ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್‌: ರಾಹುಲ್ ಏಕಾಗ್ರತೆಗೆ ಒಲಿದ ಶತಕ

ಕರ್ನಾಟಕ ತಂಡಕ್ಕೆ ಸತತ ಎರಡನೇ ಜಯ; ವಿಷ್ಣು ಶತಕ ವ್ಯರ್ಥ
Last Updated 28 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಅಂದುಕೊಂಡಷ್ಟು ಸುರಳಿತವಾಗಿ ಬ್ಯಾಟಿಂಗ್ ಮಾಡಲಾಗಲಿಲ್ಲ. ಆದರೆ ನನ್ನ ಶತಕವು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸಂತಸ ತಂದಿದೆ’– ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶತಕ ಹೊಡೆದ ಕೆ.ಎಲ್. ರಾಹುಲ್ ಅವರ ಮಾತುಗಳಿವು.

ಕಳೆದೊಂದು ವರ್ಷದಲ್ಲಿ ತಮ್ಮ ಕ್ರಿಕೆಟ್ ಜೀವನದಲ್ಲಿ ಬಹಳಷ್ಟು ವೈಫಲ್ಯಗಳನ್ನು ಅನುಭವಿಸಿರುವ ರಾಹುಲ್ ಪುಟಿದೇಳುವ ಪ್ತಯತ್ನದಲ್ಲಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಕೇರಳ ವಿರುದ್ಧದ ಪಂದ್ಯದಲ್ಲಿ ಅವರ ಈ ಶತಕ ಪ್ರಮುಖವಾಗಿದೆ. ರಾಹುಲ್ (131;122 ಎಸೆತ, 10ಬೌಂಡರಿ, 4ಸಿಕ್ಸರ್) ಉತ್ತಮ ಆಟದ ಬಲದಿಂದ ಕರ್ನಾಟಕ ತಂಡವು 61 ರನ್‌ಗಳಿಂದ ಗೆದ್ದಿತು. ಫೀಲ್ಡಿಂಗ್‌ನಲ್ಲಿಯೂ ಮಿಂಚಿದ ಅವರು ಪಡೆದ ಎರಡು ಕ್ಯಾಚ್‌ಗಳೂ ನೆನಪಿನಲ್ಲುಳಿದವು.

ಇದರೊಂದಿಗೆ ಸತತ ಎರಡನೇ ಜಯ ಸಾಧಿಸಿದ ತಂಡವು ಎಂಟು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

‌ಟಾಸ್ ಗೆದ್ದ ಕೇರಳ ತಂಡದ ನಾಯಕ ರಾಬಿನ್ ಉತ್ತಪ್ಪ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಪಾಂಡೆ ಬಳಗವು 49.5 ಓವರ್‌ಗಳಲ್ಲಿ 294 ರನ್ ಗಳಿಸಿತು. ಅದಕ್ಕುತ್ತರವಾಗಿ ಕೇರಳ ತಂಡವು 46.4 ಓವರ್‌ಗಳಲ್ಲಿ 234 ರನ್ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ವಿಷ್ಣು ವಿನೋದ್ (104; 123 ಎಸೆತ, 10ಬೌಂಡರಿ, 3ಸಿಕ್ಸರ್) ಅವರ ಶತಕ ಮತ್ತು ಸಂಜು ಸ್ಯಾಮ್ಸನ್ (67; 66ಎಸೆತ, 6ಬೌಂಡರಿ, 3ಸಿಕ್ಸರ್) ಅರ್ಧಶತಕ ವ್ಯರ್ಥವಾದವು.

ರಾಹುಲ್‌–ಮನೀಷ್ ಜೊತೆಯಾಟ: ಕರ್ನಾಟಕ ಬ್ಯಾಟಿಂಗ್ ಆರಂಭಿಸಿದ ರಾಹುಲ್ ತಾಳ್ಮೆಯಿಂದ ಆಡಿ ಲಯ ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಇನ್ನೊಂದೆಡೆ ಸ್ಕೋರ್‌ ಬೋರ್ಡ್‌ ಮೇಲೆ 30 ರನ್‌ಗಳು ದಾಖಲಾಗುವಷ್ಟರಲ್ಲಿ ದೇವದತ್ತ ಮತ್ತು ಕೆ.ವಿ. ಸಿದ್ಧಾರ್ಥ್ ಪೆವಿಲಿಯನ್ ಸೇರಿದರು. ಇವರಿಬ್ಬರ ವಿಕೆಟ್ ಪಡೆದ ಮಧ್ಯಮವೇಗಿ ಸಂದೀಪ್ ವಾರಿಯರ್ ಸಂಭ್ರಮಿಸಿದರು.

ರಾಹುಲ್ ಜೊತೆಗೂಡಿದ ಮನೀಷ್ ಇನಿಂಗ್ಸ್‌ನ ಚಿತ್ರಣವನ್ನೇ ಬದಲಿಸಿಬಿಟ್ಟರು. ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ(50;51ಎಸೆತ, 6ಬೌಂಡರಿ, 2ಸಿಕ್ಸರ್) ಗಳಿಸಿದರು. ಅದರಲ್ಲೂ ಬಾಸಿಲ್ ಥಂಪಿಯ ಎಸೆತಗಳನ್ನು ಹೆಚ್ಚು ದಂಡಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 84 ರನ್ ಸೇರಿಸಿದರು. 24ನೇ ಓವರ್‌ನಲ್ಲಿ ಪಾಂಡೆ ಔಟಾದರು.

ಆಗ ರಾಹುಲ್ ತಮ್ಮ ಆಟದ ‘ವೇಗ’ ಹೆಚ್ಚಿಸಿದರು. 108 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. 112 ರನ್‌ ಗಳಿಸಿದ್ದ ಸಂದರ್ಭದಲ್ಲಿ ಅವರಿಗೆ ಜೀವದಾನವೂ ಲಭಿಸಿತು. ತಂಡದ ಸ್ಕೋರ್‌ ಹೆಚ್ಚಿಸಲು ರಾಹುಲ್ ವೇಗದ ಆಟವಾಡಿದರು. 43ನೇ ಓವರ್‌ನಲ್ಲಿ ಅವರು ಔಟಾದರು.

ಗುರಿ ಬೆನ್ನತ್ತಿದ ಕೇರಳ ತಂಡಕ್ಕೆ ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ವಿನೂಪ್ ಮನೋಹರನ್ ರನ್‌ ಔಟಾದರು. ಇನ್ನೊಂದು ಬದಿಯಲ್ಲಿದ್ದ ವಿಷ್ಣು ಜೊತೆಗೆ ಸೇರಿದ ಸಂಜು ಎರಡನೇ ವಿಕೆಟ್‌ಗೆ 111 ರನ್‌ಗಳನ್ನು ಸೇರಿಸಿದರು. ಶ್ರೇಯಸ್ ಗೋಪಾಲ್ ಅವರ ನಿಖರ ಥ್ರೋನಿಂದಾಗಿ ಸಂಜು ರನ್‌ಔಟ್ ಆದರು. ಅದರೊಂದಿಗೆ ಜೊತೆಯಾಟ ಮುರಿದುಬಿತ್ತು. ನಂತರ ವಿಷ್ಣುವಿನ ಏಕಾಂಗಿ ಹೋರಾಟ ನಡೆಯಿತು. ರೋನಿತ್ ಮೋರೆ, ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ಅವರ ಬೌಲಿಂಗ್ ಮುಂದೆ ಉಳಿದ ಬ್ಯಾಟ್ಸ್‌ಮನ್‌ಗಳು ನಿಲ್ಲಲಿಲ್ಲ. ಫೀಲ್ಡಿಂಗ್‌ನಲ್ಲಿಯೂ ಮಿಂಚಿದ ರಾಹುಲ್ಎರಡು ಉತ್ತಮ ಕ್ಯಾಚ್‌ ಪಡೆದರು.

*
ತವರು ರಾಜ್ಯದ ತಂಡಕ್ಕೆ ಮರಳಿ ಬಂದು ಆಡುವುದು ಬಹಳ ಖುಷಿ ಕೊಡುತ್ತದೆ. ಹೊಸ ಹುಡುಗರೊಂದಿಗೆ ನಮ್ಮ ಅನುಭವ ಹಂಚಿಕೊಳ್ಳುವುದು ವಿಶೇಷ ಅನುಭವ
-ಕೆ.ಎಲ್. ರಾಹುಲ್ ಕರ್ನಾಟಕ ಬ್ಯಾಟ್ಸ್‌ಮನ್

**
ಮುಂಬೈಗೆ ಆಘಾತ ನೀಡಿದ ಛತ್ತೀಸಗಡ
ಆಲೂರು (ಬೆಂಗಳೂರು): ‌ಕ್ರಿಕೆಟ್ ಜಗತ್ತಿನಲ್ಲಿ ಅಂಬೆಗಾಲಿಡುತ್ತಿರುವ ಛತ್ತೀಸಗಡ ತಂಡವು ಶನಿವಾರ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ದೇಶಿ ಕ್ರಿಕೆಟ್‌ನ ’ಅನಭಿಷಿಕ್ತ ರಾಜ’ ಮುಂಬೈ ತಂಡಕ್ಕೆ ಆಘಾತ ನೀಡಿತು.

ಎ ಗುಂಪಿನ ಪಂದ್ಯದಲ್ಲಿ ಛತ್ತೀಸಗಡ ತಂಡವು 5 ವಿಕೆಟ್‌ಗಳಿಂದ ಮುಂಬೈ ಎದುರು ಗೆದ್ದಿತು. ಮುಂಬೈ ತಂಡವು ಒಡ್ಡಿದ 317 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಛತ್ತೀಸಗಡ ತಂಡವು ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಜಯಿಸಿತು. ಅಮನದೀಪ್ ಖರೆ ಅಜೇಯ ಶತಕ (117) ಹೊಡೆದು ತಂಡದ ಐತಿಹಾಸಿಕ ಜಯಕ್ಕೆ ಕಾರಣರಾದರು. ಮುಂಬೈನ ಆದಿತ್ಯ ತಾರೆ (90 ರನ್) ಸೂರ್ಯಕುಮಾರ್ ಯಾದವ್ (81 ರನ್) ಮತ್ತು ಶ್ರೇಯಸ್ ಅಯ್ಯರ್ (50) ಅರ್ಧಶತಕಗಳು ವ್ಯರ್ಥವಾದವು.

ಸಂಕ್ಷಿಪ್ತ ಸ್ಕೋರುಗಳು: ಕರ್ನಾಟಕ: 49.5 ಓವರ್‌ಗಳಲ್ಲಿ 294 (ಕೆ.ಎಲ್. ರಾಹುಲ್ 131, ಮನೀಷ್ ಪಾಂಡೆ 50, ಶ್ರೇಯಸ್ ಗೋಪಾಲ್ 31, ಸಂದೀಪ್ ವಾರಿಯರ್ 46ಕ್ಕೆ2, ಬಾಸಿಲ್ ಥಂಪಿ 70ಕ್ಕೆ3, ಕೆ.ಎಂ. ಆಸಿಫ್ 59ಕ್ಕೆ3, ವಿನೂಪ್ ಮನೋಹರನ್ 55ಕ್ಕೆ2) ಕೇರಳ: 46.4 ಓವರ್‌ಗಳಲ್ಲಿ 234 (ವಿಷ್ಣು ವಿನೋದ್ 104, ಸಂಜು ಸ್ಯಾಮ್ಸನ್ 67, ಸಚಿನ್ ಬೇಬಿ 26, ಅಭಿಮನ್ಯು ಮಿಥುನ್ 32ಕ್ಕೆ2, ರೋನಿತ್ ಮೋರೆ 42ಕ್ಕೆ3, ಪ್ರಸಿದ್ಧ ಕೃಷ್ಣ 46ಕ್ಕೆ1, ಶ್ರೇಯಸ್ ಗೋಪಾಲ್ 41ಕ್ಕೆ1, ಪವನ್ ದೇಶಪಾಂಡೆ 10ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 61 ರನ್‌ಗಳ ಜಯ ಮತ್ತು 4 ಪಾಯಿಂಟ್ಸ್.

ಮುಂಬೈ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 317 (ಜೈಗೋಕುಲ್ ಬಿಷ್ಟ್ 24, ಆದಿತ್ಯ ತಾರೆ 90, ಯಶಸ್ವಿ ಜೈಸ್ವಾಲ್ 44, ಶ್ರೇಯಸ್ ಅಯ್ಯರ್ 50, ಸೂರ್ಯಕುಮಾರ್ ಯಾದವ್ 81, ವೀರ್‌ಪ್ರತಾಪ್ ಸಿಂಗ್ 66ಕ್ಕೆ2, ಶಶಾಂಕ್ ಸಿಂಗ್ 54ಕ್ಕೆ2), ಛತ್ತೀಸಗಡ: 49.5 ಓವರ್‌ಗಳಲ್ಲಿ 5ಕ್ಕೆ318 (ಜೀವನಜ್ಯೋತ್ ಸಿಂಗ್ 44, ಆಶುತೋಷ್ ಸಿಂಗ್ 35, ಹರಪ್ರೀತ್ ಸಿಂಗ್ 26, ಅಮನದೀಪ್ ಖರೆ ಔಟಾಗದೆ 117, ಶಶಾಂಕ್ ಸಿಂಗ್ 40, ಅಜಯ್ ಜಾಧವ್ ಮಂಡಲ್ 39, ಶಮ್ಸ್‌ ಮುಲಾನಿ 38ಕ್ಕೆ3, ಧವಳ್ ಕುಲಕರ್ಣಿ 66ಕ್ಕೆ1) ಫಲಿತಾಂಶ: ಛತ್ತೀಸಗಡ ತಂಡಕ್ಕೆ5 ವಿಕೆಟ್‌ಗಳ ಜಯ ಮತ್ತು 4 ಪಾಯಿಂಟ್ಸ್‌. ಹೈದರಾಬಾದ್: 50 ಓವರ್‌ಗಳಲ್ಲಿ 5ಕ್ಕೆ252 (ತನ್ಮಯ್ ಅಗರವಾಲ್ 79, ತಿಲಕ್ ವರ್ಮಾ 65, ಭವನಕಾ ಸಂದೀಪ್ ಔಟಾಗದೆ 38, ಜಯದೇವ್ ಉನದ್ಕತ್ 46ಕ್ಕೆ2), ಸೌರಾಷ್ಟ್ರ: 39.1 ಓವರ್‌ಗಳಲ್ಲಿ 131 (ಶೆಲ್ಡನ್ ಜಾಕ್ಸನ್ 39, ಭಾವನಕಾ ಸಂದೀಪ್ 26ಕ್ಕೆ5) ಫಲಿತಾಂಶ: ಹೈದರಾಬಾದ್ ತಂಡಕ್ಕೆ 121 ರನ್‌ ಜಯ ಮತ್ತು 4 ಪಾಯಿಂಟ್ಸ್‌.

ಇಂದಿನ ಪಂದ್ಯಗಳು

ಆಂಧ್ರ–ಛತ್ತೀಸಗಡ (ಆಲೂರು 2)
ಹೈದರಾಬಾದ್–ಕೇರಳ (ಆಲೂರು1)
ಗೋವಾ–ಜಾರ್ಖಂಡ್ (ಜಸ್ಟ್‌ ಕ್ರಿಕೆಟ್‌ ಮೈದಾನ)

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT