂತೆಯೇ ಇಂಗ್ಲೆಂಡ್‌ ಜಯ ಸಾಧಿಸಿತು. ಇದರೊಂದಿಗೆ ನವೆಂಬರ್‌ 13ರಂದು ಪಾಕಿಸ್ತಾನ ವಿರುದ್ಧ ಮೆಲ್ಬರ್ನ್‌ನಲ್ಲಿ ನಡೆಯುವ ಫೈನಲ್‌ಗೆ ಲಗ್ಗೆ ಇಟ್ಟಿದೆ.

ರೋಹಿತ್‌ ನಾಯಕತ್ವದ ಬಗ್ಗೆ ಟ್ವೀಟ್
2021ರ ಟಿ20 ವಿಶ್ವಕಪ್‌ ಟೂರ್ನಿ ವೇಳೆ ಭಾರತ ತಂಡ ಪಾಕಿಸ್ತಾನ ವಿರುದ್ಧ 10 ವಿಕೆಟ್‌ ಅಂತರದ ಸೋಲು ಕಂಡಿತ್ತು. ಆಗ ಕೊಹ್ಲಿ ನಾಯಕತ್ವದ ವಿರುದ್ಧ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಆ ಟೂರ್ನಿ ಬಳಿಕ ವಿರಾಟ್ ಕೊಹ್ಲಿ ಚುಟುಕು ಕ್ರಿಕೆಟ್‌ ತಂಡದ ನಾಯಕತ್ವ ತೊರೆದಿದ್ದರು.

ನಂತರ ಮೂರೂ ಮಾದರಿಯಲ್ಲಿ ಭಾರತ ತಂಡದ ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ನೇಮಿಸಲಾಗಿತ್ತು.

ಇದೀಗ ಇಂಗ್ಲೆಂಡ್‌ ವಿರುದ್ಧ ಭಾರತ 10 ವಿಕೆಟ್‌ ಸೋಲು ಅನಭವಿಸಿದ ಬೆನ್ನಲ್ಲೇ, ವಿರಾಟ್‌ ಅಭಿಮಾನಿಗಳು ಮತ್ತು ನೆಟ್ಟಿಗರು, ರೋಹಿತ್‌ ಶರ್ಮಾ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಮತ್ತೆ ಕೆಲವರು ಮಹೇಂದ್ರ ಸಿಂಗ್ ಧೋನಿ ನಾಯಕತ್ವವನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 

2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಪಾಕಿಸ್ತಾನ ವಿರುದ್ಧ 10 ವಿಕೆಟ್‌ ಅಂತರದ ಸೋಲು ಎದುರಾಗಿತ್ತು. ಆ ಪಂದ್ಯದಲ್ಲಿ ತಂಡದ ಪರವಾಗಿ ಏಕಾಂಗಿಯಾಗಿ ರನ್‌ ಗಳಿಸಿದ್ದರೂ, ಸೋಲಿಗೆ ವಿರಾಟ್‌ ಕೊಹ್ಲಿ ನಾಯಕತ್ವವೇ ಕಾರಣ ಎಂದು ಹೇಳಲಾಯಿತು. 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ ಅಂತರದ ಸೋಲು ಎದುರಾದಾಗ, ರೋಹಿತ್‌ ಶರ್ಮಾ ವೈಫಲ್ಯ ಅನುಭವಿಸಿದ್ದರೂ ಇತರ ಆಟಗಾರರು ಮತ್ತು ಬೌಲಿಂಗ್‌ ವಿಭಾಗ ಕಾರಣವಾಯಿತು ಎನ್ನಲಾಗುತ್ತಿದೆ ಎಂದು ಪಾರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಹಲವು ಭಾರತೀಯರು ಬಿಂಬಿಸಿರುವಂತೆ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಯಾವುದೇ ದೋಷ ಇರಲಿಲ್ಲ. ಐಪಿಎಲ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದ ನಾಯಕ ರೋಹಿತ್‌ ಶರ್ಮಾ ಕೇವಲ 2 ತಿಂಗಳ ಅಂತರದಲ್ಲಿ ಏಷ್ಯಾಕಪ್‌ ಮತ್ತು ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ವಿಫಲವಾಗಿದೆ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.

ವಿರಾಟ್‌ ಕೊಹ್ಲಿ ಕೆಟ್ಟ ನಾಯಕನಲ್ಲ ಎಂಬುದನ್ನು ಇದು (ಇಂಗ್ಲೆಂಡ್‌ ವಿರುದ್ಧದ ಸೋಲು) ಸಾಬೀತು ಮಾಡಿದೆ. ಅವರು ಭಾರತ ತಂಡದ ಶ್ರೇಷ್ಠ ನಾಯಕ ಆಗಿದ್ದರು ಎಂದು ವಿರಾಟ್‌ ಅಭಿಮಾನಿ ಆಯುಷ್ ಎನ್ನುವವರು ಬರೆದುಕೊಂಡಿದ್ದಾರೆ.

ಐಸಿಸಿ ಟೂರ್ನಿಗಳ ಬಗ್ಗೆ ಜ್ಞಾನವಿಲ್ಲದ ಕ್ರಿಕೆಟ್‌ ಪಂಡಿತರು, ಭಾರತ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಹೆಸರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಭಾರತ ತಂಡ ಏನನ್ನು ಸಾಧಿಸಿದೆ? ಭಾರತ ತಂಡ ಕೊಚ್ಚಿಹೋಗಿದೆ! ಇದು ವಿರಾಟ್‌ ಕೊಹ್ಲಿ ಅಥವಾ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡವಲ್ಲ. ಇದು ರೋಹಿತ್‌ ಶರ್ಮಾ ಅವರ ದುರ್ಬಲ ತಂಡ ಎಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರಷ್ಟೇ ವಿಶ್ವಕಪ್‌ ಆಡಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಉಳಿದವರೆಲ್ಲ ವೈಫಲ್ಯ ಕಂಡಿದ್ದಾರೆ. ರೋಹಿತ್‌ ಶರ್ಮಾ ಮತ್ತು ರಾಹುಲ್‌ ದ್ರಾವಿಡ್‌ ಈ ಸೋಲಿನ ಹೊಣೆ ಹೊರಬೇಕಿದೆ ಎಂದು ಸುಮೀತ್‌ ಠಕ್ಕರ್‌ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವುದು ನಿಮ್ಮನ್ನು ಶ್ರೇಷ್ಠ ನಾಯಕನನ್ನಾಗಿಸುವುದಿಲ್ಲ. ವಿರಾಟ್‌ ಕೊಹ್ಲಿ ಅವರು ಎಲ್ಲ ಮಾದರಿಯಲ್ಲಿಯೂ ರೋಹಿತ್‌ ಶರ್ಮಾ ಅವರಿಗಿಂತ ಅತ್ಯುತ್ತಮ ನಾಯಕ ಎಂದು ವಿಶಾಲ್ ಎನ್ನುವವರು ಹೇಳಿದ್ದಾರೆ.

ರೋಹಿತ್‌ ಶರ್ಮಾ ಮತ್ತು ಕೆ.ಎಲ್‌ ರಾಹುಲ್‌ ಅವರನ್ನು ಕೈಬಿಟ್ಟು, ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ನೀಡುವ ಸಮಯ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು