ಬ್ಲೂಮ್‌ಫೌಂಟೇನ್ (ದಕ್ಷಿಣ ಆಫ್ರಿಕಾ): ಬಾಂಗ್ಲಾದೇಶ ತಂಡವನ್ನು 84 ರನ್ ಅಂತರದಿಂದ ಮಣಿಸಿದ ಭಾರತ ತಂಡ, 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ 167 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.
ಭಾರತ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ವೇಗಿ ರಾಜ್ ಲಿಂಬಾನಿ ಮತ್ತು ಸ್ಪಿನ್ನರ್ ಸೌಮಿ ಪಾಂಡೆ ಆರಂಭಿಕ ಆಘಾತ ನೀಡಿದರು.
ಬಾಂಗ್ಲಾ ತಂಡದ ಮೊತ್ತ 50 ರನ್ ಆಗುವಷ್ಟರಲ್ಲೇ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜೊತೆಯಾದ ಮೊಹಮ್ಮದ್ ಶಿಯಾಬ್ ಜೇಮ್ಸ್ (54) ಮತ್ತು ಆರಿಫುಲ್ ಇಸ್ಲಾಂ (41) ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 77 ರನ್ ಕಲೆಹಾಕಿ ಚೇತರಿಕೆ ನೀಡಿದರು. ಆದರೆ, ಈ ಜೊತೆಯಾಟವನ್ನು ಮುಷೀರ್ ಖಾನ್ ಮುರಿದರು.
ಇದರೊಂದಿಗೆ ಬಾಂಗ್ಲಾ ಪಡೆಯ ಕುಸಿತ ಆರಂಭವಾಯಿತು. ಜೇಮ್ಸ್ ಮತ್ತು ಇಸ್ಲಾಂ ಹೊರತುಪಡಿಸಿ ಈ ತಂಡದ ಯಾವೊಬ್ಬ ಬ್ಯಾಟರ್ ಸಹ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ.
ಭಾರತ ಪರ ಸೌಮಿ ಪಾಂಡೆ ನಾಲ್ಕು ವಿಕೆಟ್ ಪಡೆದರೆ, ಮುಷೀರ್ ಖಾನ್ ಎರಡು ವಿಕೆಟ್ ಕಿತ್ತರು. ಉಳಿದ ಮೂರು ವಿಕೆಟ್‌ಗಳನ್ನು ರಾಜ್ ಲಿಂಬಾನಿ, ಅರ್ಶಿನ್ ಕುಲಕರ್ಣಿ ಮತ್ತು ಪ್ರಿಯಾಂಶು ಮೊಲಿಯಾ ಹಂಚಿಕೊಂಡರು.
ಇದರೊಂದಿಗೆ ಭಾರತ ತಂಡವು ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು.
The #BoysInBlue start the #U19WorldCup Campaign with a win 🙌
— BCCI (@BCCI) January 20, 2024
Saumy Pandey finishes with a four-wicket haul as India U19 register a 84-run victory over Bangladesh U19 👏👏
Scorecard ▶️ https://t.co/DFqdZaZ28U#BoysInBlue | #U19WorldCup | #BANvIND pic.twitter.com/pzifFawsL7
ಭಾರತಕ್ಕೆ ಆದರ್ಶ್–ಉದಯ್ ಆಸರೆ
ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ, ಐದು ಬಾರಿಯ ಚಾಂಪಿಯನ್ನರಿಗೆ ಅದಕ್ಕೆ ತಕ್ಕ ಆರಂಭ ಸಿಗಲಿಲ್ಲ. ಆದರ್ಶ್ ಸಿಂಗ್ ಜೊತೆ ಇನಿಂಗ್ಸ್ ಆರಂಭಿಸಿದ ಅರ್ಶಿನ್ ಕುಲಕರ್ಣಿ (7) ಮತ್ತು ಭರವಸೆಯ ಬ್ಯಾಟರ್ ಮುಷೀರ್ ಖಾನ್ (3) ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಜೊತೆಯಾದ ಆದರ್ಶ್ ಹಾಗೂ ನಾಯಕ ಉದಯ್ ಸಹರಾನ್ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟು ಆಡಿದರು. ಇವರಿಬ್ಬರು ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ 116 ರನ್ ಕೂಡಿಸಿ ಆಸರೆಯಾದರು.
96 ಎಸೆತಗಳಲ್ಲಿ ಆದರ್ಶ್ 76 ರನ್ ಗಳಿಸಿ ಔಟಾದರೆ, 94 ಎಸೆತ ಎದುರಿಸಿದ ಉದಯ್ 64 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಪ್ರಿಯಾಂಶು ಮೊಲಿಯಾ (23), ಅರಾವೆಲ್ಲಿ ಅವನೀಶ್ (23) ಮತ್ತು ಸಚಿನ್ ದಾಸ್ (ಅಜೇಯ 26) ಉಪಯಕ್ತ ಆಟವಾಡಿ, ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಉಭಯ ತಂಡಗಳು 'ಎ' ಗುಂಪಿನಲ್ಲಿವೆ.
ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಜನವರಿ 22ರಂದು ಕಣಕ್ಕಿಳಿಯಲಿದೆ. ಅದೇ ತಂಡದ ವಿರುದ್ಧ ಭಾರತ ಜನವರಿ 25ರಂದು ಸೆಣಸಾಟ ನಡೆಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.