ಸೋಮವಾರ, ಮಾರ್ಚ್ 8, 2021
24 °C
ಫೈನಲ್ ಪಂದ್ಯ: ಸ್ನೇಲ್ ಪಟೇಲ್ ಅಜೇಯ ಅರ್ಧಶತಕ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಚಾಂಪಿಯನ್ನರ ಎದುರು ಸೌರಾಷ್ಟ್ರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಚೇತೇಶ್ವರ ಪೂಜಾರ ಒಳಗೊಂಡಂತೆ ಅಗ್ರ ಕ್ರಮಾಂಕದ ಮೂವರನ್ನು ವಾಪಸ್ ಕಳುಹಿಸಿದ ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ, ಆತಿಥೇಯರ ಭರವಸೆಗೆ ಇಂಬು ತುಂಬಿದರು.

ಇಲ್ಲಿನ ಜಮ್ತಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಎರಡನೇ ದಿನ ಸರ್ವಟೆ ಅವರ ದಾಳಿಗೆ ನಲುಗಿದ ಸೌರಾಷ್ಟ್ರ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು.

ವಿದರ್ಭ ತಂಡದ ಮೊದಲ ಇನಿಂಗ್ಸ್ ಮೊತ್ತವಾದ 312 ರನ್‌ಗಳಿಗೆ ಉತ್ತರಿಸಿದ ಸೌರಾಷ್ಟ್ರ ದಿನದಾಟದ ಮುಕ್ತಾಯಕ್ಕೆ ಐದು ವಿಕೆಟ್ ಕಳೆದುಕೊಂಡ 158 ರನ್‌ ಗಳಿಸಿದೆ. ಎದುರಾಳಿ ತಂಡದ ಮೊತ್ತವನ್ನು ಹಿಂದಿಕ್ಕಲು ತಂಡಕ್ಕೆ ಇನ್ನೂ 154 ರನ್‌ ಬೇಕು. ಅಜೇಯ ಅರ್ಧಶತಕ (87;
160 ಎಸೆತ, 14 ಬೌಂಡರಿ) ಗಳಿಸಿರುವ ಆರಂಭಿಕ ಬ್ಯಾಟ್ಸ್‌ಮನ್‌ ಸ್ನೇಲ್ ಪಟೇಲ್‌ ತಂಡದ ಭರವಸೆಯಾಗಿ ಉಳಿದಿದ್ದಾರೆ.

ಸೋಮವಾರ ದಿನವಿಡೀ ಆತಿಥೇಯರೇ ಮೆರೆದರು. ಮೊದಲ ದಿನ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿ 200 ರನ್‌ಗಳಿಗೆ ಏಳು ವಿಕೆಟ್‌ ಉರುಳಿಸಿದ್ದ ಸೌರಾಷ್ಟ್ರಕ್ಕೆ ವಿದರ್ಭದ ಬಾಲಂಗೋಚಿಗಳು ಬೆಳಿಗ್ಗೆ ತಿರುಗೇಟು ನೀಡಿದರು. ಅಕ್ಷಯ್ ವಾಖರೆ ಮತ್ತು ಅಕ್ಷಯ್ ಕರ್ಣವೀರ್‌ ಎಂಟನೇ ವಿಕೆಟ್‌ಗೆ 78 ರನ್‌ ಸೇರಿಸಿದರು.

ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ದಿಟ್ಟವಾಗಿ ಎದುರಿಸಿದ ಇಬ್ಬರು ರನ್‌ ಗಳಿಕೆಯ ವೇಗವನ್ನು ಹೆಚ್ಚಿಸಿದರು. 90 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟ ಪೂರ್ಣಗೊಳಿಸಿದ ಅವರು ಡ್ರೈವ್‌, ಲಾಫ್ಟ್‌ ಮತ್ತು ಕಟ್ ಶಾಟ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ದಿನದ 23ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಎಡಗೈ ವೇಗಿ ಚೇತನ್ ಸಕಾರಿಯ ಮುರಿದರು. 34 ರನ್ ಗಳಿಸಿದ ವಾಖರೆ ಬೌಲ್ಡ್‌ ಆದರು. ಆದರೆ ಕರ್ಣವೀರ್‌ (73; 160 ಎಸೆತ, 2 ಸಿಕ್ಸರ್‌, 8 ಬೌಂಡರಿ) ಬ್ಯಾಟಿಂಗ್ ವೈಭವ ಮುಂದುವರಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಉಮೇಶ್ ಯಾದವ್ 25 ಮತ್ತು ಗುರುಬಾನಿ 13 ರನ್‌ಗಳ ಜೊತೆಯಾಟ ಆಡಿದರು.

ಬಲೆ ಬೀಸಿದ ಸ್ಪಿನ್ನರ್‌ಗಳು: ಚೆಂಡು ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಸರ್ವಟೆ ಮತ್ತು ಆಫ್ ಸ್ಪಿನ್ನರ್ ಅಕ್ಷಯ್ ವಾಖರೆ ಎದುರಾಳಿ ಬೌಲರ್‌ಗಳಿಗೆ ಬಲೆ ಬೀಸಿದರು.

18 ರನ್‌ಗಳಿಗೆ ಮೊದಲ ವಿಕೆಟ್ ಉರುಳಿಸಿದ ಸರ್ವಟೆ, 81 ರನ್‌ ಗಳಿಸುವಷ್ಟರಲ್ಲಿ ಎದುರಾಳಿಗಳ ಮೂರು ವಿಕೆಟ್‌ಗಳನ್ನು ಗಳಿಸಿದರು. ಕರ್ನಾಟಕ ಎದುರಿನ ಸೆಮಿಫೈನಲ್‌ನಲ್ಲಿ ಅಜೇಯ ಶತಕ ಗಳಿಸಿ ಗೆಲುವಿಗೆ ಕಾರಣರಾಗಿದ್ದ ಚೇತೇಶ್ವರ್‌ ಪೂಜಾರ ವಿದರ್ಭ ಹೆಣೆದ ತಂತ್ರಗಳಿಗೆ ಶರಣಾದರು.

ಚಹಾ ವಿರಾಮಕ್ಕೆ ಸ್ವಲ್ಪ ಮೊದಲು ಸರ್ವಟೆ ಎಸೆತ ಪೂಜಾರ ಅವರ ಬ್ಯಾಟಿನ ಅಂಚಿಗೆ ತಾಗಿ ಚಿಮ್ಮಿತು. ಮೊದಲ ಸ್ಲಿಪ್‌ನಲ್ಲಿದ್ದ ಜಾಫರ್‌ ಮೋಹಕ ಕ್ಯಾಚ್ ಪಡೆದು ಸಂಭ್ರಮಿಸಿದರು. ಕೊನೆಯ ಅವಧಿಯ ಆರಂಭದಲ್ಲಿ ಅರ್ಪಿತ್‌ ವಾಸವದ ಅವರಿಗೆ ವಿಕೆಟ್ ಕೀಪರ್‌ ವಾಡ್ಕರ್ ಜೀವದಾನ ನೀಡಿದರು. ಆದರೆ ವಾಖರೆ ಅವರ ತಿರುವು ಪಡೆದ ಎಸೆತಕ್ಕೆ ಅವರು ಬಲಿಯಾದರು. ದಿನದಾಟದ ಮುಕ್ತಾಯಕ್ಕೆ 10 ಓವರ್ ಬಾಕಿ ಉಳಿದಿರುವಾಗ ಅಪಾಯಕಾರಿ ಶೇಲ್ಡನ್ ಜಾಕ್ಸನ್‌ ಔಟಾಗುತ್ತಿದ್ದಂತೆ ವಿದರ್ಭ ಆಟಗಾರರು ಸಂತಸದಿಂದ ಕುಣಿದಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು