ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Under 19 World Cup: ಭಾರತದ 252 ರನ್ ಗುರಿ ಎದುರು ಬಾಂಗ್ಲಾ ಪಡೆಗೆ ಆರಂಭಿಕ ಆಘಾತ

Published : 20 ಜನವರಿ 2024, 13:19 IST
Last Updated : 20 ಜನವರಿ 2024, 13:19 IST
ಫಾಲೋ ಮಾಡಿ
Comments

ಬ್ಲೂಮ್‌ಫೌಂಟೇನ್ (ದಕ್ಷಿಣ ಆಫ್ರಿಕಾ): ಬಾಂಗ್ಲಾದೇಶ ತಂಡದ ವಿರುದ್ಧ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಪಂದ್ಯದಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.

ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಆರಂಭಿಕ ಬ್ಯಾಟರ್‌ ಆದರ್ಶ್‌ ಸಿಂಗ್‌ ಮತ್ತು ನಾಯಕ ಉದಯ್ ಸಹರಾನ್ ಗಳಿಸಿದ ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 251 ರನ್ ಕಲೆಹಾಕಿದೆ. ಈ ಗುರಿ ಎದುರು ಬಾಂಗ್ಲಾ ಪಡೆಗೆ ಆರಂಭಿಕ ಆಘಾತ ಎದುರಾಗಿದೆ.

ಉಭಯ ತಂಡಗಳು ಎ ಗುಂಪಿನ ಸ್ಥಾನ ಪಡೆದಿವೆ.

ಐದು ಬಾರಿಯ ಚಾಂಪಿಯನ್ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದರ್ಶ್‌ ಜೊತೆ ಇನಿಂಗ್ಸ್ ಆರಂಭಿಸಿದ ಅರ್ಶಿನ್‌ ಕುಲಕರ್ಣಿ (7) ಮತ್ತು ಮೂರನೇ ಕ್ರಮಾಂಕದ ಬ್ಯಾಟರ್‌ ಮುಷೀರ್ ಖಾನ್‌ (3) ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಹಂತದಲ್ಲಿ ಜೊತೆಯಾದ ಆದರ್ಶ್‌ ಹಾಗೂ ಉದಯ್‌ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟು ಆಡಿದರು. ಇವರಿಬ್ಬರು ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 116 ರನ್‌ ಕೂಡಿಸಿದರು.

96 ಎಸೆತಗಳಲ್ಲಿ ಆದರ್ಶ್‌ 76 ರನ್‌ ಗಳಿಸಿ ಔಟಾದರೆ, 94 ಎಸೆತ ಎದುರಿಸಿದ ಉದಯ್‌ 64 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗಿಳಿದ ಪ್ರಿಯಾಂಶು ಮೊಲಿಯಾ (23), ಅರಾವೆಲ್ಲಿ ಅವನೀಶ್ (23) ಮತ್ತು ಸಚಿನ್‌ ದಾಸ್‌ (ಅಜೇಯ 26) ಉಪಯಕ್ತ ಆಟವಾಡಿ, ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಗುರಿ ಬೆನ್ನತ್ತಿರುವ ಬಾಂಗ್ಲಾ 10 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 43 ರನ್‌ ಗಳಿಸಿದೆ. 

ಆರಂಬಿಕ ಬ್ಯಾಟರ್‌ ಜಿಶಾನ್‌ ಅಲಂ (14) ಅವರನ್ನು ಬಲಗೈ ವೇಗಿ ರಾಜ್‌ ಲಿಂಬಾನಿ ಔಟ್‌ ಮಾಡಿದ್ದಾರೆ. ಮತ್ತೊಬ್ಬ ಆರಂಭಿಕ ಎ.ಆರ್‌.ಶಿಬ್ಲಿ (14) ಮತ್ತು ಮೂರನೇ ಕ್ರಮಾಂಕದ ಚೌಧರಿ ರಿಜ್ವಾನ್‌ (0) ಅವರನ್ನು ಸೌಮಿ ಪಾಂಡೆ ಔಟ್‌ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದಾರೆ.

ಉಳಿದಿರುವ 7 ವಿಕೆಟ್‌ಗಳು ಬೇಗನೆ ಉರುಳಿಸಿ ಜಯದೊಂದಿಗೆ ವಿಶ್ವಕಪ್‌ ಅಭಿಯಾನ ಆರಂಭಿಸುವ ಲೆಕ್ಕಾಚಾರದಲ್ಲಿ ಭಾರತ ತಂಡವಿದೆ. ಬಾಕಿ 40 ಓವರ್‌ಗಳಲ್ಲಿ 211 ರನ್‌ ಗಳಿಸಿ ಜಯದ ಖಾತೆ ತೆರೆಯುವ ಯೋಜನೆ ಬಾಂಗ್ಲಾ ಬಳಗದ್ದು.

ಇನ್ನೂ ಖಾತೆ ತೆರೆಯದ ಆರಿಫುಲ್‌ ಇಸ್ಲಾಂ ಮತ್ತು ಅಹ್ರಾರ್‌ ಅಮಿನ್‌ ಕ್ರೀಸ್‌ನಲ್ಲಿದ್ದಾರೆ.

ಮೂರು ಓವರ್‌ಗಳಲ್ಲಿ 11 ವೈಡ್‌
ಭಾರತ ಪರ ಲಿಂಬಾನಿ ಜೊತೆ ದಾಳಿ ಸಂಘಟಿಸಿರುವ ಎಡಗೈ ವೇಗಿ ನಮನ್‌ ತಿವಾರಿ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಕೇವಲ 3 ಓವರ್‌ ಬೌಲಿಂಗ್‌ ಮಾಡಿರುವ ಅವರು ವೈಡ್‌ ಮೂಲಕ ಬಿಟ್ಟುಕೊಟ್ಟ 11 ರನ್‌ ಸೇರಿ ಒಟ್ಟು 23 ರನ್‌ ನೀಡಿದ್ದಾರೆ.

ಲಿಂಬಾನಿ 5 ಓವರ್‌ಗಳಲ್ಲಿ 16 ರನ್‌ ನೀಡಿದರೆ, ಪಾಂಡೆ 2 ಓವರ್‌ಗಳಲ್ಲಿ 1 ಮೇಡನ್‌ ಸಹಿತ ಕೇವಲ 1 ರನ್‌ ಬಿಟ್ಟುಕೊಟ್ಟಿದ್ದಾರೆ.

ಐದು ಬಾರಿಯ ಚಾಂಪಿಯನ್‌ ಭಾರತ
2002ರಲ್ಲಿ ಮೊಹಮ್ಮದ್ ಕೈಫ್ ನಾಯಕತ್ವದಲ್ಲಿ ಆಡಿದ್ದ ಭಾರತ ತಂಡವು ಮೊದಲ ಬಾರಿಗೆ ಟ್ರೋಫಿ ಜಯಿಸಿತ್ತು. ನಂತರ 2008, 2012, 2018 ಮತ್ತು 2022ರಲ್ಲಿ ಚಾಂಪಿಯನ್‌ ಪಟ್ಟಕ್ಕೇರಿತ್ತು. ಈ ಟೂರ್ನಿಗಳಲ್ಲಿ ವಿರಾಟ್‌ ಕೊಹ್ಲಿ, ಉನ್ಮುಕ್ತ್‌ ಚಾಂದ್‌, ಪೃಥ್ವಿ ಶಾ ಮತ್ತು ಯಶ್‌ ಧುಳ್‌ ಕ್ರಮವಾಗಿ ತಂಡ ಮುನ್ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT