ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ನಾಳೆ ಕರ್ನಾಟಕ ಬಳಗಕ್ಕೆ ಹರಿಯಾಣ ಸವಾಲು

ವಿದ್ವತ್, ದೇವದತ್ತ ಮೇಲೆ ಕಣ್ಣು
Published 2 ಡಿಸೆಂಬರ್ 2023, 13:14 IST
Last Updated 2 ಡಿಸೆಂಬರ್ 2023, 13:14 IST
ಅಕ್ಷರ ಗಾತ್ರ

ಅಹಮದಾಬಾದ್: ಈ ಬಾರಿಯ ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಎಲ್ಲ ಐದು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಮತ್ತು ಹರಿಯಾಣ ತಂಡಗಳು ಭಾನುವಾರ ಮುಖಾಮುಖಿಯಾಗಲಿವೆ.

ಪಾಯಿಂಟ್ ಪಟ್ಟಿಯ ಮೊದಲ ಸ್ಥಾನದಲ್ಲಿರುವ ಹರಿಯಾಣ ಮತ್ತು ಎರಡನೇ ಸ್ಥಾನದಲ್ಲಿರುವ ಕರ್ನಾಟಕ ತಂಡಗಳು ಸಮಬಲಶಾಲಿಗಳಾಗಿವೆ. ಈ ಪಂದ್ಯದಲ್ಲಿ ಜಯಿಸಿದವರಿಗೆ ಪಟ್ಟಿಯ ಮೊದಲ ಸ್ಥಾನ ಬಹುತೇಕ ಖಚಿತವಾಗಲಿದೆ. ಉಭಯ ತಂಡಗಳೂ 20  ಅಂಕಗಳನ್ನು ಹೊಂದಿವೆ. ಆದರೆ ನೆಟ್‌ ರನ್‌ ರೇಟ್‌ನಲ್ಲಿ ತುಸು ಮುಂದೆ ಇರುವ ಹರಿಯಾಣ ಪ್ರಥಮ ಸ್ಥಾನದಲ್ಲಿದೆ.

ಭಾರತ ಎ ತಂಡಕ್ಕೆ ಆಯ್ಕೆಯಾಗಿರುವ ಹುಮ್ಮಸ್ಸಿನಲ್ಲಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ ಮತ್ತು ವೇಗಿ ವಿದ್ವತ್ ಕಾವೇರಪ್ಪ ಅವರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ದೇವದತ್ತ ಈ ಟೂರ್ನಿಯಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕ ಬಾರಿಸಿ ಬ್ಯಾಟರ್‌ಗಳ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ವಿದ್ವತ್ ಕೂಡ ಅಮೋಘ ಲಯದಲ್ಲಿದ್ದಾರೆ.

ದೇವದತ್ತ ಅಲ್ಲದೇ ಮನೀಷ್ ಪಾಂಡೆ, ನಿಕಿನ್ ಜೋಸ್ ಕೂಡ ರನ್‌ ಗಳಿಸುತ್ತಿದ್ದಾರೆ. ಆದರೆ, ಸಮರ್ಥ್ ಮತ್ತು ಮಯಂಕ್ ಅಗರವಾಲ್ ಅವರು ದೊಡ್ಡ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರೆ ತಂಡದ ಬಲ ಹೆಚ್ಚಲಿದೆ. ಬೌಲಿಂಗ್‌ನಲ್ಲಿ ವಿದ್ವತ್ ಜೊತೆಗೆ ವೇಗಿ ವೈಶಾಖ ಮತ್ತು ಶಿಸ್ತಿನ ಬೌಲರ್ ಕೌಶಿಕ್   ಉತ್ತಮ ಫಾರ್ಮ್‌ನಲ್ಲಿದ್ದಾರೆ.  ಸ್ಪಿನ್ನರ್ ಕೆ. ಗೌತಮ್ ಕೂಡ ಪಂದ್ಯಕ್ಕೆ ತಿರುವು ನೀಡಬಲ್ಲ ಸಮರ್ಥ ಬೌಲರ್ ಆಗಿದ್ದಾರೆ.

ಹರಿಯಾಣ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಉತ್ತಮವಾಗಿದೆ. ಐಪಿಎಲ್‌ನಲ್ಲಿ ಉತ್ತಮವಾಗಿ ಆಡಿದ್ದ ರಾಹುಲ್ ತೆವಾಟಿಯಾ, ಸುಮಿತ್ ಕುಮಾರ್ ಮತ್ತು ನಿಶಾಂತ್ ಸಿಂಧು ಅವರು ಕಳೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಅರ್ಧಶತಕಗಳನ್ನು ಸಿಡಿಸಿದ್ದರು. ಅದರಲ್ಲೂ ರಾಹುಲ್ 99 ರನ್‌ ಗಳಿಸಿದ್ದರು.

ಆದರೆ ಬೌಲಿಂಗ್ ವಿಭಾಗದಲ್ಲಿ ಅನುಭವಿಗಳಿದ್ದಾರೆ. ಪ್ರಮುಖವಾಗಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಮಧ್ಯಮವೇಗಿ ಹರ್ಷಲ್ ಪಟೇಲ್ ಅವರು ಕರ್ನಾಟಕದ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ. ಇವರನ್ನು ಎದುರಿಸಿ ನಿಂತರೆ ಕರ್ನಾಟಕಕ್ಕೆ ಆರನೇ ಜಯ ಸಾಧ್ಯವಾಗಬಹುದು.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT