ಬುಧವಾರ, ಆಗಸ್ಟ್ 17, 2022
25 °C

ದೀರ್ಘ ಕಾಲದ ಗೆಳತಿಯನ್ನು ವರಿಸಿದ ವರುಣ್ ಚಕ್ರವರ್ತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಆಟಗಾರನಾಗಿರುವ ತಮಿಳುನಾಡಿನ ಆಫ್ ಸ್ಪಿನ್ನರ್ ವರುಣ್ ಚಕ್ರವರ್ತಿ, ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ನಿಜ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. 

ತಮ್ಮ ದೀರ್ಘ ಕಾಲದ ಗೆಳತಿ ನೇಹಾ ಖೇಡೇಕರ್ ವರಿಸಿರುವ ವರುಣ್ ಚಕ್ರವರ್ತಿ, ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಶುಕ್ರವಾರದಂದು ಚೆನ್ನೈನಲ್ಲಿ ವಿವಾಹ ಸಮಾರಂಭವು ನೆರವೇರಿದ್ದು, ಈ ಸಂಬಂಧ ಕೆಕೆಆರ್ ಫ್ರಾಂಚೈಸಿ ಅಭಿಮಾನಿಗಳ ಜೊತೆಗೆ ವಿಡಿಯೊವನ್ನು ಹಂಚಿದೆ. 

ಇದನ್ನೂ ಓದಿ: ಸ್ಪಿನ್‌ ಚಕ್ರವರ್ತಿ ವರುಣ್‌

ವರ್ಷಾರಂಭದಲ್ಲೇ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರಿಂದ ವಿವಾಹ ಸಂಭ್ರಮವು ವಿಳಂಬವಾಗಿದೆ. 

ಆಪ್ತ ಕುಟುಂಬ ವಲಯ ಹಾಗೂ ಸ್ನೇಹಿತರು ವಿವಾಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಧು ಜೊತೆಗೆ ಅಂಡರ್ ಆರ್ಮ್ ಕ್ರಿಕೆಟ್ ಆಡುವ ಮೂಲಕ ವರುಣ್ ಚಕ್ರವರ್ತಿ ಗಮನ ಸೆಳೆದರು. 

ಇತ್ತೀಚೆಗಷ್ಟೇ ದುಬೈನಲ್ಲಿ ಸಾಗಿದ ಐಪಿಎಲ್ 2020 ಕ್ರಿಕೆಟ್ ಟೂರ್ನಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ವರುಣ್, ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿಯುವಂತಾಗಿತ್ತು. ಐಪಿಎಲ್‌ನಲ್ಲಿ ವರುಣ್ ತಾವು ಆಡಿದ 13 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜೀವನಶ್ರೇಷ್ಠ ಐದು ವಿಕೆಟ್ (20/5) ಸಾಧನೆಯು ಸೇರಿತ್ತು. 

ಇದನ್ನೂ ಓದಿ: 

ಅತ್ತ ವರುಣ್ ಚಕ್ರವರ್ತಿ ಬದಲಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ತಮಿಳುನಾಡು ಮೂಲದವರೇ ಆದ ತಂಗರಸು ನಟರಾಜನ್, ತಮ್ಮ ಚೊಚ್ಚಲ ಪ್ರವಾಸದಲ್ಲೇ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದರು. 

ಬೀದರ್‌ನಲ್ಲಿ ಜನನ...
ಕರ್ನಾಟಕದ ಬೀದರ್‌ನಲ್ಲಿ ಜನಿಸಿದ 29ರ ಹರೆಯದ ವರುಣ್‌, ಸದ್ಯ ತಮಿಳುನಾಡಿನ ತಂಜಾವೂರಿನಲ್ಲಿ ನೆಲೆಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು