ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಸಂದೀಪ್ ದಾಳಿಗೆ ಮಣಿದ ಕರ್ನಾಟಕ

ದೇವದತ್ತ ಪಡಿಕ್ಕಲ್ ಅರ್ಧಶತಕ ವ್ಯರ್ಥ; ಹೈದರಾಬಾದ್ ಜಯಭೇರಿ
Last Updated 1 ಅಕ್ಟೋಬರ್ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ತಾರಾ ವರ್ಚಸ್ಸಿನ ಬ್ಯಾಟ್ಸ್‌ಮನ್‌ಗಳು ಪಿಚ್‌ ಗುಣವರಿತು ಆಡುವಲ್ಲಿ ವಿಫಲರಾದರು. ಅದರಿಂದಾಗಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆತಿಥೇಯ ಬಳಗವು ಮೊದಲ ಸೋಲಿನ ಕಹಿ ಅನುಭವಿಸಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ತಾಳ್ಮೆಯಿಂದ ಆಡಿದವರಿಗೆ ಮಾತ್ರ ಒಲಿದ ಪಿಚ್‌ನಲ್ಲಿ ಹೈದರಾಬಾದ್ ತಂಡವು ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ಮನೀಷ್ ಪಾಂಡೆ ಬಳಗವು ಎಡವಿತು. ಎಡಗೈ ಸ್ಪಿನ್ನರ್ ಸಂದೀಪ್ (35ಕ್ಕೆ4)ಅವರ ಆಟದ ಬಲದಿಂದ ಹೈದರಾಬಾದ್ ತಂಡವು 21 ರನ್‌ಗಳಿಂದ ಗೆದ್ದಿತು.

ಟಾಸ್ ಗೆದ್ದ ಕರ್ನಾಟಕವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ನಾಯಕ ಅಂಬಟಿ ರಾಯುಡು (ಔಟಾಗದೆ 87; 111 ಎಸೆತ, 4 ಬೌಂಡರಿ, 3ಸಿಕ್ಸರ್) ತಾಳ್ಮೆಯ ಬ್ಯಾಟಿಂಗ್‌ನಿಂದ 50 ಓವರ್‌ಗಳಲ್ಲಿ 9ಕ್ಕೆ 198 ರನ್ ಗಳಿಸಿತು. ಗುರಿ ಬೆನ್ನತ್ತಿದ ಕರ್ನಾಟಕವು 45.2 ಓವರ್‌ಗಳಲ್ಲಿ 177 ರನ್‌ ಗಳಿಸಿ ಆಲೌಟ್ ಆಯಿತು.

ಆರಂಭಿಕ ಎಡಗೈ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ (60; 104ಎಸೆತ, 6ಬೌಂಡರಿ), ನಾಯಕ ಮನೀಷ್ ಪಾಂಡೆ (48; 54ಎಸೆತ, 5ಬೌಂಡರಿ, 2ಸಿಕ್ಸರ್) ಮತ್ತು ಕೊನೆಯಲ್ಲಿ ಮಿಂಚಿದ ಅಭಿಮನ್ಯು ಮಿಥುನ್ (20; 20ಎಸೆತ, 2ಬೌಂಡರಿ, 1ಸಿಕ್ಸರ್) ಅವರ ಪ್ರಯತ್ನಕ್ಕೆ ಗೆಲುವಿನ ಕಾಣಿಕೆ ಸಿಗಲಿಲ್ಲ.

ಅದಕ್ಕೆ ಕಾರಣ; ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ (4 ರನ್), ಸೊನ್ನೆ ಸುತ್ತಿದ ಕರುಣ್ ನಾಯರ್, ಶ್ರೇಯಸ್ ಗೋಪಾಲ್ (1), ಪ್ರವೀಣ್ ದುಬೆ (7) ಮತ್ತು ಕೃಷ್ಣಪ್ಪ ಗೌತಮ್ (5) ಅವರ ಅವಸರದ ಆಟ.

‘ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಯಾವುದೇ ಮೊತ್ತವನ್ನು ಬೆನ್ನಟ್ಟಿ ಗೆಲ್ಲುವುದೂ ಕೂಡ ಸರಳವಲ್ಲ ಎಂಬುದು ಗೊತ್ತಿತ್ತು. ಅದಕ್ಕಾಗಿಯೇ ನಾವು 198 ರನ್ ಗಳಿಸಿದ್ದೂ ಆತ್ಮವಿಶ್ವಾಸದಿಂದ ಇದ್ದೆವು. ಶಿಸ್ತಿನ ಬೌಲಿಂಗ್ ಮೂಲಕ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿದ್ದು ಫಲ ನೀಡಿತು’ ಎಂದು ಪಂದ್ಯದ ನಂತರ ಭಾವನಕ ಸಂದೀಪ್ ಹೇಳಿದರು.

ಹೈದರಾಬಾದ್ ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ರಾಹುಲ್ (0.2) ಮತ್ತು ಕರುಣ್ ನಾಯರ್ (0.4) ಅವರಿಗೆ ಪೆವಿಲಿಯನ್ ಹಾದಿ ತೋರಿದರು. ಈ ಯಶಸ್ಸಿನ ಬುನಾದಿಯ ಮೇಲೆ ಸಂದೀಪ್ ಗೆಲುವಿನ ಮಹಲು ಕಟ್ಟಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ದೇವದತ್ತ ಮತ್ತು ಕಳೆದ ಎರಡೂ ಪಂದ್ಯಗಳಲ್ಲಿ ಅಬ್ಬರಿಸಿದ್ದ ಪಾಂಡೆ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವಿನ ಆಸೆ ಇತ್ತು. ಮೂರನೇ ವಿಕೆಟ್‌ ಜೊತೆಯಾಟದಲ್ಲಿ 85 ರನ್ ಸೇರಿಸಿದರು. 21ನೇ ಓವರ್‌ನಲ್ಲಿ ಈ ಜೊತೆಯಾಟವನ್ನು ಮುರಿದ ಸಂದೀಪ್ ಕರ್ನಾಟಕದ ಪಾಲಿಗೆ ಸೋಲಿನ ತಿರುವು ನೀಡಿದರು. ಶ್ರೇಯಸ್ ಗೋಪಾಲ್ ರನ್‌ಔಟ್‌ ಆಗಲು ಕಾರಣರಾದ ಸಂದೀಪ್, ಗೌತಮ್ ವಿಕೆಟ್ ಕೂಡ ಎಗರಿಸಿದರು. ಮಧ್ಯದಲ್ಲಿ ದೇವದತ್ತ ಜೊತೆಗೆ 37 ರನ್ ಪಾಲುದಾರಿಕೆ ಆಟವಾಡಿದ್ದ ಬಿ.ಆರ್. ಶರತ್ ಅವರನ್ನು ಮೆಹದಿ ಹಸನ್ ಔಟ್ ಮಾಡಿದರು. ದೇವದತ್ತ ಮತ್ತು ರೋನಿತ್ ವಿಕೆಟ್‌ಗಳನ್ನೂ ಅವರು ಕಬಳಿಸಿದರು.

ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಒಂದಷ್ಟು ಬೌಂಡರಿ ಗಳಿಸಿದ ಮಿಥುನ್ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಮಿಲಿಂದ್ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನ ಮಾಡಿದರು. ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಂದೀಪ್ ಅಮೋಘ ಕ್ಯಾಚ್ ಪಡೆದು ಕುಣಿದು ಕುಪ್ಪಳಿಸಿದರು.

ಅಂಬಟಿ ಆಟ–ಗಾಯ: ಬೆಳಗಾವಿ ಹುಡುಗ ರೋನಿತ್ ಮೋರೆ ಏಳನೇ ಓವರ್‌ನಲ್ಲಿ ತನ್ಮಯ್ ಅಗರವಾಲ್ ಮತ್ತು ಹತ್ತನೇ ಓವರ್‌ನಲ್ಲಿ ತಿಲಕ್ ವರ್ಮಾ ಅವರು ಆರಂಭದಲ್ಲಿಯೇ ಕೊಟ್ಟ ಪೆಟ್ಟಿನಿಂದ ಹೈದರಾಬಾದ್ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು.

ಈ ಹಂತದಲ್ಲಿ ಅಂಬಟಿ ಗಟ್ಟಿಯಾಗಿ ನಿಂತು ಆಡಿದರು. ಬ್ಯಾಟಿಂಗ್ ಮಾಡುವಾಗ ಮೊಣಕ್ಯೆಗೆ ಚೆಂಡು ಬಿದ್ದು ಗಾಯಗೊಂಡ ಅಂಬಟಿ ಪೆವಿಲಿಯನ್‌ಗೆ ಮರಳಿ ವಿಶ್ರಾಂತಿ ಪಡೆದರು. ಆದರೆ, ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮೂರು ಎಸೆತಗಳು ಉಳಿದಿದ್ದಾಗ ತಂಡವು 9 ವಿಕೆಟ್‌ ಕಳೆದುಕೊಂಡಿತ್ತು. ಅಂಬಟಿ ಕ್ರೀಸ್‌ಗೆ ಮರಳಿ ಆಡಿದರು. ತಂಡ ಆಲೌಟ್ ಆಗುವುದನ್ನು ತಪ್ಪಿಸಿದರು. ಆದರೆ ಅವರು ಫೀಲ್ಡಿಂಗ್‌ಗೆ ಇಳಿಯಲಿಲ್ಲ.

ಸಂಕ್ಷಿಪ್ತ ಸ್ಕೋರು:

ಗುಂಪು ‘ಎ’: ಹೈದರಾಬಾದ್: 50 ಓವರ್‌ಗಳಲ್ಲಿ 9ಕ್ಕೆ198 (ಆಕಾಶ್ ರೆಡ್ಡಿ 21, ಅಂಬಟಿ ರಾಯುಡು ಔಟಾಗದೆ 87, ಸಿ.ವಿ. ಮಿಲಿಂದ್ 36, ಅಭಿಮನ್ಯು ಮಿಥುನ್ 34ಕ್ಕೆ2, ಪ್ರಸಿದ್ಧ ಎಂ ಕೃಷ್ಣ 35ಕ್ಕೆ2, ರೋನಿತ್ ಮೋರೆ 31ಕ್ಕೆ2) ಕರ್ನಾಟಕ: 45.2 ಓವರ್‌ಗಳಲ್ಲಿ 177 (ದೇವದತ್ತ ಪಡಿಕ್ಕಲ್ 60, ಮನೀಷ್ ಪಾಂಡೆ 48, ಬಿ.ಆರ್. ಶರತ್ 18, ಅಭಿಮನ್ಯು ಮಿಥುನ್ 20, ಮೊಹಮ್ಮದ್ ಸಿರಾಜ್ 38ಕ್ಕೆ2, ಬಿ. ಸಂದೀಪ್ 35ಕ್ಕೆ4) ಫಲಿತಾಂಶ: ಹೈದರಾಬಾದ್ ತಂಡಕ್ಕೆ 21 ರನ್‌ಗಳಿಂದ ಜಯ ಮತ್ತು ನಾಲ್ಕು ಪಾಯಿಂಟ್ಸ್‌.

ಸೌರಾಷ್ಟ್ರ: 50 ಓವರ್‌ಗಳಲ್ಲಿ 9ಕ್ಕೆ245 (ಶೆಲ್ಡನ್ ಜಾಕ್ಸನ್ 35, ಸಮರ್ಥ್‌ ವ್ಯಾಸ್ 39, ವಿಶ್ವರಾಜ್ ಜಡೇಜ 25, ಅರ್ಪಿತ್ ವಸವದಾ 59, ಚಿರಾಗ್ ಜಾನಿ 40,ಶಾರ್ದೂಲ್ ಠಾಕೂರ್ 36ಕ್ಕೆ3, ಶಮ್ಸ್ ಮುಲಾನಿ 49ಕ್ಕೆ3), ಮುಂಬೈ: 48 ಓವರ್‌ಗಳಲ್ಲಿ 5ಕ್ಕೆ248 (ಆದಿತ್ಯ ತಾರೆ 29, ಶ್ರೇಯಸ್ ಅಯ್ಯರ್ 73, ಸೂರ್ಯಕುಮಾರ್ ಯಾದವ್ 85, ಶುಭಂ ರಾಂಜಣೆ ಔಟಾಗದೆ 45, ಖುಷಾಂಗ್ ಪಟೇಲ್ 33ಕ್ಕೆ2, ಧರ್ಮೇಂದ್ರಸಿಂಹ ಜಡೇಜ 39ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 5 ವಿಕೆಟ್‌ಗಳ ಜಯ ಮತ್ತು 4 ಪಾಯಿಂಟ್ಸ್.

ಇಂದಿನ ಪಂದ್ಯಗಳು (ಎ ಗುಂಪು)

ಕರ್ನಾಟಕ–ಛತ್ತೀಸಗಡ (ಚಿನ್ನಸ್ವಾಮಿ ಕ್ರೀಡಾಂಗಣ)

ಕೇರಳ–ಜಾರ್ಖಂಡ್ (ಜಸ್ಟ್ ಕ್ರಿಕೆಟ್ ಮೈದಾನ)

ಆಂಧ್ರ–ಸೌರಾಷ್ಟ್ರ (ಆಲೂರು 2)

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT